ಕಾಬೂಲ್: ಕಳೆದ ಕೆಲವು ದಿನಗಳಿಂದ ಅಫ್ಘಾನಿಸ್ಥಾನದಲ್ಲಿ ಹಿಂಸಾಚಾರ ನಡೆಸುತ್ತಿರುವ ತಾಲಿಬಾನ್ ಉಗ್ರರು ಅಲ್ಲಿ ಆಡಳಿತ ನಡೆಸುವ ದಿನಗಳು ಹತ್ತಿರವಾಗುತ್ತಿದೆ. ಅಫ್ಘಾನ್ ರಾಜಧಾನಿ ಕಾಬೂಲ್ ನಿಂದ ಕೇವಲ 50 ಕಿ.ಮೀ ದೂರದಲ್ಲಿ ತಾಲಿಬಾನ್ ಉಗ್ರರಿದ್ದು, ಕಾಬೂಲ್ ಕೂಡಾ ಉಗ್ರರ ವಶವಾಗುವ ಆತಂಕ ಎದುರಾಗಿದೆ.
ಇದರ ನಡುವೆ ಅಫ್ಘಾನಿಸ್ತಾನದಲ್ಲೇ ಬಾಕಿ ಉಳಿದಿರುವ ತನ್ನ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವ ಸಲುವಾಗಿ ಅಮೆರಿಕ ಮೂರು ಸಾವಿರ ಯೋಧರನ್ನು ಕಳುಹಿಸಿದೆ. ಅತಿ ಶೀಘ್ರದಲ್ಲೇ ಇವರನ್ನು ಅಮೆರಿಕಕ್ಕೆ ವಾಪಸ್ ಕರೆಸಿಕೊಳ್ಳಲಿದೆ. ಹಾಗೆಯೇ, ಜರ್ಮನಿ, ಫ್ರಾನ್ಸ್, ನಾರ್ವೆ, ಡೆನ್ಮಾರ್ಕ್, ನೆದರ್‌ಲ್ಯಾಂಡ್ ದೇಶಗಳು ತಮ್ಮ ರಾಯಭಾರ ಕಚೇರಿಗಳನ್ನು ಮುಚ್ಚಿ ಸಿಬ್ಬಂದಿಯನ್ನು ಸ್ವದೇಶಕ್ಕೆಕರೆಸಿಕೊಳ್ಳುತ್ತಿವೆ.
ಇದನ್ನೂ ಓದಿ:ಸ್ವಾತಂತ್ರ್ಯ ಹೋರಾಟದ ಕಹಳೆಗೆ ಶಿಕ್ಷಣ ತೊರೆದು ಚಳವಳಿಗೆ ಧುಮುಕಿದ ಹಿರಿಯಡಕ ರಾಮರಾಯ ಮಲ್ಯ
ಕಾಬೂಲ್ ನಗರದ ಸ್ಥಿತಿ ಬದಲಾಗುತ್ತಿದೆ. ಪೊಲೀಸ್ ಠಾಣೆಗಳು ಖಾಲಿಯಾಗುತ್ತಿವೆ. ಆದರೆ, ಉಗ್ರರು ಕಾಬೂಲ್‌ಗೆ ಬಂದರೂ, ಅಧ್ಯಕ್ಷರ ಅರಮನೆ ಸೇರಿದಂತೆ ಸರ್ಕಾರದ ಯಾವುದೇ ಕಚೇರಿಗಳ ಮೇಲೆ ದಾಳಿ ಮಾಡುವುದಿಲ್ಲ. ಈಗಾಗಲೇ ಕತಾರ್‌ನಲ್ಲಿ ಆಗಿರುವ ಒಪ್ಪಂದದಂತೆ ಉಗ್ರರು, ಶಾಂತಿಯುತವಾಗಿಯೇ ಅಧಿಕಾರ ಪಡೆಯಬೇಕಾಗುತ್ತದೆ. ಕಳೆದ ಎಂಟು ದಿನಗಳಿಂದಲೂ ತಾಲಿಬಾನ್ ಉಗ್ರರು, ದೇಶದ ಒಂದೊಂದೇ ಪ್ರಾಂತ್ಯಗಳನ್ನು ತಮ್ಮ ಕೈವಶ ಮಾಡಿಕೊಂಡು ಬರುತ್ತಿದ್ದಾರೆ. ಸರ್ಕಾರವೂ ನಿಧಾನಕ್ಕೆ ತನ್ನ ಹಿಡಿತಕಳೆದುಕೊಳ್ಳುತ್ತಿದೆ.
ಅಫ್ಘಾನ್ ಅಧ್ಯಕ್ಷರ ರಾಜೀನಾಮೆ?: ತಾಲಿಬಾನ್ ಉಗ್ರರ ಕೈ ಮೇಲಾಗುತ್ತಿದ್ದಂತೆ ಅಲ್ಲಿನ ಸರ್ಕಾರ ಮತ್ತು ಉಗ್ರರ ನಡುವೆ ಒಪ್ಪಂದ ಏರ್ಪಡುವ ಸಾಧ್ಯತೆಗಳು ಹೆಚ್ಚಾಗಿವೆ. ಅಧ್ಯಕ್ಷ ಅಶ್ರಫ್ ಘನಿ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಶೀಘ್ರದಲ್ಲೇ ದೇಶವನ್ನುದ್ದೇಶಿಸಿ ಅವರು ಮಾತನಾಡಲಿದ್ದು, ಬಳಿಕ ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆಯಾಗಲಿದೆ