ಕಾಬೂಲ್: ತನಗೆ ಪ್ರತಿರೋಧ ಒಡ್ಡಿದ್ದ ಪಂಜ್ ಶೀರ್ ಪ್ರಾಂತ್ಯವನ್ನೂ ವಶಕ್ಕೆ ಪಡೆದ ಸಂತಸದಲ್ಲಿರುವ ತಾಲಿಬಾನ್ ಇದೀಗ ಅಫ್ಘಾನಿಸ್ಥಾನದಲ್ಲಿ ಸರ್ಕಾರ ರಚನೆ ಮಾಡಲು ಮುಂದಾಗಿದೆ. ತನ್ನ ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಆರು ದೇಶಗಳಿಗೆ ತಾಲಿಬಾನ್ ಆಹ್ವಾನ ನೀಡಿದೆ.
ವರದಿಗಳ ಪ್ರಕಾರ ರಷ್ಯಾ, ಚೀನಾ, ಟರ್ಕಿ, ಇರಾನ್, ಪಾಕಿಸ್ತಾನ ಮತ್ತು ಕತಾರ್ ದೇಶಗಳಿಗೆ ತಾಲಿಬಾನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಿದೆ. ಇದು 20 ವರ್ಷಗಳ ಬಳಿಕ ಮತ್ತೆ ಅಫ್ಘಾನಿಸ್ಥಾನದಲ್ಲಿ ಅಧಿಕಾರ ಪಡೆಯುತ್ತಿರುವ ತಾಲಿಬಾನ್ ತನ್ನ ವಿದೇಶಿ ನೀತಿಯ ಮೊದಲ ಹೆಜ್ಜೆಗೆ ನಾಂದಿ ಹಾಡಿದೆ.
ಇದನ್ನೂ ಓದಿ:ಪಂಜ್ ಶೀರ್ ನಲ್ಲಿ ತಾಲಿಬಾನ್ ಪಡೆಗಳ ಮೇಲೆ ಅಪರಿಚಿತ ಮಿಲಿಟರಿ ವಿಮಾನಗಳ ದಾಳಿ
1990ರಲ್ಲಿ ತಾಲಿಬಾನ್ ಸರ್ಕಾರದೊಂದಿಗೆ ಗುರುತಿಸಿಕೊಂಡಿದ್ದ ಯುಎಇ ಮತ್ತು ಸೌದಿ ಅರೇಬಿಯಾ ಈ ಬಾರಿ ಅಂತರ ಕಾಯ್ದುಕೊಂಡಿದೆ. ಈ ಬಾರಿ ಬಹಳಷ್ಟು ದೇಶಗಳು ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ.
ಸರ್ಕಾರದಲ್ಲೂ ಪಾಕ್ ಕೈಚಳಕ: ಹೊಸ ಸರ್ಕಾರದಲ್ಲಿ ಪಾಕಿಸ್ಥಾನದ ಪ್ರಭಾವವಿರುವುದು ಸ್ಪಷ್ಟವಾಗಿದೆ. ಐಎಸ್‌ಐ ಮುಖ್ಯಸ್ಥ ಲೆ.ಜ.ಫೈಜ್ ಹಮೀದ್ ಕಾಬೂಲ್‌ಗೆ ತೆರಳಿ ತಾಲಿಬಾನ್ ನಾಯಕರೊಂದಿಗೆ ಮಾತುಕತೆ ನಡೆಸಿದ ಬಳಿಕವೇ “ಸರ್ಕಾರದ ಉನ್ನತ ಹುದ್ದೆ’ಗಳಲ್ಲಿ ಗಣನೀಯ ಬದಲಾವಣೆ ಆಗಿದೆ. ಹೊಸ ಸರ್ಕಾರದ ಮುಖ್ಯಸ್ಥನಾಗಿ ತನ್ನ ಪ್ರತಿನಿಧಿಯನ್ನೇ ನೇಮಕ ಮಾಡಬೇಕು ಎಂಬ ಷರತ್ತನ್ನು ಐಎಸ್‌ಐ ಹಾಕಿತ್ತು ಎಂದು ಹೇಳಲಾಗಿದೆ. ಅದನ್ನು ಪರಿಗಣಿಸಿ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.