ಕಾಬೂಲ್: ಸಂಪೂರ್ಣ ಅಫ್ಘಾನಿಸ್ಥಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಸಂಘಟನೆ ಸದ್ಯ ಹಂಗಾಮಿ ಸರ್ಕಾರವನ್ನು ರಚಿಸಿದೆ. ಆದರೆ ಈ ನೂತನ ಸರ್ಕಾರದ ಪ್ರಮಾಣ ವಚನ ಕಾರ್ಯಕ್ರಮವನ್ನು ರದ್ದು ಮಾಡಿದೆ. ಸಂಪನ್ಮೂಲಗಳು ವ್ಯರ್ಥವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ತಾಲಿಬಾನ್ ಹೇಳಿದೆ.
ನೂತನ ಸರ್ಕಾರ ರಚನೆ ಕಾರ್ಯಕ್ರಮವನ್ನು ನಡೆಸಲು ಈ ಹಿಂದೆ ತಾಲಿಬಾನ್ ಯೋಜನೆ ಹಾಕಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ರಷ್ಯಾ, ಚೀನಾ, ಪಾಕಿಸ್ಥಾನ, ಇರಾನ್ ಮತ್ತು ಕತಾರ್ ದೇಶಗಳಿಗೆ ಆಹ್ವಾನ ನೀಡಿತ್ತು ಎಂದು ವರದಿಯಾಗಿತ್ತು.
ಆದರೆ ಮಿತ್ರರಾಷ್ಟ್ರಗಳ ಒತ್ತಡದಿಂದಾಗಿ ಸಮಾರಂಭವನ್ನು ರದ್ದುಗೊಳಿಸಲಾಗಿದೆ ಎಂದು ರಷ್ಯಾದ ಟಸ್ ನ್ಯೂಸ್ ಏಜನ್ಸಿ ವರದಿ ಮಾಡಿದೆ.
ಇದನ್ನೂ ಓದಿ:ಜೀವಜಲ, ವಿಶ್ವ ದರ್ಶನ ಸೇವಾ ಸಂಸ್ಥೆಯಿಂದ ಶಿರಸಿ, ಯಲ್ಲಾಪುರಕ್ಕೆ ಹೊಸ ಆಂಬುಲೆನ್ಸ್ ಕೊಡುಗೆ
ಅಮೆರಿಕ ಮತ್ತು ನ್ಯಾಟೋ ಮಿತ್ರ ರಾಷ್ಟ್ರಗಳು ಕತಾರ್ ಮೂಲಕ ತಾಲಿಬಾನ್ ಗೆ ಒತ್ತಡ ಹಾಕಿ ಸಮಾರಂಭವನ್ನು ರದ್ದುಗೊಳಿಸಿದೆ ಎನ್ನಲಾಗಿದೆ. ಅದ್ದೂರಿ ಸಮಾರಂಭ ನಡೆಸಿದರೆ ಅದು ಅಮಾನವೀಯ ಎಂದಾಗಬಹುದು. ಹೀಗಾಗಿ ರದ್ದು ಮಾಡಬೇಕು ಎಂದು ಕತಾರ್ ಮೂಲಕ ಒತ್ತಡ ಹಾಕಿದ್ದವು ಎಂದು ವರದಿಯಾಗಿದೆ.
ಈ ಬಗ್ಗೆ ತಾಲಿಬಾನ್ ಹೇಳಿಕೆ ನೀಡಿದ್ದು, ನೂತನ ಸರ್ಕಾರ ರಚನೆಯ ಕಾರ್ಯಕ್ರಮವು ರದ್ದಾಗಿದೆ. ನಮ್ಮ ಸಚಿವರು ಈಗಾಗಲೇ ಕೆಲಸ ಆರಂಭಿಸಿದ್ದಾರೆ, ಜನರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದಿದೆ.