Advertisement

ಕಿಡ್ನ್ಯಾಪ್‌ ಕ್ರೂರಿಗಳು

12:23 AM Aug 22, 2021 | Team Udayavani |

ಕಾಬೂಲ್‌/ಹೊಸದಿಲ್ಲಿ: ನಾವು ಬದಲಾಗಿದ್ದೇವೆ ಎನ್ನುತ್ತಲೇ ಅಫ್ಘಾನಿಸ್ಥಾನದಲ್ಲಿ ಆಡಳಿತ ನಡೆಸಲು ಮುಂದಾಗಿರುವ ತಾಲಿಬಾನಿಗಳು ಅಧಿಕಾರಕ್ಕೆ ಏರುವ ಮೊದಲೇ ತಮ್ಮ ಕ್ರೌರ್ಯ  ಪ್ರದರ್ಶನ ಮಾಡುತ್ತಿದ್ದಾರೆ. ಶನಿವಾರ ಭಾರತಕ್ಕೆ ಹೊರಟಿದ್ದ 150 ಮಂದಿಯನ್ನು ಅಪಹರಿಸಿದ ಉಗ್ರರು, ಇದು ದೊಡ್ಡ ಮಟ್ಟದ ಸುದ್ದಿಯಾಗುತ್ತಿದ್ದಂತೆ ಬಿಡುಗಡೆ ಮಾಡಿದ್ದಾರೆ. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿ, ನಾವು ಯಾರನ್ನೂ ಅಪಹರಿಸಿರಲಿಲ್ಲ, ಕೇವಲ ವಿಚಾರಣೆ ನಡೆಸಿದ್ದೆವು ಎಂದು ಹೇಳಿಕೊಂಡಿದ್ದಾರೆ.

Advertisement

ಫ‌ತ್ವಾ ಹೊರಡಿಸುವುದೂ ಆರಂಭವಾಗಿದೆ. ಶನಿವಾರ ತಾಲಿಬಾನ್‌ ಅಧಿಕಾರಿಗಳು ಬಾಲಕ-ಬಾಲಕಿಯರ ಸಹಶಿಕ್ಷಣದ ವಿರುದ್ಧ ಫ‌ತ್ವಾ ಹೊರಡಿಸಿದ್ದು, ಇದು ಎಲ್ಲ ಪಾಪಗಳ ಬೇರು ಎಂದಿದ್ದಾರೆ. ಈ ಫ‌ತ್ವಾ ನಿರ್ಧಾರ ಸದ್ಯ ಹೇರಾತ್‌ ಪ್ರಾಂತ್ಯದಲ್ಲಿ ಜಾರಿಗೆ ಬಂದಿದೆ. ಉಗ್ರರು ಹೇರಾತ್‌ ಭಾಗದ ಎಲ್ಲ ವಿ.ವಿ.ಗಳ ಪ್ರಾಧ್ಯಾಪಕರು, ಖಾಸಗಿ ಸಂಸ್ಥೆಗಳ ಮಾಲಕರು ಮತ್ತು ತಾಲಿಬಾನ್‌ ಅಧಿಕಾರಿಗಳ ಜತೆ ಚರ್ಚಿಸಿ ಸಹಶಿಕ್ಷಣವನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಫ್ಘಾನಿಸ್ಥಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಂತೆ ಸುಧಾರಣವಾದಿಗಳಂತೆ ಮಾತನಾಡಿದ್ದ ತಾಲಿಬಾನ್‌ ಉಗ್ರರು ಮಹಿಳೆಯರ ಹಕ್ಕುಗಳು, ಅವರ ಶಿಕ್ಷಣಕ್ಕೆ ಒತ್ತು ನೀಡುವುದಾಗಿ ಹೇಳಿದ್ದರು. ಆದರೆ ಬಳಿಕ ಮಾಡುತ್ತಿರುವುದೆಲ್ಲವೂ ತಿರುವು ಮುರುವು ಕ್ರಮಗಳೇ. ಈಗಾಗಲೇ ಮಹಿಳಾ ಪತ್ರಕರ್ತರನ್ನು ಹಿಂಸಿಸಿ ಅವರನ್ನು ಕೆಲಸಕ್ಕೆ ಬರದಂತೆ ತಡೆಯಲಾಗಿದೆ. ಈಗ ಸಹಶಿಕ್ಷಣ ನಿಷೇಧಿಸಲಾಗಿದೆ. ಅಪಹರಿಸಿ, ಬಳಿಕ ಬಿಡುಗಡೆ ಮಾಡಿದರು

ಭಾರತಕ್ಕೆ ವಾಪಸಾಗಲು ಕಾಬೂಲ್‌ ವಿಮಾನ ನಿಲ್ದಾಣದ ಬಳಿ ಕಾಯುತ್ತಿದ್ದ ಸುಮಾರು 150 ಭಾರತೀಯರನ್ನು ತಾಲಿಬಾನಿಗಳು ಅಪಹರಿಸಿ, ಅನಂತರ ಬಿಡುಗಡೆ ಮಾಡಿದ್ದಾರೆ. ಆರಂಭದಲ್ಲೇ ಇದು ದೊಡ್ಡ ಮಟ್ಟದ ಸುದ್ದಿಯಾಯಿತು. ಇದು ಗೊತ್ತಾಗುತ್ತಿದ್ದಂತೆ ನಿಲುವು ಬದಲಿಸಿದ ಉಗ್ರರು, ನಾವು ಭಾರತೀಯರನ್ನು ಅಪಹರಿಸಿಲ್ಲ; ಸ್ಥಳೀಯ ಪೊಲೀಸ್‌ ಠಾಣೆಗೆ ವಿಚಾರಣೆಗಾಗಿ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪರಿಶೀಲನೆ ನಡೆಸಿ ಕಳುಹಿಸಿದ್ದೇವೆ ಎಂದಿದ್ದಾರೆ. ಇವರು ಕೂಡ ಸದ್ಯವೇ ಭಾರತಕ್ಕೆ ಮರಳಲಿದ್ದಾರೆ ಎಂದು ಕೇಂದ್ರ ಸರಕಾರ ಹೇಳಿದೆ.

ಈ ಮಧ್ಯೆ ಭಾರತದ ಇತರ 85 ಮಂದಿಯನ್ನು ಹೊತ್ತ ವಾಯುಸೇನೆಯ ವಿಮಾನ ಅಫ್ಘಾನಿಸ್ಥಾನದಿಂದ ತಜಕಿಸ್ಥಾನಕ್ಕೆ ತೆರಳಿದೆ. ಅಲ್ಲಿಂದ ನೇರವಾಗಿ ಭಾರತಕ್ಕೆ ಬಂದಿದೆ.

Advertisement

3 ಜಿಲ್ಲೆಗಳು ಸ್ಥಳೀಯರ ವಶ :

ಅಫ್ಘಾನಿಸ್ಥಾನದಲ್ಲಿ ಸ್ಥಳೀಯರು ಮತ್ತು ತಾಲಿಬಾನಿಗಳ ಮಧ್ಯೆ ಸಂಘರ್ಷ ತೀವ್ರವಾಗಿದೆ. ತಾಲಿಬಾನ್‌ ಉಗ್ರರು ಹೇಳುವಂತೆ ದೇಶದ ಎಲ್ಲ ಪ್ರಾಂತ್ಯಗಳ ರಾಜಧಾನಿಗಳು ಅವರ ವಶವಾಗಿವೆ. ಆದರೆ ತಾಲಿಬಾನಿಗರನ್ನು ವಿರೋಧಿಸುತ್ತಿರುವ ಸ್ಥಳೀಯರು ಬಂದೂಕು ಹಿಡಿದು ಹೋರಾಡುತ್ತಿದ್ದು, ಮೂರು ಜಿಲ್ಲೆಗಳನ್ನು ಉಗ್ರರಿಂದ ಮರುವಶ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ 40ಕ್ಕೂ ಹೆಚ್ಚು ತಾಲಿಬಾನಿಗಳನ್ನು ಹತ್ಯೆ ಮಾಡಿದ್ದೇವೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.

ಬಾಫ್ಘಾನ್‌ ಪ್ರಾಂತ್ಯದ ಪೋಲ್‌ ಇ ಹೇಸರ್‌, ದೇಹ್‌ ಸಲೇಹ್‌ ಮತ್ತು ಬಾನು ಜಿಲ್ಲೆಗಳನ್ನು ಮರುವಶಪಡಿಸಿಕೊಂಡಿದ್ದೇವೆ ಎಂದು ಸ್ಥಳೀಯ ಮಾಧ್ಯಮಗಳಿಗೆ ಹೋರಾಟಗಾರರು ತಿಳಿಸಿದ್ದಾರೆ. ಅಫ್ಘಾನಿಸ್ಥಾನದ ಧ್ವಜ ಹಿಡಿದು ವಿಜಯೋತ್ಸವ ನಡೆಸುತ್ತಿರುವ ದೃಶ್ಯಾವಳಿಗಳುಳ್ಳ ವೀಡಿಯೋವೊಂದನ್ನು ಹೋರಾಟಗಾರರು ಬಿಡುಗಡೆ ಮಾಡಿದ್ದಾರೆ.

ನಾಲ್ಕು ದಿನಗಳಲ್ಲಿ ರಕ್ಷಣೆ :

ಅಫ್ಘಾನ್‌ನಲ್ಲಿ ಇರುವ ಇತರ ದೇಶಗಳ ಜನರನ್ನು ವಾಪಸ್‌ ಕರೆತರಲು ಬಾಕಿ ಉಳಿದಿರುವುದು ಇನ್ನು ನಾಲ್ಕು ದಿನ ಮಾತ್ರ. ಸ್ಥಳಾಂತರಗೊಳಿಸಲು ನಾಲ್ಕು ದಿನಗಳು ಮಾತ್ರ ಉಳಿದಿವೆ, ಅಷ್ಟರಲ್ಲಿ ಎಲ್ಲರನ್ನೂ ಸ್ಥಳಾಂತರ ಮಾಡಬೇಕು ಎಂದು ಅಮೆರಿಕ ಮತ್ತು ಇಂಗ್ಲೆಂಡ್‌ ಸರಕಾರಗಳು ಹೇಳಿವೆ. ಕಾಬೂಲ್‌ ವಿಮಾನ ನಿಲ್ದಾಣದ ಕಡೆ ರಕ್ಷಣೆ ಇಲ್ಲದೆ ತೆರಳಬೇಡಿ ಎಂದು ಅಮೆರಿಕ ತನ್ನ ನಾಗರಿಕರಿಗೆ ಸೂಚನೆ ನೀಡಿದೆ. ವಿಮಾನ ನಿಲ್ದಾಣದ ಹೊರಗೆ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಮುಂದಿನ ದಿನಗಳು ಇನ್ನೂ ಕಷ್ಟಕರವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ದಿನಕ್ಕೆ  ಎರಡು ವಿಮಾನ :

ಅಫ್ಘಾನ್‌ನಲ್ಲಿ  ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ದಿನಕ್ಕೆ ಎರಡು ವಿಮಾನಗಳು ಅಲ್ಲಿಗೆ ತೆರಳಲಿವೆ. ಇದಕ್ಕೆ ಅಮೆರಿಕ ಮತ್ತು ನ್ಯಾಟೋ ಪಡೆಗಳು ಒಪ್ಪಿಗೆ ನೀಡಿವೆ ಎಂದು ಕೇಂದ್ರ ಸರಕಾರದ ಮೂಲಗಳು ಹೇಳಿವೆ.

ನಾಲ್ಕು ದಿನಗಳಲ್ಲಿ ರಕ್ಷಣೆ :

ಅಫ್ಘಾನ್‌ನಲ್ಲಿ ಇರುವ ಇತರ ದೇಶಗಳ ಜನರನ್ನು ವಾಪಸ್‌ ಕರೆತರಲು ಬಾಕಿ ಉಳಿದಿರುವುದು ಇನ್ನು ನಾಲ್ಕು ದಿನ ಮಾತ್ರ. ಸ್ಥಳಾಂತರಗೊಳಿಸಲು ನಾಲ್ಕು ದಿನಗಳು ಮಾತ್ರ ಉಳಿದಿವೆ, ಅಷ್ಟರಲ್ಲಿ ಎಲ್ಲರನ್ನೂ ಸ್ಥಳಾಂತರ ಮಾಡಬೇಕು ಎಂದು ಅಮೆರಿಕ ಮತ್ತು ಇಂಗ್ಲೆಂಡ್‌ ಸರಕಾರಗಳು ಹೇಳಿವೆ. ಕಾಬೂಲ್‌ ವಿಮಾನ ನಿಲ್ದಾಣದ ಕಡೆ ರಕ್ಷಣೆ ಇಲ್ಲದೆ ತೆರಳಬೇಡಿ ಎಂದು ಅಮೆರಿಕ ತನ್ನ ನಾಗರಿಕರಿಗೆ ಸೂಚನೆ ನೀಡಿದೆ. ವಿಮಾನ ನಿಲ್ದಾಣದ ಹೊರಗೆ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಮುಂದಿನ ದಿನಗಳು ಇನ್ನೂ ಕಷ್ಟಕರವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಕಾಬೂಲ್‌ಗೆ ಬಂದ ಬರಾದರ್‌ :

ಅಫ್ಘಾನ್‌ನ ಮುಂದಿನ ಅಧ್ಯಕ್ಷ ಎನ್ನಲಾಗುತ್ತಿರುವ ಪ್ರಮುಖ ತಾಲಿಬಾನಿ ಕಮಾಂಡರ್‌ ಮುಲ್ಲಾ ಬರಾದರ್‌ ಕಾಬೂಲ್‌ಗೆ ಬಂದಿದ್ದಾನೆ. ಮುಂದಿನ ಸರಕಾರ ರಚನೆ ಸಂಬಂಧ ಈತ ಮಾತುಕತೆ ನಡೆಸುತ್ತಿದ್ದಾನೆ. ಕತಾರ್‌ನಿಂದ ಕಳೆದ ಮಂಗಳವಾರವೇ ಕಂದಹಾರ್‌ಗೆ ಬಂದಿದ್ದ ಈತ, ಶನಿವಾರ  ಕಾಬೂಲ್‌ಗೆ ಆಗಮಿಸಿದ್ದಾನೆ.

 

Advertisement

Udayavani is now on Telegram. Click here to join our channel and stay updated with the latest news.

Next