ತಾಳಿಕೋಟೆ: ಸರ್ಕಾರದಿಂದ ಎಲ್ಲ ರೀತಿಯಿಂದಲೂ ಸೌಲತ್ತುಗಳನ್ನು ಪಡೆದುಕೊಂಡಿರುವ ತಾವುಗಳು ಸಾರ್ವಜನಿಕರ ಸಮಸ್ಯೆಗಳಿಗೆ ಮತ್ತು ತೊಂದರೆಗಳಿಗೆ ಕೂಡಲೇ ಸ್ಪಂದಿಸುವಂತಹ ಕಾರ್ಯ ಮಾಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಪೊಲೀಸ್ ಸಿಬ್ಬಂದಿಗೆ ಹೇಳಿದರು.
ಪಟ್ಟಣದ ಪೊಲೀಸ್‌ಠಾಣೆಗೆ ಪರಿಶೀಲನೆ ನಿಮಿತ್ತ ಆಗಮಿಸಿದ್ದ ಅವರು, ಪೊಲೀಸ್ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು. ಪೊಲೀಸ್ ಸಿಬ್ಬಂದಿಗಳು ಮೊದಲು ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು. ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ತಿಂಗಳದಲ್ಲಿ 2 ದಿನ ಸರ್ಕಾರದಿಂದ ರಜೆ ಪಡೆಯಬಹುದಾಗಿದೆ. ತಿಂಗಳದ ಅವಧಿಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ರಜೆಯನ್ನು ಪಡೆದುಕೊಳ್ಳಿ. ಏನಾದರೂ ಸಮಸ್ಯೆಗಳಿದ್ದರೂ ನೇರವಾಗಿ ತಮ್ಮನ್ನು ಸಂಪರ್ಕಿಸಿ ಎಂದರು.
ಇದೇ ಸಮಯದಲ್ಲಿ ಪೊಲೀಸ್ ಸಿಬ್ಬಂದಿ, ವಸತಿ ಗೃಹ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಅದರ ದುರಸ್ತಿ ಮಾಡಿದರೆ ಎಲ್ಲರಿಗೂ ಒಳಿತಾಗಲಿದೆ ಎಂದರು. ಆಗ ಖುದ್ದಾಗಿ ಎಸ್‌ಪಿ ಪ್ರಕಾಶ ನಿಕ್ಕಂ ಅವರು ವಸತಿ ಗೃಹಗಳ ಪರಿಶೀಲನೆಗೆ ತೆರಳಿದರು. ವಸತಿ ಗೃಹಗಳ ದುರಸ್ತಿಗೆ ಅಂದಾಜು ಪತ್ರಿಕೆ ಸಿದ್ಧಪಡಿಸಿ ಕಳುಹಿಸಿ ಅವುಗಳ ದುರಸ್ತಿಗೆ ತಗಲುವ ಹಣವನ್ನು ಬಿಡುಗಡೆ ಮಾಡಲಾಗುವುದು. ಸಿಬ್ಬಂದಿಗಳ ಸಂಖ್ಯೆಗೆ ಅನುಗುಣವಾಗಿ ನೂತನವಾಗಿ ವಸತಿ ಗೃಹಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಕೊಡುತ್ತೇನೆಂದರು.
ಸ್ಥಳದಲ್ಲಿದ್ದ ಡಿಎಸ್‌ಪಿ ಮಹೇಶ್ವರಗೌಡ, ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸೈ ಗೋವಿಂದೇಗೌಡ ಪಾಟೀಲ ಅವರು ವಸತಿ ಗೃಹಗಳು ನಿರ್ಮಾಣಗೊಂಡು ಬಹಳ ವರ್ಷಗಳು ಕಳೆದಿವೆ. ಹೀಗಾಗಿ ದುರಸ್ತಿಗೆ ಬಂದಿವೆ. ಕೂಡಲೇ ಅಂದಾಜು ಪತ್ರಿಕೆ ಸಿದ್ಧಪಡಿಸಿ ಕಳುಹಿಸಿಕೊಡುತ್ತೇವೆಂದರು.
ಪೊಲೀಸ್ ಠಾಣೆಯ ಎಎಸೈ ಆರ್.ಎಸ್.ಬಂಗಿ, ಕೆ.ಬಿ.ರಡ್ಡಿ, ಬಿ.ಜಿ.ಬಲಕಲ್ಲ, ಮಹೇಶ ದೊಡಮನಿ, ಎಂ.ಎಲ್. ಪಟ್ಟೇದ, ಸಂಜೀವ ಜಾಧವ, ಮಲ್ಲೇಶ ಅವಟಿ, ಒಡೆಯರ, ಎನ್.ಎ. ನಾಡಗೌಡ, ಸಿಬ್ಬಂದಿ ವರ್ಗದವರು ಇದ್ದರು.
ತಾಳಿಕೋಟೆ: ಪೊಲೀಸ್ ಸಿಬ್ಬಂದಿಗಳ ವಸತಿ ಗೃಹಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಪರಿಶೀಲಿಸಿದರು.