Advertisement
ತಾಲಿಬಾನ್ ಆಡಳಿತದಡಿ, ಕ್ಸಿನ್ ಜಿಯಾಂಗ್ ನಲ್ಲಿ ಉಗ್ರವಾದವನ್ನು ಬಿತ್ತುತ್ತಿರುವ ಈಸ್ಟ್ ತುರ್ಕಿಸ್ತಾನ್ ಇಸ್ಲಾಮಿಕ್ ಮೂವ್ ಮೆಂಟ್ (ಇಟಿಐಎಂ) ಎಂಬ ಉಗ್ರ ಸಂಘಟನೆಗೆ ಅಫ್ಘಾನಿಸ್ತಾನವೇ ಸ್ವರ್ಗವಾಗಬಹುದು ಎಂಬ ಆತಂಕ ಚೀನಾಗಿತ್ತು. ಈಗ ಈ ಆತಂಕಕ್ಕೆ ಸ್ವತಃ ತಾಲಿಬಾನ್ ವಕ್ತಾರ ಸುಹೈನ್ ಶಹೀನ್ ತೆರೆ ಎಳೆದಿದ್ದಾನೆ. ನಮಗೆ ಚೀನಾ ಸ್ನೇಹಿತ. ಆದಷ್ಟು ಬೇಗ ಇಲ್ಲಿ ಪುನರ್ ನಿರ್ಮಾಣ ಕಾರ್ಯ ಆರಂಭಿಸುವ ಕುರಿತು ಚೀನಾದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದೂ ಶಹೀನ್ ಹೇಳಿದ್ದಾನೆ. ಜತೆಗೆ, ಅಲ್ ಖೈದಾವಾಗಲೀ ಅಥವಾ ಬೇರೆ ಉಗ್ರ ಸಂಘಟನೆಯಾಗಲೀ ಅಫ್ಘನ್ ಪ್ರವೇಶಿಸಲು ನಾವು ಬಿಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾನೆ.
ಅಫ್ಘಾನಿಸ್ತಾನದ ವಿಮಾನಗಳ ಪೈಲಟ್ ಗಳ ಮೇಲೆ ಈಗ ತಾಲಿಬಾನ್ ಕಣ್ಣು ಬಿದ್ದಿದೆ. ಈವರೆಗೆ 7 ಮಂದಿ ಪೈಲಟ್ ಗಳನ್ನು ಉಗ್ರರು ಹತ್ಯೆಗೈದಿದ್ದಾರೆ. “ಈ ಪೈಲಟ್ ಗಳೇ ನಮ್ಮವರ ಮೇಲೆ ಬಾಂಬ್ ದಾಳಿ ನಡೆಸಿದವರು. ಹಾಗಾಗಿ ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದೇವೆ’ ಎಂದು ತಾಲಿಬಾನ್ ಹೇಳಿದೆ. ಹತ್ಯೆಯ ಭೀತಿಯಿಂದ ಇತ್ತೀಚೆಗೆ 41 ವರ್ಷದ ಪೈಲಟ್ ಝಮರಾಯ್ ಅವರು ತಮ್ಮ ಮನೆಯನ್ನೇ ಮಾರಿ ಬೇರೆಡೆಗೆ ತೆರಳಲು ಯೋಜಿಸಿದ್ದರು. ಅದರಂತೆ, ರಿಯಲ್ ಎಸ್ಟೇಟ್ ಏಜೆಂಟನ್ನು ಭೇಟಿಯಾಗಲು ತೆರಳಿದ್ದರು. ರಿಯಲ್ ಎಸ್ಟೇಟ್ ಕಚೇರಿಗೇ ನುಗ್ಗಿ ಅವರ ಪುತ್ರನೆದುರೇ ಝಮರಾಯ್ ರನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದರು.