Advertisement
ಸತತವಾಗಿ ಆವರಿಸಿದ ಬರಗಾಲದಿಂದ ತತ್ತರಿಸಿ ಹೋಗಿರುವ ಈ ಭಾಗದಲ್ಲಿ ಅಂತರ್ಜಲ ಕುಸಿತದಿಂದ ದಿನೇ ದಿನೇ ಬೋರ್‌ವೆಲ್ಗಳು ಬತ್ತಿ ನೀರು ಸ್ಥಗಿತಗೊಳ್ಳುತ್ತ ಸಾಗಿದೆ. ಅಲ್ಲದೇ ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿರುವ ಜನ ಜಾನುವಾರುಗಳು ದಾಹ ಇಂಗಿಸಿಕೊಳ್ಳಲು ನೀರಿನ ಮೂಲ ಹುಡಕಿಕೊಂಡು ಹೋಗುವ ಸಂದರ್ಭ ಒದಗಿ ಬಂದಿದೆ.
Related Articles
Advertisement
ಕೊಡಗಾನೂರ ಗ್ರಾಮದಲ್ಲಿ ಕುಡಿಯುವ ನೀರಿನ ಮೂಲಗಳಿದ್ದರೂ ಅಧಿಕಾರಿ ಬೇಜವಾಬ್ದಾರಿತನಕ್ಕೆ ಹನಿ ನೀರಿಗೂ ಜನತೆ ಪರದಾಡುವಂತಾಗಿದೆ. ಕೊಡಗಾನೂರ ಗ್ರಾಮ ತಾಲೂಕಿನ ದೊಡ್ಡ ಗ್ರಾಮಗಳ ಸಾಲಿನಲ್ಲಿದ್ದು 5 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ.
ಏರ್‌ಟ್ಯಾಂಕ್‌ಗೆ ಗ್ರಾಮದ ಹೊರ ವಲಯದಲ್ಲಿರುವ ಸರ್ಕಾರಿ ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ದಿನ ಕಳೆದಂತೆ ಬಡಾವಣೆಗಳಿಗೆ ನೀರು ಸರಬರಾಜಿಗೆ ಜೋಡಿಸಲಾದ ಪೈಪುಗಳು ಕಳಪೆಯಾಗಿದ್ದು ಎಲ್ಲೆಂದರಲ್ಲಿ ಒಡೆದು ಹೋಗಿವೆ. ಮರು ಪೈಪ್‌ಲೈನ್ ಕಾರ್ಯ ಕೈಗೊಳ್ಳುವಲ್ಲಿ ಗ್ರಾಪಂ ನಿರ್ಲಕ್ಷ್ಯ ವಹಿಸಿದ್ದಲ್ಲದೇ ಪೈಪುಗಳು, ವಾಲ್ಗಳು ಒಡೆದಿವೆ. ಪೈಪ್‌ಲೈನ್ ಕಾರ್ಯಕ್ಕೆ ಶೀಘ್ರ ಟೆಂಡರ್ ಕರೀತಿವಿ ಎಂಬ ಪ್ರತಿ ವರ್ಷ ತುಂಟ ನೆಪದೊಂದಿಗೆ ಮುಂದೆ ದೂಡುತ್ತಾ ಸಾಗಿದ್ದಾರೆಂದು ಗ್ರಾಮಸ್ಥರರು ಆರೋಪಿಸಿದ್ದಾರೆ.
ಕೊಡಗಾನೂರ ಗ್ರಾಮದ ಪ್ಲಾಟ್ ಬಡಾವಣೆಯಲ್ಲಿಯ ಜನತೆ ಹನಿ ನೀರಿಗೂ ಪರಿತಪಿಸುವಂತಾಗಿದೆ. ಈ ಬಡಾವಣೆಯಲ್ಲಿ ಕುಡಿಯುವ ನೀರಿನ ಮೂಲಗಳೇ ಇಲ್ಲದ್ದರಿಂದ ಸುಮಾರು 3 ಕಿ.ಮೀ. ದೂರದ ಕಾರಗನೂರ ಗ್ರಾಮದ ಹೊರ ಹೊಲಯದಲ್ಲಿರುವ ಬಾವಿಯಿಂದ ನೀರು ಹೊತ್ತು ತರುವಂತಾಗಿದೆ. ಕಾರನೂರ, ತುಂಬಗಿ, ಬೊಮ್ಮನಹಳ್ಳಿ, ಪತ್ತೇಪುರ, ಫೀರಾಪುರ ಗ್ರಾಮಗಳನ್ನೊಳಗೊಂಡಂತೆ ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಈ ವಿಷಯ ಕುರಿತು ತಾಲೂಕಾಡಳಿತದಿಂದ ಹಿಡಿದು ಜಿಲ್ಲಾಡಳಿತದವರೆಗೆ ಗ್ರಾಮಸ್ಥರರು, ಜನಪ್ರತಿನಿಧಿಗಳು ಸಾಕಷ್ಟು ಒತ್ತಡಗಳನ್ನು ಹಾಕುತ್ತ್ತ ಬಂದರೂ ಅಧಿಕಾರಿಗಳು ಮಾತ್ರ ಚುನಾವಣೆ ನೀತಿ ಸಂಹಿತೆ ಇದೆ ಏನೂ ಮಾಡಕ್ಕಾಗಲ್ಲಾವೆಂಬ ಕುಂಟು ನೆಪದೊಂದಿಗೆ ಜಾರಿಕೊಳ್ಳುತ್ತಿದ್ದಾರೆ.
ಫೀರಾಪುರ ಗ್ರಾಮಕ್ಕೆ 2 ಟ್ಯಾಂಕರ್, ಪತ್ತೇಪುರಕ್ಕೆ 2 ಟ್ಯಾಂಕರ್, ಗುತ್ತಿಹಾಳ 1, ತುಂಬಗಿ 1 ಟ್ಯಾಂಕರ್ ನೀರನ್ನು ಸರಬರಾಜು ಮಾಡಲು ಅನುಮತಿ ಇದ್ದರೂ ಕೂಡಾ ಆಯಾ ಗ್ರಾಮಗಳಿಗೆ ಸಂಬಂಧಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನೀರು ಸರಬರಾಜಿಗೆ ನೀತಿ ಸಂಹಿತೆಯ ನೆಪದ ಮೇಲೆ ತಾತ್ಕಾಲಿಕ ತಡೆಯೊಡ್ಡಿದ್ದಾರೆ. ಇದರಿಂದ ಇನ್ನಷ್ಟು ನೀರಿನ ಸಮಸ್ಯೆ ಉದ್ಬವವಾಗುತ್ತಿದೆ ಎಂದು ಜನರು ದೂರುತ್ತಿದ್ದಾರೆ.
ಡಿಸಿ-ಶಾಸಕರ ಸೂಚನೆಗಿಲ್ಲ ಕಿಮ್ಮತ್ತು: ಸುಮಾರು 10ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರೊಂದಿಗೆ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಅವರು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಚರ್ಚಿಸುವ ಸಮಯದಲ್ಲಿ ಆಗಮಿಸಿದ್ದ ಸಿಇಒ ವಿಕಾಸ್ ಸುರಳಕರ ಅವರಿಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ವಿವರಿಸಿದ್ದರು.
ಆಗ ಸುರಳಕರ ಅವರು ತಹಶೀಲ್ದಾರ್, ತಾಪಂ ಇಒ, ಜಿಪಂ ಸಹಾಯಕ ಕಾರ್ಯ ನಿರ್ವಾಕ ಅಭಿಯಂತರರು ಖುದ್ದಾಗಿ ಸ್ಥಳ ಪರಿಶೀಲಸಿ ವರದಿ ನೀಡಿ ಮತ್ತು ಕೂಡಲೇ ಟ್ಯಾಂಕರ್‌ನಿಂದ ನೀರು ಕೊಡಲು ಪ್ರಾರಂಭಿಸಿ ಎಂದು ಸೂಚಿಸಿ ವಾರ ಕಳೆಯುತ್ತ ಬಂದರೂ ಮಾತ್ರ ಕ್ರಮಕ್ಕೆ ಮುಂದಾಗಿಲ್ಲ.
ದೇವರಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳಲ್ಲಿಯ ನೀರಿಗೆ ಅಲೆದಾಡುವಂತಾಗಿದೆ. ಈ ಕುರಿತು ಗ್ರಾಪಂ ಮತ್ತು ತಹಶೀಲ್ದಾರ್‌ಗೆ ಕಳೆದ ವರ್ಷದಿಂದ ಇಲ್ಲಿವರೆಗೂ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.•ಸಂಗನಗೌಡ ಹೆಗರಡ್ಡಿ,
ಭಂಟನೂರ ಗ್ರಾಮದ ಮುಖಂಡ ಯಾವ ಗ್ರಾಮಗಳಲ್ಲೂ ನೀರಿನ ಸಮಸ್ಯೆಯಿಲ್ಲ. ಸುಮ್ನೇ ದೊಡ್ಡ ಸಮಸ್ಯೆ ಎಂದು ಬಿಂಬಿಸಿದ್ದಾರೆ. ನೀರು ಕೊಡಿ ಎನ್ನುವುದಕ್ಕಿಂತ ಟ್ಯಾಂಕರ್ ಮೂಲಕ ನೀರು ಕೊಡಿ ಎನ್ನುತ್ತಾರೆ. ಈ ಹಿಂದೆ ಸಾಕಷ್ಟು ಬೋಗಸ್ ಟ್ಯಾಂಕರ್ ಸೃಷ್ಟಿ ಮಾಡಿದ್ದಾರೆ. ಈ ಕಾರಣದಿಂದ ಟ್ಯಾಂಕರ್ ಮೂಲಕ ನೀರು ಕೊಟ್ಟಿಲ್ಲ. •ನಿಂಗಪ್ಪ ಬಿರಾದಾರ, ತಹಶೀಲ್ದಾರ್ ಜಿ.ಟಿ. ಘೋರ್ಪಡೆ