ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ಬಂಡುಕೋರರು ವಶಪಡಿಸಿಕೊಂಡ ನಂತರ ಭಾರತದ ಜತೆಗಿನ ಆಮದು ಮತ್ತು ರಫ್ತು ವ್ಯವಹಾರವನ್ನು ಸ್ಥಗಿತಗೊಳಿಸಿರುವುದಾಗಿ ವರದಿ ತಿಳಿಸಿದೆ. ಭಾನುವಾರ ತಾಲಿಬಾನ್ ಅಫ್ಘಾನಿಸ್ತಾನದ ಆಡಳಿತವನ್ನು ತನ್ನ ವಶಕ್ಕೆ ಪಡೆದಿತ್ತು. ಏತನ್ಮಧ್ಯೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಪಲಾಯನಗೈದಿದ್ದರು.
ಇದನ್ನೂ ಓದಿ:ಅಪಘಾತವಾದರೂ ಆ್ಯಂಬುಲೆನ್ಸ್ ನಲ್ಲಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು !
ಫೆಡರೇಶನ್ ಆಫ್ ಇಂಡಿಯನ್ ಎಕ್ಸ್ ಪೋರ್ಟ್ ಆರ್ಗನೈಜೆಷನ್ ನ ಡೈರೆಕ್ಟರ್ ಜನರಲ್ (ಎಫ್ ಐಇಒ) ಡಾ. ಅಜಯ್ ಸಹಾಯ್ ಅವರ ಮಾಹಿತಿ ಪ್ರಕಾರ, ಪಾಕಿಸ್ತಾನದ ಮೂಲಕ ಸಂಚರಿಸುವ ಸರಕು ಸಾಗಣೆಯನ್ನು ತಾಲಿಬಾನ್ ರದ್ದುಗೊಳಿಸಿದೆ. ಅಲ್ಲದೇ ಭಾರತದಿಂದ ಆಮದಾಗುವ ಸರಕುಗಳಿಗೂ ನಿರ್ಬಂಧ ವಿಧಿಸಿರುವುದಾಗಿ ತಿಳಿಸಿದ್ದಾರೆ.
“ನಾವು ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆ ಕುರಿತು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ಏತನ್ಮಧ್ಯೆ ಪಾಕಿಸ್ತಾನ ಮಾರ್ಗದ ಮೂಲಕ ಆಮದು ಮಾಡಿಕೊಳ್ಳುವ ಸರಕು ಸಾಗಣೆಯನ್ನು ನಿಲ್ಲಿಸಿದೆ ಎಂದು ಹೇಳಿದರು.
ಭಾರತ ಮತ್ತು ಅಫ್ಘಾನಿಸ್ತಾನ ದೀರ್ಘಕಾಲದ ವ್ಯಾಪಾರ, ವಹಿವಾಟಿನ ಸಂಬಂಧ ಹೊಂದಿದೆ. ಮುಖ್ಯವಾಗಿ ಹೂಡಿಕೆಯಲ್ಲಿಯೂ ಭಾರತ ಹೆಚ್ಚಿನ ಆದ್ಯತೆ ನೀಡಿತ್ತು ಎಂದು ವರದಿ ವಿವರಿಸಿದೆ. ಅಫ್ಘಾನಿಸ್ತಾನದ ಬಹುದೊಡ್ಡ ಪಾಲುದಾರರಲ್ಲಿ ಭಾರತವೂ ಕೂಡಾ ಒಂದಾಗಿದೆ. 2021ನೇ ಸಾಲಿನಲ್ಲಿ ನಾವು ಅಫ್ಘಾನಿಸ್ತಾನಕ್ಕೆ ಅಂದಾಜು 835 ಮಿಲಿಯನ್ ಡಾಲರ್ ನಷ್ಟು ರಫ್ತು ವಹಿವಾಟು ನಡೆಸಿದ್ದೇವು ಎಂದು ಸಹಾಯ್ ತಿಳಿಸಿದ್ದಾರೆ.
ಇದೇ ರೀತಿ ನಾವು ಅಫ್ಘಾನಿಸ್ತಾನದಿಂದ 510 ಮಿಲಿಯನ್ ಡಾಲರ್ ನಷ್ಟು ಮೌಲ್ಯದ ಸರಕನ್ನು ಆಮದು ಮಾಡಿಕೊಂಡಿದ್ದೇವೆ. ಅಫ್ಘಾನಿಸ್ತಾನದಲ್ಲಿ ಭಾರತ ಬೃಹತ್ ಮೊತ್ತದ ಬಂಡವಾಳವನ್ನು ಹೂಡಿಕೆ ಮಾಡಿದೆ. ಅಫ್ಘಾನಿಸ್ತಾನದಲ್ಲಿ ಭಾರತ 3 ಬಿಲಿಯನ್ ಡಾಲರ್ ನಷ್ಟು ಹೂಡಿಕೆ ಮಾಡಲಾಗಿದೆ ಎಂದು ಸಹಾಯ್ ಹೇಳಿದರು.