ಪ್ರಪಂಚದ ಎಲ್ಲ ಮಹಾನಗರಗಳು ಕೂಡ ತಮ್ಮೊಳಗೆ ನೂರಾರು ನಿಗೂಢಗಳನ್ನು ಹುದುಗಿಸಿ ಇಟ್ಟುಕೊಂಡಿರುತ್ತವೆ. ಮೇಲ್ನೋಟಕ್ಕೆ ಸುಂದರ, ಪ್ರಶಾಂತ ಎನಿಸುವ ಮಹಾನಗರಗಳ ಅಂತರಾಳ ಕೆದಕುವ ಕೆಲಸಕ್ಕೆ ಕೈ ಹಾಕಿದರೆ ಅಚ್ಚರಿ, ವಿಸ್ಮಯ, ಆಘಾತ ಎಲ್ಲವೂ ಒಟ್ಟಿಗೇ ಎದುರಾಗಬಹುದು. ಇಂಥದ್ದೇ ಒಂದು ಮಹಾನಗರದ ಚಿತ್ರಣ ಈ ವಾರ ತೆರೆಗೆ ಬಂದಿರುವ “ಟೇಲ್ಸ್ ಆಫ್ ಮಹಾನಗರ’ ಸಿನಿಮಾದಲ್ಲೂ ಇದೆ.
ಸಿನಿಮಾದ ಹೆಸರೇ ಹೇಳುವಂತೆ, “ಮಹಾನಗರ’ದಲ್ಲಿ ಜನಸಾಮಾನ್ಯರ ಅರಿವಿಗೆ ಬಾರದ ಒಂದಷ್ಟು “ಟೇಲ್ಸ್’ ಗಳನ್ನು ಪೋಣಿಸಿ ಅದಕ್ಕೊಂದು ದೃಶ್ಯರೂಪ ಕೊಟು ಟೇಲ್ಸ್ ಆಫ್ ಮಹಾನಗರ’ ಸಿನಿಮಾದಲ್ಲಿ ಪ್ರೇಕ್ಷಕರ ಮುಂದೆ ತರಲಾಗಿದೆ.
ಅಮಾಯಕರ ಮೇಲೆ ವೈದ್ಯ ಕೀಯ ವಿಜ್ಞಾನದ ಪ್ರಯೋಗ, ಮಾನಸಿಕ ಪ್ರಕ್ಷೋಭೆ, ಪ್ರೀತಿಯ ಹುಡುಕಾಟ, ಬದುಕಿಗಾಗಿ ಹೋರಾಟ, ಹೀಗೆ “ಮಹಾ ನಗರ’ದ ಜನಜೀವನದ ಹಲವು ಎಳೆಗಳನ್ನು ಒಂದೆಡೆ ಸೇರಿಸಿ ಅದನ್ನು ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಎಲ್ಲೂ ಬೋರ್ ಆಗದಂತೆ ನಿರೂಪಿಸಿರುವುದು ಸಿನಿಮಾದ ಹೆಗ್ಗಳಿಕೆ.
ಸಿನಿಮಾದ ಮೊದಲರ್ಧ ಬೇರೆ ಬೇರೆ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಕಥೆ ಮತ್ತು ಪಾತ್ರಗಳು ಮಧ್ಯಂತರದ ನಂತರ ಒಂದೆಡೆ ಸೇರಿ ಹೊಸ ದಿಕ್ಕಿನ ಕಡೆಗೆ ಸಾಗುತ್ತವೆ. ಅಂತಿಮವಾಗಿ ಇದೆಲ್ಲದಕ್ಕೂ ಕ್ಲೈಮ್ಯಾಕ್ಸ್‌ನಲ್ಲಿ ತಾರ್ಕಿಕ ಅಂತ್ಯವನ್ನು ನಿರೀಕ್ಷಿಸಬಹುದು. ಕನ್ನಡದ ಮಟ್ಟಿಗೆ ಹೇಳುವು ದಾದರೆ, “ಟೇಲ್ಸ್ ಆಫ್ ಮಹಾನಗರ’ ಬೆನ್ನುತಟ್ಟ ಬಹುದಾದ ಹೊಸ ಪ್ರತಿಭೆಗಳ ಪ್ರಯತ್ನ ಎನ್ನಬಹುದು.
ಮೊದಲರ್ಧ ಕೊಂಚ ಮಂದವೆನಿಸುವ ಚಿತ್ರಕಥೆ ಮತ್ತು ನಿರೂಪಣೆ ಮಧ್ಯಂತರದ ನಂತರ ಪಾದರಸದಂತೆ ಓಡುತ್ತದೆ. ಉಳಿದಂತೆ ಯುವ ನಟ ಅಥರ್ವ್, ಸಂಪತ್ ಮೈತ್ರೇಯ, ಆರ್. ಜೆ. ಅನೂಪ, ಆಶಿಶ್ ಅತಾವ್ಡೆ, ರೂಪಾ ರಾಯಪ್ಪ, ವೆಂಕಟೇಶ್, ನಾಗರಾಜ್, ಮಧು ಹೆಗ್ಡೆ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ, ಸಂಕಲನ ಮತ್ತು ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.
“ಟೇಲ್ಸ್ ಆಫ್ ಮಹಾನಗರ’ ಮಾಮೂಲಿ ಸಿದ್ಧಸೂತ್ರಗಳನ್ನು ಇಟ್ಟುಕೊಂಡು ಬರುವ ಕಮರ್ಶಿಯಲ್ ಸಿನಿಮಾಗಳಿಗಿಂತ ಹೊರತಾದ ಸಿನಿಮಾ
ಜಿ.ಎಸ್.ಕಾರ್ತಿಕ ಸುಧನ್