Advertisement

ಮನೆ ಮನೆಗೆ ನುಗ್ಗಿ ಹತ್ಯೆ : ಪತ್ರಕರ್ತರು, ಸರಕಾರಿ ಅಧಿಕಾರಿಗಳು ತಾಲಿಬಾನ್‌ ಗುರಿ

01:44 AM Aug 21, 2021 | Team Udayavani |

ಕಾಬೂಲ್‌: “ಯಾರ ವಿರುದ್ಧವೂ ಪ್ರತೀಕಾರ ತೀರಿಸುವುದಿಲ್ಲ’ ಎಂದು ಜಗತ್ತಿನ ಮುಂದೆ ಘೋಷಿಸಿದ್ದ ತಾಲಿಬಾನ್‌ ಉಗ್ರರ ನಿಜ ಬಣ್ಣ ದಿನಗಳೆದಂತೆ ಬಯಲಾಗುತ್ತಿದೆ.

Advertisement

ಅಫ್ಘಾನಿಸ್ಥಾನದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿರುವ ಘಟನೆಗಳು ತಾಲಿಬಾನ್‌ ಆಡಳಿತದ ನೈಜ ಸ್ವರೂಪವನ್ನು ತೆರೆದಿಟ್ಟಿವೆ. ಪ್ರಜಾಸತ್ತೆಯ ಬೆಂಬಲಿಗರು, ಹಿಂದಿನ ಸರಕಾರದ ಜತೆ ಸಹಭಾಗಿತ್ವ ಹೊಂದಿ ದ್ದವರು, ಸೇನಾ ಸಿಬಂದಿ, ಪೊಲೀಸರು ಮತ್ತು ಪತ್ರಕರ್ತರ ವಿರುದ್ಧ ತಾಲಿಬಾನ್‌ ಉಗ್ರರು ವ್ಯವಸ್ಥಿತ ದಾಳಿ ಆರಂಭಿಸಿದ್ದಾರೆ.

ಮನೆ ಮನೆಗೆ ನುಗ್ಗಿ ಇಂಥವರಿಗಾಗಿ ಶೋಧ ನಡೆಸುತ್ತಿದ್ದಾರೆ. ಬೇಕಾದವರು ಸಿಗದೆ ಇದ್ದಾಗ ಅವರ ಕುಟುಂಬದ ಸದಸ್ಯರ ಮೇಲೆ ಹಲ್ಲೆ, ಹತ್ಯೆ ನಡೆಸಲಾಗುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ವಿಶ್ವಸಂಸ್ಥೆಗೆ ಮಾಹಿತಿ ನೀಡಿವೆ. ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನು ಬೆಂಬಲಿಸಿದವರನ್ನು ಹುಡುಕಲಾಗುತ್ತಿದೆ, ಶರಿಯಾ ಸಿದ್ಧಾಂತ ಒಪ್ಪದವರನ್ನು ಪತ್ತೆ ಹಚ್ಚಿ ಅವರ ಕುಟುಂಬಗಳಿಗೆ ಶರಿಯಾ ಕಾನೂನಿನ ಪ್ರಕಾರ ಶಿಕ್ಷೆ ನೀಡಲಾಗುತ್ತಿದೆ.

ತಾಲಿಬಾನ್‌ನ “ಕಪ್ಪುಪಟ್ಟಿ’ಯಲ್ಲಿ ಇರುವವರೆಲ್ಲ ಅಪಾಯದಲ್ಲಿ ಸಿಲುಕಿದ್ದು, ಇವರನ್ನು ಉಗ್ರರು “ಸಾಮೂಹಿಕ ನರಮೇಧ’ ನಡೆಸುವ ಭೀತಿಯೂ ಇದೆ ಎಂದೂ ವರದಿ ತಿಳಿಸಿದೆ.

ಪತ್ರಕರ್ತನ ಸಂಬಂಧಿಯ ಕೊಲೆ
ಜರ್ಮನಿಯ ಪತ್ರಕರ್ತರೊಬ್ಬರ ಹುಡುಕಾಟದಲ್ಲಿದ್ದ ಉಗ್ರರು, ಆತ ಸಿಗಲಿಲ್ಲ ಎಂದು ಸಂಬಂಧಿಯೊಬ್ಬರನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಈ ಘಟನೆಯಲ್ಲಿ ಅವರ ಕುಟುಂಬದ ಮತ್ತೂಬ್ಬ ಸದಸ್ಯನೂ ಗಂಭೀರವಾಗಿ ಗಾಯಗೊಂಡಿದ್ದು, ಉಳಿದವರು ತಪ್ಪಿಸಿಕೊಂಡಿದ್ದಾರೆ. ಇದೇ ಸಂಸ್ಥೆಯ ಇನ್ನೂ ಮೂವರು ಪತ್ರಕರ್ತರ ಮನೆಗಳಿಗೂ ಉಗ್ರರು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಕಾಬೂಲ್‌ ಸಹಿತ ವಿವಿಧ ಪ್ರದೇಶಗಳಲ್ಲಿ ಪತ್ರಕರ್ತರಿಗಾಗಿ ವ್ಯವ ಸ್ಥಿತ ಶೋಧವನ್ನು ತಾಲಿಬಾನಿಗರು ಆರಂಭಿಸಿರುವುದು ಈ ಘಟನೆಯಿಂದ ಸ್ಪಷ್ಟವಾಗಿದೆ. ಕಳೆದ ತಿಂಗಳಷ್ಟೇ ರಾಯಿಟರ್ಸ್‌ ಫೋಟೋಗ್ರಾಫ‌ರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಭಾರತದ ಪತ್ರಕರ್ತ ಡ್ಯಾನಿಶ್‌ ಸಿದ್ದಿಕಿ ಅವರನ್ನು ಅತ್ಯಂತ ಅಮಾನುಷವಾಗಿ ಉಗ್ರರು ಕೊಲೆಗೈದಿದ್ದರು.

Advertisement

ಪೊಲೀಸ್‌ ಮುಖ್ಯಸ್ಥನಿಗೆ ಮರಣದಂಡನೆ
ಹೆರಾತ್‌ ಸಮೀಪದ ಬಾದ್‌ ಸ್‌ ಪ್ರಾಂತ್ಯದ ಪೊಲೀಸ್‌ ಮುಖ್ಯಸ್ಥರೊಬ್ಬರ ಕೈಕಾಲುಗಳನ್ನು ಹಗ್ಗದಲ್ಲಿ ಕಟ್ಟಿ, ಕಣ್ಣಿಗೆ ಬಟ್ಟೆ ಬಿಗಿದು ಹತ್ಯೆಗೈದ ವೀಡಿಯೋ ಶುಕ್ರವಾರ ವೈರಲ್‌ ಆಗಿದೆ. ಕ್ರೂರವಾಗಿ ಹತ್ಯೆಗೀಡಾದ ಪೊಲೀಸ್‌ ಅಧಿಕಾರಿಯನ್ನು ಹಾಜಿ ಮುಲ್ಲಾ ಅಚಕ್‌ಝೈ ಎಂದು ಗುರುತಿಸಲಾಗಿದೆ. ಅವರು ಮೊಣಕಾಲೂರಿ ಕುಳಿತುಕೊಳ್ಳುವಂತೆ ಮಾಡಿದ ಉಗ್ರರು ಅನಂತರ ಸುತ್ತುವರಿದು ಒಂದೇ ಸಮನೆ ಗುಂಡಿನ ಮಳೆಗರೆಯುವ ದೃಶ್ಯ ಆ ವೀಡಿಯೋದಲ್ಲಿ ಸೆರೆಯಾಗಿದೆ.

ಸುದ್ದಿ ವಾಚಕಿಯರು ಮನೆಗೆ
ಸ್ತ್ರೀಯರ ಉದ್ಯೋಗಕ್ಕೆ ಅಡ್ಡಿ ಇಲ್ಲ ಎಂದಿದ್ದ ಉಗ್ರರು ವಿವಿಧ ಸುದ್ದಿ ವಾಹಿನಿಗಳ ಮೂವರು ವಾರ್ತಾ ವಾಚಕಿಯರನ್ನು ಮನೆಗೆ ಕಳುಹಿಸಿದ್ದಾರೆ. ಇನ್ನು ಮುಂದೆ ಕೆಲಸಕ್ಕೆ ಬರುವಂತಿಲ್ಲ ಎಂದು ಇವರಿಗೆ ಸೂಚಿಸಿದ್ದಾರೆ. ಈ ಪೈಕಿ ಒಬ್ಟಾಕೆಗೆ ತಲೆಮರೆಸಿಕೊಳ್ಳುವಂತೆ ತಾಲಿಬಾನಿಗಳು ಹಣೆಗೆ ಬಂದೂಕಿನ ಗುರಿ ನೆಟ್ಟು ಆದೇಶಿಸಿದ್ದಾರೆ.

ಶಾಶ್ವತವಲ್ಲ: ಮೋದಿ
ತಾಲಿಬಾನ್‌ ನಡೆಸುತ್ತಿರುವ ಅಮಾನುಷ ಕೃತ್ಯಗಳನ್ನು ಪ್ರಧಾನಿ ಮೋದಿ ಪರೋಕ್ಷವಾಗಿ ಖಂಡಿಸಿದ್ದಾರೆ. ಗುಜರಾತ್‌ನಲ್ಲಿ ಶುಕ್ರವಾರ ಮಾತನಾಡಿದ ಅವರು, ವಿನಾಶಕಾರಿ ಶಕ್ತಿಗಳು ಮತ್ತು ಉಗ್ರವಾದದ ಮೂಲಕ ಸಾಮ್ರಾಜ್ಯಶಾಹಿ ಸಿದ್ಧಾಂತವನ್ನು ಅನುಸರಿಸುವವರ ಪ್ರಾಬಲ್ಯ ಕ್ಷಣಿಕವಷ್ಟೆ. ಅವರ ಅಸ್ತಿತ್ವವು ಶಾಶ್ವತವಲ್ಲ ಎಂದಿದ್ದಾರೆ. ಶುಕ್ರವಾರ ಗುಜರಾತ್‌ನ ಸೋಮನಾಥ ದೇಗುಲದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸುಳ್ಳಿನ ಮೂಲಕ ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲ. ಭಯದ ಮೂಲಕ ನಂಬಿಕೆಯನ್ನು ಅಳಿಸಲು ಸಾಧ್ಯವಿಲ್ಲ. ಅಂತಿಮ ಜಯ ಮಾನವತೆಗೇ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next