ತಾಳಿಕೋಟೆ: ಪರರ ಉಪಕಾರಕ್ಕಾಗಿ ನಂಬಿ ಹಳ್ಳ ಕೊಳ್ಳಗಳು ಹರಿಯುತ್ತವೆ. ಅವುಗಳಂತೆ ಸಮಾಜದಲ್ಲಿ ಜನಜಾಗೃತಿಗಾಗಿ ಅಭಿವೃದ್ಧಿ ಪಡಿಸುವ ಕುರಿತು ಅನೇಕ ಶರಣರು ಮಹಾತ್ಮರು ಜನ್ಮ ತಾಳಿದ್ದಾರೆ. ಅವರಲ್ಲಿ ಸಿದ್ಧರಾಮೇಶ್ವರರು ಒಬ್ಬರಾಗಿದ್ದರೆಂದು ಸಮಾಜ ಸೇವಕ ಶಾಂತಗೌಡ ಪಾಟೀಲ (ನಡಹಳ್ಳಿ) ಹೇಳಿದರು.
ಅಖೀಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಕ್ರಾಂತಿ ವತಿಯಿಂದ ವಿಠ್ಠಲ ಮಂದಿರದಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರರ 848ನೇ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲರೂ ಒಂದೇ ತಾಯಿ ಮಕ್ಕಳಂತೆ ನಾಡಿನಲ್ಲಿ ಬದುಕುತ್ತಿದ್ದೇವೆ. ಮನುಷ್ಯ ಹುಟ್ಟುತ್ತಾನೆ ಸಾಯುತ್ತಾನೆ ಎಂಬುದು ಗೊತ್ತಿದೆ. ಆದರೆ ಹುಟ್ಟು ಸಾವಿನ ನಡುವಿನ ಬದುಕಿನಲ್ಲಿ ಒಳ್ಳೆ ಕೆಲಸಗಳನ್ನು ಮಾಡಬೇಕೆಂದರು. ಶ್ರೀಮಂತಿಕೆ ಬಡತನವೆಂಬುದು ಶಾಶ್ವತವಲ್ಲ. ಶರಣರು ಹೇಳಿದಂತೆ ಎಲ್ಲರೂ ಒಂದೇ ತಾಯಿ ಮಕ್ಕಳೆಂಬ ಭಾವನೆಯಿಂದ ನಡೆದು ಕೊಳ್ಳಬೇಕು. ಸಮಾಜದಲ್ಲಿಯ ಮುಖಂಡರು ಬಡಜನರ ಬಗ್ಗೆ ಗಮನ ನೀಡಿ ಅವರಿಗೆ ನಿವೇಶನ ಹಾಗೂ ಮನೆಗಳನ್ನು ಕೊಡಿಸಲು ಮುಂದಾದರೆ ಸಮಾಜ ಬೆಳವಣಿಗೆಯಾಗಲು ಸಾಧ್ಯ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಬೇಕು. ಶಿಕ್ಷಣದಿಂದಲೇ ದೇಶ ಉದ್ಧಾರವಾಗಲು ಸಾಧ್ಯ ಎಂದ ಅವರು, ಬಡತನವಿದ್ದರೂ ಮಕ್ಕಳಿಗೆ ಶಿಕ್ಷಣ ನೀಡಬೇಕು. ಇಂತಹದಕ್ಕೆ ಒಳ್ಳೆ ಸಂಸ್ಕಾರವೆನ್ನಲಾಗುತ್ತದೆ ಎಂದರು.
ಗಜೇಂದ್ರಗಡದ ಸಾಹಿತಿ ಎಫ್.ಎಸ್. ಕರಿದುರ್ಗನ್ನವರ ಮಾತನಾಡಿ, ಸಿದ್ಧರಾಮೇಶ್ವರರು ಚಿಕ್ಕವರಿರುವಾಗಲೇ ಹೊಲದ ಕೆಲಸಕ್ಕೆ ಹೋಗುತ್ತಾರೆ. ಸ್ವಾಮಿ ರೂಪತಾಳಿದ ಭಗವಂತ ಭೇಟಿಯಾಗುತ್ತಾನೆ. ಸ್ವಾಮಿಗಳ ಆಸೆಯಂತೆ ಅವರು ಹೇಳಿದ್ದನ್ನು ಸಿದ್ಧರಾಮರು ತಂದು ಕೊಡುತ್ತಾರೆ. ಶ್ರೀಗಳಿಂದ ಮೆಚ್ಚುಗೆ ಪಡೆದ ನಂತರ ಶ್ರೀಶೈಲದಿಂದ ಸೊಲ್ಲಾಪುರಕ್ಕೆ ತೆರಳಿ ಚನ್ನಮಲ್ಲಿಕಾರ್ಜು ದೇವಾಲಯ ಕಟ್ಟಿಸುತ್ತಾರೆ.
ರೈತರಿಗಾಗಿ ಕೆರೆಗಳನ್ನು ಕಟ್ಟಿಸುತ್ತಾರೆ. ಬಸವ ತತ್ವ ಉಳಿಸುವ ಶ್ರಮಿಸಿದ್ದಾರೆ ಎಂದರು. ಭೋವಿ ಯುವ ವೇದಿಕೆ ಕ್ರಾಂತಿ ರಾಜ್ಯಾಧ್ಯಕ್ಷ ವೈ.ಕೊಟ್ರೇಶ ಮಾತನಾಡಿ, ಬಸವಣ್ಣನವರು, ಅಕ್ಕಮಹಾದೇವಿ, ಸಿದ್ಧಾರೂಡರು, 12ನೇ ಶತಮಾನದ ಶರಣರು ಒಳ್ಳೆ ಸಂಸ್ಕೃತಿ, ಸಂಸ್ಕಾರ ನೀಡಿದ್ದಾರೆ. 68 ಸಾವಿರ ವಚನಗಳನ್ನು ಬರೆದು ಎಲ್ಲರಿಗೂ ಮಾರ್ಗ ತೋರಿಸಿದ್ದಾರೆ. ಕಾರಣ ಸಿದ್ಧರಾಮೇಶ್ವರರ ಇತಿಹಾಸವನ್ನು ಎಲ್ಲರೂ ಓದಿ ತಿಳಿದುಕೊಳ್ಳಬೇಕೆಂದರು.
ಸ್ಥಳೀಯ ಭೋವಿ ಸಮಾಜದ ಅಧ್ಯಕ್ಷ ಹುಲಿಗೆಪ್ಪ ಕಟ್ಟಿಮನಿ ಮಾತನಾಡಿದರು. ಸಂಗಯ್ಯ ವಿರಕ್ತಮಠ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಸದಸ್ಯ ವಾಸುದೇವ ಹೆಬಸೂರ, ಫಾತಿಮಾ ಖಾಜಾಬಸರಿ, ಸಿದ್ದು ಚಿಂಚೋಳಿ, ನ್ಯಾಯವಾದಿ ಕಾರ್ತಿಕ ಕಟ್ಟಿಮನಿ, ಪತ್ರಕರ್ತ ಜಿ.ಟಿ. ಘೋರ್ಪಡೆ, ಸಂತೋಷ ಹಜೇರಿ, ಶಿವಶಂಕರ ಹಿರೇಮಠ,ಮಾರುತಿ ಬೇಕಿನಾಳ, ಭೀಮಣ್ಣ ವಡ್ಡರ, ಪ್ರಕಾಶ ಹಜೇರಿ, ನಾಗರಾಜ ಭೋವಿ, ದ್ಯಾವಪ್ಪ ಕಟ್ಟಿಮನಿ, ದೇವೇಂದ್ರ ಕೂಚಬಾಳ, ಫಯಾಜ್ ಉತ್ನಾಳ, ರಿಯಾಜ್ ಡೋಣಿ, ಲಾಳೇಮಶಾಕ ಖಾಜಾಬಸರಿ, ಜಿಲ್ಲಾಧ್ಯಕ್ಷ ದೇವು ಕೂಚಬಾಳ,
ಹನುಮಂತ ಕಟ್ಟಿಮನಿ ನಿರೂಪಿಸಿದರು.