ತಾಳಿಕೋಟೆ: ನಾಗೂರ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಬುಗಿಲೆದ್ದಿದ್ದು ಗ್ರಾಮಸ್ಥರರು ತಹಶೀಲ್ದಾರ್ ಕಚೇರಿ ಮುಂದೆ ಖಾಲಿ ಕೊಡಗಳೊಂದಿಗೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ನಾಗೂರ ಗ್ರಾಮಕ್ಕೆ ಬಹುಹಳ್ಳಿ ಕುಡಿಯುವ ಯೋಜನೆಯ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಈ ಯೋಜನೆಗೆ ಸಂಬಂಧಿಸಿ ಕೆರೆಯಲ್ಲಿ ಸಂಗ್ರಹಿಸಿದ ನೀರೆಲ್ಲವೂ ಕಲುಷಿತಗೊಂಡಿದೆ. ಇಂತಹ ನೀರನ್ನೇ ವಾರಕ್ಕೊಮ್ಮೆ ಸರಬರಾಜು ಮಾಡಲಾಗುತ್ತಿದೆ. ಈ ನೀರು ವಾಸನೆ ಬರುತ್ತಿದ್ದು ಇಂತಹ ನೀರಿನ ಸೇವನೆಯಿಂದ ಗ್ರಾಮಸ್ಥರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದೆ.
ಗ್ರಾಮದಲ್ಲಿ ಒಂದೂ ಬೋರ್‌ವೆಲ್ ಕೊರೆಸಿಲ್ಲ. ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಜಾನುವಾರುಗಳು ಹನಿ ನೀರಿಗೂ ಪರದಾಡುವಂತಾಗಿದೆ. ಗ್ರಾಮದಲ್ಲಿರುವ ಬಾವಿಗಳೆಲ್ಲವೂ ಬತ್ತಿ ಹೋಗಿವೆ. ನೀರು ಹುಡುಕಿಕೊಂಡು ಸುಮಾರು 4 ಕಿ.ಮೀ. ದೂರದ ಬಪ್ಪರಗಿ ಗ್ರಾಮಕ್ಕೆ ಎತ್ತಿನ ಬಂಡಿಯಲ್ಲಿ, ಸೈಕಲ್ ಮೇಲೆ ಹೋಗಿ ತರುತ್ತಿದ್ದೇವೆ. ನಮಗೆ ಬಂದಿರುವ ಕುಡಿಯುವ ನೀರಿನ ಕಷ್ಟಕ್ಕೆ ಯಾವೊಬ್ಬ ಅಧಿಕಾರಿಯೂ ಸ್ಪಂದಿಸುತ್ತಿಲ್ಲ. ನೀರಿನ ಸಮಸ್ಯೆ ಕುರಿತು ಸಾಕಷ್ಟು ಬಾರಿ ಜಿಪಂ ಸಿಇಒ, ತಾಪಂ ಇಒಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ನಿಂಗಪ್ಪ ಬಿರಾದಾರ ಅವರು ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಯನ್ನು ಆಲಿಸಿದರಲ್ಲದೇ ಸ್ಥಳದಲ್ಲಿಯೇ ದೂರವಾಣಿ ಮೂಲಕ ಮೂಕಿಹಾಳ ಪಿಡಿಒ ಅವರನ್ನು ಸಂಪರ್ಕಿಸಿ ನಾಗೂರ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕೆಂದು ಸೂಚಿಸಿದರು. ನಂತರ ಗ್ರಾಮಸ್ಥರೊಂದಿಗೆ ಮಾತನಾಡಿ ಗ್ರಾಮಕ್ಕೆ ನಾನೇ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಗ್ರಾಮಸ್ಥರರಿಗೆ ಭರವಸೆ ನೀಡಿದರು.
ತಹಶೀಲ್ದಾರ್ ಭರವಸೆ ಮೆರೆಗೆ ಗ್ರಾಮಸ್ಥರರು ಪ್ರತಿಭಟನೆ ಕೈ ಬಿಟ್ಟರು. ನಾಗೂರ ಗ್ರಾಮದ ಮುಖಂಡರಾದ ಶಿವರಾಜ್ ಗುಂಡಕನಾಳ, ಜೆಟ್ಟೆಪ್ಪ ಭಂಟನೂರ, ಶಿವರಾಯ ಮುದ್ನೂರ, ಮಲ್ಲಪ್ಪ ಬಿರಾದಾರ, ಮಾಳಪ್ಪ ಬಿರಾದಾರ, ಹನುಮಂತ್ರಾಯ ಕೆಂಭಾವಿ, ಮಲ್ಲಯ್ಯ ಹಿರೇಮಠ, ಆನಂದ ಹೂಗಾರ, ಶರಣು ಗುಂಡಕನಾಳ, ಶಿವಪ್ಪ ಹೂಗಾರ ಇದ್ದರು.