Advertisement
ಐದಾರು ವರ್ಷಗಳಿಂದ ಅಫ್ಘಾನಿಸ್ಥಾನದಲ್ಲಿ ಅಮೆರಿಕ ಸೇನಾ ನೆಲೆಯಲ್ಲಿ ಕೆಲಸ ಮಾಡುತ್ತಿದ್ದ, 3 ವಾರಗಳ ಹಿಂದೆಯಷ್ಟೇ ತಾಯ್ನಾಡಿಗೆ ಮರಳಿದ್ದ ಬೆಳ್ತಂಗಡಿಯ ಶಿಬರಾಜೆ ಗುತ್ತುವಿನ ಗೋಪಾಲಕೃಷ್ಣ ಗೌಡ ಅವರ ಅನುಭವದ ಮಾತು ಇದು.
Related Articles
Advertisement
“ನಾನು ಕೆಲಸ ಮಾಡುತ್ತಿದ್ದ ಬಾಗ್ರಂ ಪ್ರದೇಶ ಅಷ್ಟೇನು ಸುರಕ್ಷಿತವಾಗಿರಲಿಲ್ಲ. ನಾನು ಮಿಲಿಟರಿ ಬೇಸ್ ಬಿಟ್ಟು ಹೊರಗಡೆ ಕೂಡ ಕೆಲಸ ನಿರ್ವಹಿಸಬೇಕಿತ್ತು. ಸಾಮಾನ್ಯವಾಗಿ ಅಲ್ಲೆಲ್ಲ ಭಯದ ವಾತಾವರಣ ಇತ್ತು. ಆದರೆ ಅಮೆರಿಕ ಮತ್ತು ತಾಲಿಬಾನಿಗರ ನಡುವಿನ ಒಪ್ಪಂದದಂತೆ ಅವರು ನಮ್ಮ ಮೇಲೆ ದಾಳಿ ನಡೆಸುವಂತಿಲ್ಲ ಎಂಬ ಷರತ್ತು ಇತ್ತು. ಆದರೂ ಕೆಲವೊಮ್ಮೆ ಬಳಿಯಲ್ಲೇ ಗುಂಡಿನ ದಾಳಿ, ರಾಕೆಟ್ ದಾಳಿ ನಡೆದಿದ್ದುಂಟು. 2009ರಲ್ಲಿಯೂ ಇರಾಕ್‌ನಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ಅಫ್ಘಾನಿಸ್ಥಾನಕ್ಕೆ ವರ್ಗ ಮಾಡಲಾಗಿತ್ತು. ಆ ವೇಳೆ ಬಾಗ್ರಂ ಜೈಲಿನ ಪ್ರೊಜೆಕ್ಟ್ ನೆಟ್‌ವರ್ಕಿಂಗ್‌ನಲ್ಲಿಯೂ ಕೆಲಸ ಮಾಡಿದ್ದೆ. ಇದೀಗ ಅಪ್ಘಾನಿಸ್ಥಾನ ವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗರು ಬಾಗ್ರಂ ಎಂಬ ಅದೇ ಜೈಲಿನಲ್ಲಿ ಒತ್ತೆಯಿದ್ದ ಉಗ್ರರನ್ನು ಬಿಡುಗಡೆ ಮಾಡಿದ್ದಾರೆ’.
“ನಾನು ಅಫ್ಘಾನಿಸ್ಥಾನದಿಂದ ಭಾರತಕ್ಕೆ ಬರುವ ವೇಳೆ ಲಕ್ಷಾಂತರ ಅಮೆರಿಕ ಸೈನಿಕರು ಸ್ವದೇಶಕ್ಕೆ ತೆರಳಿದ್ದರು. ಆದರೆ ಅಲ್ಲಿನ ರಾಯಭಾರ ಕಚೇರಿ ಸಿಬಂದಿ ರಕ್ಷಣೆಗೆಂದು ಸುಮಾರು 1,000 ಸೈನಿಕರು ಇದ್ದರು. ಕಳೆದ ತಿಂಗಳು ಅಫ್ಘಾನಿಸ್ಥಾನದಿಂದ ಊರಿಗೆ ಹೊರಡುವಾಗ ನನಗೆ ಕಾಬೂಲ್ ಏರ್‌ಪೋರ್ಟ್ ವರೆಗೆ ಸೈನಿಕರ ರಕ್ಷಣೆ ಇತ್ತು. ಕಾಬೂಲ್ ವಿಮಾನ ನಿಲ್ದಾಣಕ್ಕೆ ರಸ್ತೆ ಮೂಲಕ ಬಂದು ಅಲ್ಲಿಂದ ವಿಮಾನದಲ್ಲಿ ದುಬಾೖ ಮೂಲಕ ಭಾರತಕ್ಕೆ ವಾಪಸಾಗಿದ್ದೆ’ ಎನ್ನುತ್ತಾರೆ.
ಅದೇ ವಿಮಾನ ನಿಲ್ದಾಣ ! :
“ಹೌದು… ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಾಬೂಲ್ ವಿಮಾನ ನಿಲ್ದಾಣ ವೀಡಿಯೋ ವೈರಲ್ ಆಗುತ್ತಿದೆ. ಅಫ್ಘಾನಿಸ್ಥಾನದಿಂದ ಅಲ್ಲಿನ ಮಂದಿ ವಿಮಾನಕ್ಕಾಗಿ ಓಡೋಡಿ ಬರುತ್ತಿರುವುದು, ವಿಮಾನ ಏರಲು ಹರ ಸಾಹಸಪಡುತ್ತಿರುವ ದೃಶ್ಯ ನೋಡಿರಬಹುದು. ಎರಡು ವಾರಗಳ ಹಿಂದೆ ನಾನು ಅದೇ ನಿಲ್ದಾಣದ ಮೂಲಕ ದುಬಾೖ ವಿಮಾನ ಏರಿದ್ದೆ. ಅಲ್ಲಿನ ಸದ್ಯದ ಪರಿಸ್ಥಿತಿ ನೋಡುವಾಗ ನಿಜಕ್ಕೂ ಭಯದ ಜತೆಗೆ ಅಲ್ಲಿನ ಜನರ ಪರಿಸ್ಥಿತಿ ನೋಡಿ ಬೇಸರವೂ ಆಗುತ್ತಿದೆ’ ಎಂದು ಹೇಳುತ್ತಾರೆ ಗೋಪಾಲಕೃಷ್ಣ.
ನಾವಿದ್ದ ಪ್ರದೇಶವೀಗ ತಾಲಿಬಾನ್ ಪಾಲು! :
ನನ್ನ ಜತೆಗೆ ಅನೇಕ ಮಂದಿ ಕೆಲಸ ನಿರ್ವಹಿಸುತ್ತಿದ್ದರು. 250ಕ್ಕೂ ಹೆಚ್ಚು ಮಂದಿ ಸೈನಿಕರ ರಕ್ಷಣೆ ಇತ್ತು. 100ಕ್ಕೂ ಹೆಚ್ಚು ಲ್ಯಾಪ್‌ಟಾಪ್ ಸೇರಿದಂತೆ ಐಟಿಗೆ ಸಂಬಂಧಪಟ್ಟ ಉಪಕರಣಗಳಿದ್ದವು. ನಾವು ಬರುವಾಗ ಬಹುತೇಕ ಉಪಕರಣಗಳನ್ನು ಅಲ್ಲೇ ಬಿಟ್ಟು ಬಂದಿದ್ದೆವು. ಅಲ್ಲಿಗೆ ಈಗ ತಾಲಿಬಾನಿಗರು ನುಗ್ಗಿದ್ದು ಎಲ್ಲ ಹಾಳುಗೆಡವಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ ಎನ್ನುತ್ತಾರೆ ಗೋಪಾಲಕೃಷ್ಣ ಗೌಡ.
ಹೀಗಾಗುತ್ತದೆ ಅಂದುಕೊಂಡಿರಲಿಲ್ಲ :
ಉಜಿರೆ ಎಸ್‌ಡಿಎಂ ಕಾಲೇಜಿನ ಹಳೆವಿದ್ಯಾರ್ಥಿ ಜಿನಿಲ್ ಜಾನ್ ಅಫ್ಘಾನ್‌ನಲ್ಲಿ ಅಮೆರಿಕ ಸೇನಾ ನೆಲೆಯ ಐಟಿ ವಿಭಾಗದಲ್ಲಿ 10 ವರ್ಷ ಕಾರ್ಯ ನಿರ್ವಹಿಸಿದ್ದರು.
“ಜೂನ್‌ನಲ್ಲಿ ಭಾರತಕ್ಕೆ ಮರಳಿದ್ದು, ಮುಂದೊಂದು ದಿನ ಹೀಗಾದೀತು ಎಂದುಕೊಂಡಿರಲಿಲ್ಲ. ಅಲ್ಲಿ ಭಾರತದ ಅನೇಕ ಮಂದಿ ಕೆಲಸ ನಿರ್ವಹಿಸಿದ್ದಾರೆ. ನಮ್ಮ ರಾಜ್ಯದವರೊಬ್ಬರು ಭಾರತಕ್ಕೆ ಹಿಂದಿರುಗುವ ಹಿಂದಿನ ದಿನ ತಾಲಿಬಾನಿಗಳಿಂದ ಹತ್ಯೆಗೀಡಾಗಿದ್ದರು. ಇಂತಹ ಅಟ್ಟಹಾಸವನ್ನು ಅನೇಕ ಬಾರಿ ನೋಡಿದ್ದೆ’ ಎನ್ನುತ್ತಾರೆ ಜಿನಿಲ್.
– ನವೀನ್ ಭಟ್ ಇಳಂತಿಲ