Advertisement

ಎರೆ ಮಣ್ಣಿನ ಕೆರೆ ಕಥೆಗಳು

04:18 PM Feb 02, 2020 | Sriram |

ಒಮ್ಮೆ ಭರ್ತಿಯಾದರೆ ಮೂರು ವರ್ಷ ನೀರ ನೆಮ್ಮದಿ ನೀಡುವ ಶಕ್ತಿ ಎರೆ ಸೀಮೆಯ ಕೆರೆಗಿದೆ. ವರ್ಷಕ್ಕೊಮ್ಮೆ ನೆರೆಹಾವಳಿಯ ಸಮಸ್ಯೆ ಎದುರಿಸುವ ನಮಗೆ ನೀರು ಹಿಡಿದು ಗೆಲ್ಲಲು ಸಾಧ್ಯವಿಲ್ಲವೇ?

Advertisement

ದಶಕಗಳ ಹಿಂದೆ ಗದಗ ಜಿಲ್ಲೆ ಶಿರಹಟ್ಟಿಯ ಎತ್ತಿನಹಳ್ಳಿಯ ಹೊಲಗಳಲ್ಲಿ ಅಡ್ಡಾಡುತ್ತಿದ್ದೆ. ರಸ್ತೆ ಪಕ್ಕದ ಸಣ್ಣ ಪುಟ್ಟ ಹೊಂಡಗಳಲ್ಲಿ ನೀರಿತ್ತು. ಬ್ಯಾಡಗಿ ಮೆಣಸು, ಜೈದರ್‌ ಹತ್ತಿ ಬೆಳೆಯ ಆಸುಪಾಸಿನ ಕೆರೆಯಲ್ಲಿಯೂ ನೀರು ಕಾಣಿಸಿತು. ಜೊತೆಗಿದ್ದ ಸಿದ್ದರಾಮ “ಗೌಡರ, ಹಿಂದಕ ನಾವು ಹೊಲಕ ಹೋಗೋ ಮುಂದ ಕುಡಿಯೋ ನೀರು ಒಯ್ತಾ ಇರಲಿಲಿÅà. ಮಳೆ ನೀರು ಕೃಷಿ ಹೊಂಡದಾಗ ಇರತಿದುÌ. ಅದ್ನ ಕುಡಿತಿದ್ವಿ’ ಎನ್ನುತ್ತಾ ಒಂದಿಷ್ಟು ನೀರ ನೆಲೆ ತೋರಿಸಿದರು. ವರ್ಷಕ್ಕೆ 15 ಮಳೆ ಸುರಿಯುವ ಪ್ರದೇಶ, ಹೆಚ್ಚೆಂದರೆ 500 ಮಿಲಿಮೀಟರ್‌ ಮಳೆ ಬರಬಹುದು. ಎರೆ ಸೀಮೆ ಒಣಬೇಸಾಯದಲ್ಲಿ ಬದುಕಿ ಅನ್ನ ತೋರಿಸುತ್ತಿರುವುದೇ ಅದರ ಅಸಾಧ್ಯ ತಾಕತ್ತಿನಿಂದ!

ನೀರನ್ನು ಹಿಡಿದಿಡುವ ಎರೆ ಮಣ್ಣು
ಬಾಗಲಕೋಟೆ ಜಿಲ್ಲೆ ಜಮಖಂಡಿಯ ಹೊಲಕ್ಕೆ ಹೋದಾಗಲೂ ಬಿರು ಬೇಸಗೆಯಲ್ಲಿ ನೀರು ತುಂಬಿದ ಕೆರೆ ನೋಡಿ ಅಚ್ಚರಿ. “ಸರ್ರಾ, ಮೊನ್ನಿ ಮಳೀ ಬಂದಿತ್ತಲಿÅà. ಅದ್ಕ ಕೆರೆಯಾಗ ನೀರು ಕಾಣಾ¤ವ’ ಎಂದು ಚುಟುಕಾಗಿ ಕೃಷಿಕರು ಉತ್ತರಿಸಿದರು. ನಮ್ಮ ಭಾಷೆಯಲ್ಲಿ ಮೊನ್ನೆ ಅಂದ್ರೆ ನಿನ್ನೆಯ ಹಿಂದಿನ ದಿನವಲ್ಲವೇ? ಹೀಗಾಗಿ ಅಲ್ಲಿನ ಪರಿಸರದಲ್ಲಿ ಓಡಾಡುವಾಗೆಲ್ಲ ಈ ಮೊನ್ನಿನ ಮಳೆ ಮಣ್ಣು ರಸ್ತೆಯನ್ನು ಒದ್ದೆಯಾಗಿಸಿದ್ದು, ಹೊಲದ ನೆಲ ಹಸಿಯಾಗಿಸಿದ್ದು ಕಂಡೀತೆಂದು ಕಣ್ಣಾಡಿಸಿದೆ. ಆದರೆ ಕೆರೆಯಲ್ಲಿ ಬಿಟ್ಟು ಬೇರೆಲ್ಲಿಯೂ ನೀರು ಕಾಣಿಸಲಿಲ್ಲ. ಯಾವ ತಾರೀಖೀನಂದು ಈ ಊರಿಗೆ ಕೊನೆಯ ಮಳೆ ಬಂತೆಂದು ವಿಚಾರಿಸುತ್ತಾ ನಾಲ್ಕಾರು ಜನರನ್ನು ಕೇಳಿದಾಗ ನಾಲ್ಕು ತಿಂಗಳ ಹಿಂದೆ ಮಳೆ ಸುರಿದಿತ್ತೆಂದು ಗೊತ್ತಾಯಿತು! ಬಿಸಲ ಉರಿ ಮಧ್ಯೆ ಕೆರೆ ನೋಡಿದರೆ ಮೊನ್ನೆಯ ಮಳೆಯ ನೀರೆಂದು ನಂಬುವಂತಿತ್ತು.

ಮೂರು ವರ್ಷ ನೀರಿಗೆ ಸಮಸ್ಯೆಯಿಲ್ಲ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ರಾಜ್ಯದಾದ್ಯಂತ 2015-16ರಿಂದ ಕೆರೆಗಳ ಪುನರುಜ್ಜೀವನ ಕಾರ್ಯಮಾಡುತ್ತಿದೆ. ರಾಜ್ಯದ ಸುಮಾರು ಮುನ್ನೂರಕ್ಕೂ ಹೆಚ್ಚು ಕೆರೆಗಳಿಗೆ ಪುನಶ್ಚೇತನ ಮಾಡಲಾಗಿದೆ. ಜನರ ಸಹಭಾಗಿತ್ವದ ಜಲಕಾಯಕ ಕುರಿತ ಗ್ರಂಥ ರಚನೆಗೆ ಕ್ಷೇತ್ರ ಪ್ರವಾಸದಲ್ಲಿ ರೋಣ ತಾಲೂಕಿನ ಮಲ್ಲಾಪುರ, ನಿಡಗುಂದಿ, ಯಲಬುರ್ಗಾದ ಕರಮುಡಿ ಕೆರೆಗಳಿಗೆ ಹೋದಾಗ, ಉತ್ತಮ ಮಳೆಯಿಂದ ಕೆರೆ ತುಂಬಿತ್ತು. ಜನ ಕುಡಿಯುವ ನೀರಿಗಾಗಿ ಆಶ್ರಯಿಸಿದ್ದರು. ನಮಗಿನ್ನು ಮೂರು ವರ್ಷ ನೀರಿಗೆ ಸಮಸ್ಯೆಯಿಲ್ಲವೆಂದ ಹಳ್ಳಿಗರ ಮಾತು ನಂಬಲಾಗಲಿಲ್ಲ. ನಾಲ್ಕಾರು ಸಾರಿ ಕೇಳಿ ಸತ್ಯವೆಂದು ಖಚಿತಪಡಿಸಿಕೊಳ್ಳಬೇಕಾಯ್ತು! ವಿಜಯಪುರ, ಸಿಂಧನೂರಿನ ರೈತರು “ಒಂದು ತಾಸು ಮಳಿ ಸುರಿದ್ರೆ ವರ್ಷದ ರೊಟ್ಟಿàರಿ’ ಎಂದು ಬಿಳಿಜೋಳದ ಬೆಳೆ ನೆನಪಿಸಿಕೊಂಡು ಮಣ್ಣಿನ ನೀರು ಹಿಡಿಯುವ ತಾಕತ್ತು ಅನುಭವಿಸಿ ಹೇಳುತ್ತಾರೆ.

ಮೂರು ವರ್ಷ ಬರ, ನಂತರದ ವರ್ಷ ಮಳೆ ಎರೆ ಸೀಮೆಯ ಸಾಮಾನ್ಯ ಲಕ್ಷಣ. ನಮಗೆ ಬರದ ಮೊದಲ ವರ್ತಮಾನ ಸಿಗುವುದೇ ಇಲ್ಲಿಂದ! ಎಕರೆಗೆ ಹತ್ತು ಹದಿನೈದು ಬೇವು, ಹೊಂಗೆ, ಕರಿಜಾಲಿ ಮರಗಳಿರುತ್ತಿದ್ದ ಹೊಲಗಳಲ್ಲಿ ಮರಗಳು ಕಡಿಮೆ. ಬದು ನಿರ್ವಹಣೆ ಸರಿಯಿಲ್ಲದ್ದರಿಂದ ಫ‌ಲವತ್ತಾದ ಮಣ್ಣು ಕೊಚ್ಚಿ ಹೋಗಿ ಕೆರೆಯಂಗಳ ಸೇರುತ್ತದೆ. ಎರೆ ಹೊಲದ ಸೀಮೆಯಲ್ಲಿ ಕೆರೆಗಳ ಸಂಖ್ಯೆ ಕಡಿಮೆಯಿದೆ. ಒಂದು ಕೆರೆ ನಿರ್ಮಿಸಿದ ಬಳಿಕ ಅದು 50 ವರ್ಷ ಬಾಳುತ್ತದೆಂದು ನೀರಾವರಿ ಇಲಾಖೆ ವರದಿ ಹೇಳುತ್ತದೆ. ಈ ಮಾತು ಎರೆ ಸೀಮೆಗೆ ಅನ್ವಯಿಸುವುದಿಲ್ಲ.

Advertisement

ಬೆಳೆ ಗೆಲ್ಲುವ ತಂತ್ರ
ತೀವ್ರ ಬರಗಾಲ ಬಂದ ನಾಲ್ಕು ವರ್ಷಗಳ ಹಿಂದೆ ಬರ ಪ್ರವಾಸ ಕೈಗೊಂಡಿದ್ದೆ. ರಾಯಚೂರಿನ ಮಾನ್ವಿ ತಾಲೂಕಿನ ಸಿಂಗಡದಿನ್ನಿ, ಲಿಂಗಸೂರಿನ ಬಸಾಪುರ ಪ್ರದೇಶಗಳಲ್ಲಿ ಅಂಥ ತೀವ್ರ ಬರದಲ್ಲಿಯೂ ನೀರಿನ ಸಮಸ್ಯೆಯಿಲ್ಲವೆಂದು ಕೆಲವು ರೈತರು ಹೇಳಿದ್ದರು. ಎರೆ ಹೊಲದಲ್ಲಿ ನಿರ್ಮಿಸಿದ ಕೆರೆಗಳಲ್ಲಿ ಕೋಟ್ಯಂತರ ಲೀಟರ್‌ ನೀರು ನಿಂತಿತ್ತು. ಹೊಲದಲ್ಲಿ ಜಾಸ್ತಿ ನೀರು ನಿಂತರೆ ಬೆಳೆಯ ಬೇರು ಕೊಳೆತು ಸಸಿಗಳು ಸಾಯುತ್ತವೆ. 300- 500 ಮಿಲಿಮೀಟರ್‌ ಮಳೆ ವರ್ಷದಲ್ಲಿ ಸೂಕ್ತ ಸಮಯಕ್ಕೆ ಸುರಿದರೆ ಪರವಾಗಿಲ್ಲ. ಜಾಸ್ತಿ ಬಂದರೆ ಕಷ್ಟ. ಹೀಗಾಗಿ ಹೊಲವನ್ನು ಬೆಳೆಯೋಗ್ಯವಾಗಿಸಲು ಒಳಗಟ್ಟಿ, ಗೂಂಡಾವರ್ತಿ ನಿರ್ಮಿಸುವ ಪಾರಂಪರಿಕ ತಂತ್ರಗಳು ಶತಮಾನಗಳಿಂದ ಬಳಕೆಯಲ್ಲಿವೆ. “ಉಣತೀದಿ ದೊಡ್ಡೆಮ್ಮೆ ಹಾಲು ಹೈನ, ಕರಿ ಮಣ್ಣಿನ ಎರಿ ಭೂಮಿಯಲ್ಲಿ ಸಿರಿ ಅಡಗಿದೆ ನೋಡ’ ಎಂದು ಇಂದಿಗೆ 180 ವರ್ಷಗಳ ಹಿಂದೆಯೇ ಎರೆ ಹೊಲದಲ್ಲಿ ಬೆಳೆ ಗೆಲ್ಲುವ ತಂತ್ರಗಳನ್ನು ರಾಯಚೂರಿನ ಸಂತೆಕಲ್ಲೂರಿನ ಘನಮಠ ಶಿವಯೋಗಿಗಳು “ಕೃಷಿ ಜ್ಞಾನ ಪ್ರದೀಪಿಕೆ’ ಪುಸ್ತಕದಲ್ಲಿ ಮಾರ್ಮಿಕವಾಗಿ ಬರೆದಿದ್ದಾರೆ.

ದಾಖಲೆಯಲ್ಲಿ ಮಾತ್ರ ಉಳಿಯುತ್ತೆ ಕೆರೆ
ಇವತ್ತು ನಿರ್ಮಿಸಿದ ಹತ್ತಾರು ಎಕರೆ ವಿಸ್ತೀರ್ಣದ ಐದಡಿ ಆಳದ ಕೆರೆ ಒಮ್ಮೆ ಮಳೆ ನೀರು ಜೋರಾಗಿ ಹರಿದು ಬಂದರೂ ಒಂದೇ ವರ್ಷದಲ್ಲಿ ಆಟದ ಬಯಲಾಗಿ ಬದಲಾಗಬಹುದು! ಅತ್ಯಂತ ಹಗುರವಾದ ಎರೆ ಮಣ್ಣು, ನೀರಿನ ಜೊತೆಗೆ ಬೆರೆತು ಕೆರೆ ದಂಡೆ, ತೂಬಿನ ಸುತ್ತ ಮೊದಲು ಶೇಖರಣೆಯಾಗುತ್ತದೆ. ನಂತರ ಕಳೆಗಿಡಗಳು ವ್ಯಾಪಿಸುತ್ತಾ ಸೂಕ್ತ ನಿರ್ವಹಣೆ ಮಾಡದಿದ್ದರೆ ನೀರು ನಿಲ್ಲಿಸುವ ಸಾಮರ್ಥ್ಯ ಕಳೆದುಕೊಂಡು, ದಾಖಲೆಯಲ್ಲಿ ಮಾತ್ರ ಕೆರೆಯಾಗಿ ಉಳಿಯುತ್ತದೆ. ಗ್ರಾಮೀಣ ಭಾಷೆಯಲ್ಲಿ ಹೇಳುವುದಾದರೆ ಚೊಂಬಿನ ಆಕಾರ ಮಾಯವಾಗಿ ಸಮತಟ್ಟಾದ ತಟ್ಟೆಯ ರೂಪ ಪಡೆಯುತ್ತದೆ.

– ಶಿವಾನಂದ ಕಳವೆ

ಮುಂದಿನ ಭಾಗ
ಕರುನಾಡ ಕೆರೆಯಾತ್ರೆ-13. ಸರಕಾರೀ ಕುರುಡರು ಹಾಗೂ ಕೆರೆಯ ಹೂಳು

Advertisement

Udayavani is now on Telegram. Click here to join our channel and stay updated with the latest news.

Next