ಮೈಸೂರು: ಬಿಜೆಪಿ ಕಾರ್ಯಕರ್ತರು ಮೈ ಮರೆತರೆ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಗುರುವಾರ ನಡೆದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಮೈ ಮರೆತರೆ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಆದ್ದರಿಂದ ಮತ್ತೊಮ್ಮೆ ಬಿಜೆಪಿ ನೇತೃತ್ವದ ರಾಷ್ಟ್ರೀಯವಾದಿ ಸರ್ಕಾರವನ್ನು ತರಲು ಪ್ರಯತ್ನ ಮಾಡಿ ಎಂದು ಕರೆ ನೀಡಿದ್ದಾರೆ.
ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಮದುವೆ, ಮುಂಜಿ, ಬೀಗರ ಊಟ ಅನೇಕ ಕಾರ್ಯಕ್ರಮಕ್ಕೆ ಮೈಸೂರಿಗೆ ಬರುತ್ತಿದ್ದರು. ಆದರೆ ದುಷ್ಕರ್ಮಿಗಳಿಂದ ಹತ್ಯೆಯಾದ ಕ್ಯಾತಮಾರನಹಳ್ಳಿಯ ರಾಜುವಿನ ಮನೆಗೆ ಸೌಜನ್ಯಕ್ಕೂ ಭೇಟಿ ನೀಡಲಿಲ್ಲ. ಪಿಎಫ್ಐ, ಕೆಎಫ್ ಡಿಯ 175 ಸದಸ್ಯರ ಮೇಲಿದ್ದ ಪ್ರಕರಣವನ್ನು ಸಿದ್ದರಾಮಯ್ಯ ವಾಪಸ್ ಪಡೆದರು. ಪರಿಣಾಮ ಎರಡು ಡಜನ್ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯಲು ಕಾರಣವಾಯಿತು. ಈಗ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಹವಣಿಸುತ್ತಿದ್ದಾರೆ. ಒಂದು ವೇಳೆ ನಮ್ಮ ಕಾರ್ಯಕರ್ತರು ಈ ವೇಳೆ ಮೈ ಮರೆತರೆ, ರಾಜ್ಯದಲ್ಲಿ ಮತ್ತೆ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದಿದ್ದಾರೆ.
ಇದನ್ನೂ ಓದಿ:ಬಾರ್ಡರ್- ಗಾವಸ್ಕರ್ ಟ್ರೋಫಿ; ಮೂರನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಆಸೀಸ್ ಕ್ಯಾಪ್ಟನ್!
ತಮ್ಮ ತಾಲಿಬಾನ್ ಹೇಳಿಕೆಯನ್ನು ಸಂಸದ ಪ್ರತಾಪ್ ಸಿಂಹ ಅವರು ಸಮರ್ಥಿಸಿಕೊಂಡಿದ್ದು, “ಹೌದು, ನಾನು ಕಾಂಗ್ರೆಸ್ ಕುರಿತು ಹೇಳಿಕೆ ನೀಡಿದ್ದೇನೆ. ಸಿದ್ದರಾಮಯ್ಯ ಕೆಎಫ್‌ಡಿ, ಪಿಎಫ್‌ಐ ಮೇಲಿನ ಕೇಸ್ ವಾಪಸ್ ತೆಗೆದುಕೊಂಡರು. ಇದರ ಪರಿಣಾಮವಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೊಲೆಯಾದವು. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ ತಾಲಿಬಾನ್ ಸರ್ಕಾರ ಬರುತ್ತದೆ. ಕಪಾಲಿ ಬೆಟ್ಟವನ್ನು ಯೇಸು ಬೆಟ್ಟ ಮಾಡುತ್ತಾರೆ. ಆ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದೇನೆ ಎಂದರು.
ಯಡಿಯೂರಪ್ಪ ಚುನಾವಣ ರಾಜಕೀಯ ನಿವೃತ್ತಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಕ್ರಿಯ ರಾಜಕಾರಣದಲ್ಲಿ ಯಡಿಯೂರಪ್ಪ ಇರುತ್ತಾರೆ. ಸಿದ್ದರಾಮಯ್ಯ ಹಾಗೂ ಉಳಿದವರ ರಾಜಕಾರಣವನ್ನೆಲ್ಲ ಮುಗಿಸುವರೆಗೂ ಸಕ್ರಿಯ ರಾಜಕಾರಣದಲ್ಲಿರುತ್ತಾರೆ. ಸಕ್ರಿಯ ರಾಜಕಾರಣದಲ್ಲಿದ್ದುಕೊಂಡು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂದರು.