ಅಫ್ಘಾನಿಸ್ಥಾನದಲ್ಲಿ ಬದುಕು ನರಕ ಸದೃಶವಾಗುತ್ತಿದೆ. ಯುದ್ಧ ಗೆದ್ದ ಉನ್ಮಾದತೆ, ಅಹಂಕಾರಗಳಿಂದ ಅಬ್ಬರಿಸುತ್ತಿರುವ ತಾಲಿಬಾನಿ ಉಗ್ರರು, ಸಾವಿನ ವ್ಯಾಪಾರಿಗಳಂತೆ ವರ್ತಿಸಲಾರಂಭಿಸಿದ್ದಾರೆ. ಅರಳುವ ಹೂಗಳ ಮೇಲೆ ಕೆಂಡದ ಮಳೆ ಸುರಿದಂತೆ ಮಹಿಳೆಯ,ಮಕ್ಕಳು, ಮುದುಕರೆನ್ನದೆ ಎಲ್ಲರನ್ನೂ ನಿರ್ದಾಕ್ಷಿಣ್ಯವಾಗಿ ದಮನ ಮಾಡಲಾಗುತ್ತಿದೆ. ಸೊಲ್ಲೆ ತ್ತಲೂ ಅವಕಾಶವಿಲ್ಲದಂತೆ ಹತ್ತಿಕ್ಕಲಾಗುತ್ತಿದೆ. ಪ್ರಾರ್ಥನೆಗೆ ಎಣೆಯಿಲ್ಲ, ಕಂಬನಿಗೆ ಕೊನೆಯಿಲ್ಲ ಎಂಬಂತಾಗಿದೆ ಅಫ್ಘಾನ್ ಜನತೆಯ ಪರಿಸ್ಥಿತಿ.
ಬಡಿಸಿದ ಊಟ ಚೆನ್ನಾಗಿಲ್ಲಎಂದು ಬೆಂಕಿ ಹಚ್ಚಿ ಕೊಂದರು :
ಅಫ್ಘಾನ್‌ನ ಉತ್ತರ ಭಾಗದಲ್ಲಿ ತಾಲಿಬಾನಿಗರಿಗೆ ಬಡಿಸಿದ ಅಡುಗೆ ರುಚಿಯಾಗಿರಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳನ್ನು ಬೆಂಕಿ ಹಚ್ಚಿ ಕೊಲ್ಲಲಾಗಿದೆ. ಹೀಗೆಂದು ಅಫ್ಘಾನ್‌ನಿಂದ ತಪ್ಪಿಸಿಕೊಂಡು ಅಮೆರಿಕ ತಲುಪಿರುವ ವಕೀಲೆ ನಜ್ಲಾ ಅಯೂಬಿ ಹೇಳಿದ್ದಾರೆ. ಉಗ್ರರು ತಮಗೆ ಆಹಾರ ಬೇಯಿಸಿಕೊಡುವಂತೆ ಸ್ಥಳೀಯರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮೊನ್ನೆ ತಾನೇ ಅಡುಗೆ ಚೆನ್ನಾಗಿರಲಿಲ್ಲ ಎಂದು ಮಹಿಳೆಯೊಬ್ಬಳ ಸಜೀವ ದಹನ ಮಾಡಿದ್ದಾರೆ. ಜತೆಗೆ ಕೆಲವು ಯುವತಿಯರನ್ನು ಶವಪೆಟ್ಟಿಗೆಯಲ್ಲಿಟ್ಟು ವಿದೇಶಗಳಿಗೆ ಸಾಗಿಸಲಾಗುತ್ತಿದೆ. ಅಲ್ಲಿ ಅವರನ್ನು ಲೈಂಗಿಕ ಜೀತದಾಳುಗಳಾಗಿ ಮಾರಾಟ ಮಾಡಲಾಗುತ್ತದೆ ಎಂದೂ ಅಯೂಬಿ ಮಾಹಿತಿ ನೀಡಿದ್ದಾರೆ.
ಕನಸುಗಳ ಸೌಧವೇ ಕುಸಿದು ಬಿದ್ದಿದೆ: ಶಿಕ್ಷಕಿಯ ಕಣ್ಣೀರು :
“ನಾವು ಮನೆಗಳಲ್ಲೇ ಬಂಧಿಯಾಗಿದ್ದೇವೆ. ಹೊರಗೆ ಹೋಗುವಂತಿಲ್ಲ. ಬ್ಯಾಂಕ್, ಆಸ್ಪತ್ರೆ, ವಿವಿಗಳು, ಶಾಲೆಗಳು ಎಲ್ಲವೂ ಮುಚ್ಚಿದ್ದು ನಮಗೆ ಕೈದಿಗಳಂಥ ಪರಿಸ್ಥಿತಿ ಬಂದೊದಗಿದೆ’ ಎನ್ನುತ್ತಾರೆ ಪ್ರಸ್ತುತ ಕಾಬೂಲ್‌ನಲ್ಲಿ ಅವಿತಿರುವ ಶಿಕ್ಷಕಿ. ನನ್ನೆಲ್ಲ ಗುರಿ, ಕನಸುಗಳು, ಆಕಾಂಕ್ಷೆಗಳ ಸೌಧವೇ ಕುಸಿದುಬಿದ್ದಿದೆ. ಯಾರಾದರೂ ಸಹಾಯ ಮಾಡಿದರೆ ಇಲ್ಲಿಂದ ಹೊರಹೋಗಲು ಬಯಸುತ್ತೇನೆ ಎಂದು ಕಣ್ಣೀರಿಡುತ್ತಾರೆ ಆ ಶಿಕ್ಷಕಿ.
ಆಹಾರವೂ ಇಲ್ಲ, ಹಣವೂ ಇಲ್ಲ ತೀವ್ರಗೊಂಡ ಹತಾಶೆ, ಅಸಹನೆ :
ದೇಶವು ತಾಲಿಬಾನ್ ವಶವಾದಾಗಿನಿಂದಲೂ ಮನೆಗಳಿಂದ ಹೊರಬರಲು ಹೆದರುತ್ತಿರುವ ಜನರಿಗೆ ತೀವ್ರ ಆಹಾರದ ಸಮಸ್ಯೆ ಎದುರಾಗಿದೆ. ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ. ಸಂಗ್ರಹಿಸಿಟ್ಟಿದ್ದ ಅಷ್ಟಿಷ್ಟು ಆಹಾರ ಸಾಮಗ್ರಿಗಳು ಖಾಲಿಯಾಗುತ್ತಿವೆ. ಮಕ್ಕಳಿಗೂ ಹೊಟ್ಟೆಗೆ ಹಿಟ್ಟಿಲ್ಲ. ಅಂಗಡಿ ಮುಂಗಟ್ಟುಗಳಿಗೆಲ್ಲ ಬೀಗ ಜಡಿಯಲಾಗಿದೆ. ಸತತ 7 ದಿನಗಳಿಂದ ಬ್ಯಾಂಕ್‌ಗಳು, ಎಟಿಎಂಗಳು ಮುಚ್ಚಿರುವ ಕಾರಣ, ಹಣವನ್ನು ಡ್ರಾ ಮಾಡಿ ತರಲೂ ಸಾಧ್ಯವಾಗುತ್ತಿಲ್ಲ. ದಿನ ಕಳೆದಂತೆ ನಮ್ಮಲ್ಲಿ ಅಸಹನೆ, ಹತಾಶೆ ತೀವ್ರಗೊಳ್ಳುತ್ತಿದೆ ಎನ್ನುತ್ತಾರೆ ಅಫ್ಘಾನ್ ನಾಗರಿಕರು.
ಸೆಖೆಯ ಸಾವನ್ನೂ ಲೆಕ್ಕಿಸುತ್ತಿಲ್ಲ! :
ತಾಲಿಬಾನ್ ತಾಪವೇರಿರುವ ಅಫ್ಘಾನ್‌ನಲ್ಲಿ ಉಷ್ಣಾಂಶವೂ 31 ಡಿಗ್ರಿ ಸೆಲ್ಸಿಯಸ್ ದಾಟಿದೆ. ಸಾವಿರಾರು ಮಂದಿ ಬಿಸಿಲನ್ನೂ ಲೆಕ್ಕಿಸದೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸೇರಿದ್ದು, ಹಲವರು ಬಿಸಿಲಿನ ಬೇಗೆಗೆ ಮೂರ್ಛೆ ಹೋಗುತ್ತಿದ್ದಾರೆ. ಒಬ್ಬರನ್ನೊಬ್ಬರು ತಳ್ಳುತ್ತಿರುವ ಕಾರಣ ಕೆಲವು ಸಾವೂ ಸಂಭವಿಸಿವೆ ಎನ್ನಲಾಗಿದೆ. ಏರ್‌ಪೋರ್ಟ್‌ನ ಗೋಡೆಗಳನ್ನು ಹತ್ತಿರುವ ಅಮೆರಿಕ ಯೋಧರು, ಕೆಳಗೆ ನಿಂತಿರುವ ಜನರ ಮೇಲೆ ನೀರು ಸಿಂಪಡಿಸಿ ಬೇಗೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲಿಯೇ ವೈದ್ಯಕೀಯ ನೆರವನ್ನೂ ನೀಡಲಾಗುತ್ತಿದೆ.
ಬಾಲಕಿಯ ಪತ್ರದ ಮೂಲಕ ಏಂಜಲೀನಾ ಇನ್‌ಸ್ಟಾ ಪ್ರವೇಶ :
ಹಾಲಿವುಡ್‌ನ ಖ್ಯಾತ ನಟಿ ಏಂಜಲೀನಾ ಜೂಲಿ ಅವರು ಶನಿವಾರ ಇನ್‌ಸ್ಟಾಗ್ರಾಂಗೆ ಪ್ರವೇಶಿಸಿದ್ದು, “ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವವರ ಕಥೆಗಳನ್ನು ಹಂಚಿಕೊಳ್ಳಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತೇನೆ’ ಎಂದು ಘೋಷಿಸಿದ್ದಾರೆ. ಅದರಂತೆ ತಮ್ಮ ಮೊದಲ ಪೋಸ್ಟ್‌ನಲ್ಲೇ ಅಫ್ಘಾನ್‌ನ ಬಾಲಕಿಯೊಬ್ಬಳು ತಮಗೆ ಬರೆದಿರುವ ಪತ್ರವನ್ನು ಹಂಚಿಕೊಂಡಿದ್ದಾರೆ. “20 ವರ್ಷಗಳ ಬಳಿಕ ಮತ್ತೆ ನಾವು ಎಲ್ಲ ಹಕ್ಕುಗಳನ್ನೂ ಕಳೆದುಕೊಂಡೆವು. ನಮ್ಮೆಲ್ಲರ ಬದುಕೂ ಕತ್ತಲಾಗಿದೆ. ನಾವೆಲ್ಲರೂ ಸ್ವಾತಂತ್ರ್ಯ ಕಳೆದುಕೊಂಡಿದ್ದೇವೆ, ಮತ್ತೆ ಬಂಧಿಯಾಗಿದ್ದೇವೆ’ ಎಂದು ಪತ್ರದಲ್ಲಿ ಬರೆಯಲಾಗಿದ್ದು, ಬಾಲಕಿಯು ತನ್ನ ನೋವು, ಭೀತಿಯ ಭಾವನೆಗಳನ್ನು ಅದರಲ್ಲಿ ಹೇಳಿಕೊಂಡಿದ್ದಾಳೆ. ಈ ಪತ್ರ ಹಂಚಿಕೊಂಡಿರುವ ಏಂಜಲೀನಾ, “ನಾನು ಇದರಿಂದ ದೂರ ಓಡುವುದಿಲ್ಲ. ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ, ನೀವೂ ನನ್ನೊಂದಿಗೆ ಕೈಜೋಡಿಸುತ್ತೀರೆಂಬ ನಂಬಿಕೆಯಿದೆ’ ಎಂದು ಬರೆದುಕೊಂಡಿದ್ದಾರೆ.
ನನ್ನ ಸಾವು ನಿಶ್ಚಿತ: ಮೊದಲ ಮಹಿಳಾ ಮೇಯರ್ ಝರೀಫಾ :
“ಅವರು ಖಂಡಿತಾ ನನ್ನನ್ನು, ನನ್ನ ಕುಟುಂಬವನ್ನು ಹುಡುಕಿಕೊಂಡು ಬರುತ್ತಾರೆ. ನಮ್ಮ ಸಾವು ಖಚಿತ ಎಂದು ನನಗನಿಸುತ್ತಿದೆ. ಅದಕ್ಕಾಗಿ ನಾನು ನಿರ್ಲಿಪ್ತಳಾಗಿ ಕುಳಿತಿದ್ದೇನೆ. ನಾನು ಎಲ್ಲೂ ಹೋಗುವುದಿಲ್ಲ. ಹೋಗುವುದಾದರೂ ಎಲ್ಲಿಗೆ?’ ಭಾವುಕರಾಗುತ್ತಲೇ ಇಂಥ ಪ್ರಶ್ನೆ ಕೇಳಿದ್ದಾರೆ ಅಫ್ಘಾನ್‌ನ ಮೊದಲ ಮಹಿಳಾ ಮೇಯರ್ ಝರೀಫಾ ಗಫಾರಿ. 27ನೇ ವಯಸ್ಸಿಗೇ ಮೈಡಾನ್ ಶಾರ್‌ನ ಮೇಯರ್ ಆಗಿ ನೇಮಕಗೊಂಡಿರುವ ಗಫಾರಿ ಈಗ ಜೀವಭಯವನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷವಷ್ಟೇ ಅವರ ಅಪ್ಪನನ್ನು ಉಗ್ರರು ಗುಂಡು ಹಾರಿಸಿ ಹತ್ಯೆಗೈದಿದ್ದರು.
ಪ್ಲೀಸ್, ನನ್ನ ಅಪ್ಪನನ್ನು ಬಿಟ್ಟುಬಿಡಿ ಗೋಗರೆದ ಅಧಿಕಾರಿಯ ಪುತ್ರ :
ತಾಲಿಬಾನ್ ವಶಕ್ಕೆ ಅಫ್ಘಾನ್ ಬಂದ ಅನಂತರ ಹಲವಾರು ಸರಕಾರಿ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಅವರು ತಲೆಮರೆಸಿಕೊಂಡಿದ್ದಾರೋ ಅಥವಾ ಉಗ್ರರ ಕಪಿಮುಷ್ಟಿಗೆ ಸಿಲುಕಿದ್ದಾರೋ ಎಂಬುದು ಗೊತ್ತಾಗದೇ ಕುಟುಂಬ ಸದಸ್ಯರು ರೋದಿಸುತ್ತಿದ್ದಾರೆ. 5 ದಿನಗಳ ಹಿಂದೆ ಲಫ್ ಮಾನ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಉಗ್ರರಿಗೆ ಶರಣಾಗಿದ್ದರು. ಆದರೆ ಅವರಿನ್ನೂ ವಾಪಸ್ ಬಂದಿಲ್ಲ. “ನೀವು ಕ್ಷಮಾದಾನ ನೀಡುವುದಾಗಿ ಘೋಷಿಸಿದ್ದೀರಿ. ಪ್ಲೀಸ್ ನನ್ನ ಅಪ್ಪನನ್ನು ಬಿಡುಗಡೆ ಮಾಡಿ’ ಎಂದು ಅವರ ಪುತ್ರ ಗೋಗರೆಯುತ್ತಿದ್ದಾನೆ.
ಯೋಧರು ಶಿಶುಗಳನ್ನು ಸಂತೈಸುವ ಫೋಟೋಗಳು ವೈರಲ್ :
ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಫ್ಘಾನ್‌ನ ತಾಯಂದಿರು ಹತಾಶರಾಗಿ ತಮಗೊಪ್ಪಿಸಿದ್ದ ಮಕ್ಕಳನ್ನು ಅಮೆರಿಕದ ಯೋಧರು ಸಂತೈಸುತ್ತಿದ್ದ ಫೋಟೋಗಳು ಶನಿವಾರ ವೈರಲ್ ಆಗಿವೆ. ಅಮೆರಿಕ ರಕ್ಷಣ ಇಲಾಖೆಯೇ ಇವುಗಳನ್ನು ಟ್ವೀಟ್ ಮಾಡಿದೆ. ಯೋಧರು ಏರ್‌ಪೋರ್ಟ್‌ನ ಮೂಲೆಯಲ್ಲಿ ಕುಳಿತು ಹಸುಗೂಸುಗಳನ್ನು ಎತ್ತಿಕೊಂಡು ಸಮಾಧಾನಪಡಿಸುತ್ತಿರುವುದು ಈ ಫೋಟೋಗಳಲ್ಲಿ ಕಾಣಿಸಿವೆ. ತಜಕಿಸ್ಥಾನದ ಸೇನಾಧಿಕಾರಿಯೊಬ್ಬರು ಮಗುವನ್ನು ಮುದ್ದಿಸುತ್ತಿರುವ ಫೋಟೋ ಕೂಡ ಟ್ವಿಟರ್‌ನಲ್ಲಿ ಹರಿದಾಡತೊಡಗಿದೆ.
ರಾತ್ರಿಯಿಡೀ ಶೌಚಾಲಯದಲ್ಲಿ ಅವಿತಿದ್ದ ಹದಿನಾರು ಮಂದಿ! :
ಆ ಕುಟುಂಬದ 16 ಮಂದಿ ಒಂದಿಡೀ ರಾತ್ರಿಯನ್ನು ಶೌಚಾಲಯದಲ್ಲೇ ಕಳೆದಿದ್ದಾರೆ! ಅಫ್ಘಾನ್ ಸರಕಾರದ ಆಡಳಿತದ ಅವಧಿಯಲ್ಲಿ ಅಮೆರಿಕ ಸೇನೆಗೆ ಬೆಂಬಲ ನೀಡಿದವರನ್ನು ಟಾರ್ಗೆಟ್ ಮಾಡಿಕೊಂಡು ತಾಲಿಬಾನಿಗರು ಮನೆ ಮನೆಗೆ ನುಗ್ಗುತ್ತಿದ್ದ ಹಿನ್ನೆಲೆಯಲ್ಲಿ ಹೆದರಿದ ಕುಟುಂಬ ಈ ರೀತಿ ಮಾಡಿದೆ. “ನಮ್ಮ ಮನೆಗೂ ದಾಳಿ ಮಾಡಬಹುದೆಂಬ ಆತಂಕದಲ್ಲಿ ನಾವಿದ್ದೇವೆ. ಮನೆಯ ಹೊರಗೆ ಸ್ವಲ್ಪ ಸದ್ದಾದರೂ ಭಯವಾಗುತ್ತದೆ. ಶುಕ್ರವಾರ ನಾವು ದೀಪಗಳನ್ನೆಲ್ಲ ಆರಿಸಿ, ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿ, ಮಕ್ಕಳ ಬಾಯಿಯಿನ್ನು ಅದುಮಿಟ್ಟುಕೊಂಡು ಶೌಚಾಲಯದಲ್ಲೇ ಅವಿತಿದ್ದೆವು. ನಮ್ಮಲ್ಲೀಗ ಆಹಾರವೂ ಮುಗಿಯುತ್ತಿದೆ. ಎಲ್ಲದರ ದರವೂ ಗಗನಕ್ಕೇರಿದೆ. ನಮಗಿಲ್ಲಿ ಉಳಿಗಾಲವಿಲ್ಲ’ ಎಂದು ಆ ಕುಟುಂಬ ಅವಲತ್ತುಕೊಂಡಿದೆ.
ಅತಂತ್ರರಾದ ಮಕ್ಕಳು :
ತಾಲಿಬಾನಿಗಳು ದೇಶದ ಹಿಡಿತವನ್ನು ತೆಕ್ಕೆಗೆ ತೆಗದುಕೊಳ್ಳುತ್ತಿದ್ದಂತೆಯೇ ಅದೆಷ್ಟೋ ಅಮಾಯಕರು ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಹೀಗೆ ಸಾವನ್ನಪ್ಪಿದ ನಾಗರಿಕರ ಮಕ್ಕಳು ಬೀದಿಗೆ ಬಿದ್ದಿದ್ದಾರೆ. ಈ ಮಕ್ಕಳ ಗೋಳನ್ನು ಕೇಳುವವರಿಲ್ಲ ದಂತಾಗಿದೆ. ಒಂದಿಷ್ಟು ಮಕ್ಕಳು ತಮ್ಮ ಸಮೀಪದ ಮನೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದರೆ ಬಹಳಷ್ಟು ಮಕ್ಕಳ ಸ್ಥಿತಿ ಸಂಪೂರ್ಣ ಅತಂತ್ರವಾಗಿದೆ. ಒಂದೆಡೆಯಿಂದ ಉಗ್ರರ ಗುಂಡಿಗೆ ಜನರು ಬಲಿಯಾಗುತ್ತಿರುವ ದೃಶ್ಯವನ್ನು ಕಣ್ಣಾರೆ ಕಂಡು ಭಯಭೀತರಾಗಿದ್ದರೆ ಮತ್ತೂಂದಿಷ್ಟು ಮಕ್ಕಳು ಗುಂಡಿನ ದಾಳಿ, ಉಗ್ರರ ಕೌರ್ಯದಿಂದ ಪಾರಾಗಲು ಪಾಳು ಬಿದ್ದಿರುವ ಕಟ್ಟಡಗಳಲ್ಲಿ ಆಶ್ರಯ ಪಡೆದಿದ್ದಾರೆ. ಕಳೆದೊಂದು ವಾರದಿಂದೀಚೆಗೆ ಕುಟುಂಬಗಳು ಮನೆಗಳಲ್ಲಿಯೇ ಬಂಧಿಯಾಗಿದ್ದು ಈ ಮನೆಗಳಲ್ಲಿ ಮಕ್ಕಳು ಹಸಿವಿನಿಂದಾಗಿ ಸಾವನ್ನಪ್ಪತೊಡಗಿದ್ದಾರೆ.