ಕಾರ್ಕಳ: ಪ್ರತಿಭಾನ್ವೇಷಣೆ ಮತ್ತು ಶಿಷ್ಯವೇತನ ನೀಡುವುದಕ್ಕಾಗಿ ನಡೆಯುವ ಎನ್‌ಟಿಎಸ್ ಮತ್ತು ಎನ್‌ಎಂಎಂಎಸ್ ಪರೀಕ್ಷೆಗಳಿಗೆ ನೋಂದಾಯಿಸಿಕೊಳ್ಳುವ ರಾಜ್ಯದ ವಿದ್ಯಾರ್ಥಿಗಳ ಉತ್ಸಾಹಕ್ಕೆ ಕೋವಿಡ್-19 ಅಡ್ಡಿ ಉಂಟುಮಾಡಿಲ್ಲ. ಈ ಬಾರಿ ರಾಜ್ಯದಿಂದ ಅತ್ಯಧಿಕ ನೋಂದಣಿ ಆಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲೂ ಹೆಚ್ಚು ಮಕ್ಕಳು ಪರೀಕ್ಷೆ ಬರೆಯಲಿದ್ದು, ಪುತ್ತೂರು ಮತ್ತು ಕಾರ್ಕಳ ತಾಲೂಕುಗಳಿಂದ ಗರಿಷ್ಠ ನೋಂದಣಿ ಆಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಯುವ ಜನತೆಯಲ್ಲಿ ಮೂಲಜ್ಞಾನದ ಕೊರತೆಯಿದೆ. ಇದನ್ನು ನಿವಾರಿಸಿ ಪರೀಕ್ಷೆಗಳಿಗೆೆ ತಯಾರು ಮಾಡುವುದಕ್ಕಾಗಿ ಎನ್‌ಟಿಎಸ್ (ನ್ಯಾಶನಲ್ ಟ್ಯಾಲೆಂಟ್ ಸರ್ಚ್) ಮತ್ತು ಎನ್‌ಎಂಎಂಎಸ್ (ನ್ಯಾಶನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಶಿಪ್) ಪರೀಕ್ಷೆಗಳು 8ನೇ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಯುತ್ತವೆ. ಇತ್ತೀಚಿನ ವರ್ಷಗಳ ತನಕವೂ ಈ ಪರೀಕ್ಷೆಗಳನ್ನು ಬರೆಯುವವರ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ ಈ ಬಾರಿ ನಗರ, ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಿದ್ದಾರೆ.
ಪ್ರಸ್ತುತ ರಾಜ್ಯದ ಎಲ್ಲ ಜಿಲ್ಲೆಗಳ ಶಾಲೆಗಳಲ್ಲಿ ಈ ಪರೀಕ್ಷೆಗಳಿಗೆ ಸಂಬಂಧಿಸಿ ಆನ್‌ಲೈನ್ ಅರ್ಜಿ ಸ್ವೀಕಾರ ನಡೆದು ಪರೀಕ್ಷಾ ಪೂರ್ವ ಸಿದ್ಧತೆಯ ತರಗತಿಗಳು ನಡೆಯುತ್ತಿವೆ. ಜಿಲ್ಲೆ, ತಾಲೂಕುವಾರು ನೋಡಲ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2020ರ ನವೆಂಬರ್‌ನಲ್ಲಿ ನಡೆಯಬೇಕಿದ್ದ ಪರೀಕ್ಷೆ ಕೊರೊನಾದಿಂದ ಜನವರಿಯಲ್ಲಿ ನಡೆಯಲಿದೆ.
ಸ್ಕಾಲರ್‌ಶಿಪ್ :
ಎನ್‌ಟಿಎಸ್ ಪರೀಕ್ಷೆ ತೇರ್ಗಡೆಯಾದವರಿಗೆ ಸ್ಕಾಲರ್‌ಶಿಪ್ ಸಿಗುತ್ತದೆ. ರಾಷ್ಟ್ರ ಮಟ್ಟದ ಪರೀಕ್ಷೆ ಉತ್ತೀರ್ಣರಾದವರಿಗೆ ಉನ್ನತ ಶಿಕ್ಷಣದ ತನಕವೂ ವಿದ್ಯಾರ್ಥಿ ವೇತನ ಸೌಲಭ್ಯವಿದೆ. ಎನ್‌ಎಂಎಂಎಸ್ ಪರೀಕ್ಷೆ ತೇರ್ಗಡೆ ಯಾದವರಿಗೆ 9ರಿಂದ 12ನೇ ತರಗತಿಯ ವರೆಗೆ ವರ್ಷಕ್ಕೆ 12 ಸಾವಿರ ರೂ.ಗಳಂತೆ ಒಟ್ಟು 48 ಸಾವಿರ ರೂ. ಸ್ಕಾಲರ್‌ಶಿಪ್ ದೊರಕುತ್ತದೆ.
ಪರೀಕ್ಷೆಯ ಉದ್ದೇಶ :
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿ ಗಳ ಪ್ರತಿಭೆಯನ್ನು ಗುರುತಿಸಿ ಪೋಷಿಸುವುದು. ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ನೀಡುವುದು.
ಪರೀಕ್ಷೆ ಹೇಗೆ? :
- ಎನ್‌ಟಿಎಸ್: 10ನೇ ತರಗತಿ ವಿದ್ಯಾರ್ಥಿಗಳಿಗೆ
- ಎನ್‌ಎಂಎಂಎಸ್: 8ನೇ ತರಗತಿಯವರಿಗೆ
- ಎನ್‌ಟಿಎಸ್: 2 ಹಂತಗಳಲ್ಲಿ ಪರೀಕ್ಷೆ – ರಾಜ್ಯ ಮತ್ತು ರಾಷ್ಟ್ರ ಮಟ್ಟ
- ರಾಜ್ಯ ಮಟ್ಟ- ಡಿಎಸ್‌ಆರ್‌ಟಿಯಿಂದ
- ರಾಷ್ಟ್ರ ಮಟ್ಟ- ಎನ್‌ಸಿಇಆರ್‌ಟಿಯಿಂದ ಎರಡೂ ಪರೀಕ್ಷೆಗಳಿಗೆ
- ನೋಂದಣಿಗೆ ಅರ್ಹತೆ
- ವಾರ್ಷಿಕ ಆದಾಯ5 ಲಕ್ಷ ರೂ. ಸರಕಾರಿ, ಅನುದಾನಿತ, ಅನುದಾನರಹಿತ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ ವಿದ್ಯಾರ್ಥಿಗಳು
ಪ್ರೌಢ ಶಾಲಾ ಹಂತದಲ್ಲಿ ಈ ಪರೀಕ್ಷೆಗಳು ನಡೆಯುತ್ತವೆ. ಇಲ್ಲಿ ಉತ್ತರಿಸಿದ ಅನುಭವ ಮುಂದೆ ಐಎಎಸ್ ಸಹಿತ ವಿವಿಧ ಆಡಳಿತ ಸೇವಾ ಪರೀಕ್ಷೆಗಳನ್ನು ಬರೆಯಲು ಅನುಕೂಲ ಮಾಡಿಕೊಡುತ್ತದೆ. ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳ ಹೆಚ್ಚು ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ನೊಂದಾಯಿಸಿಕೊಂಡಿದ್ದಾರೆ.
– ಸುಮಂಗಲಾ ವಿ.ನಿರ್ದೇಶಕರು, ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು
ಗ್ರಾಮೀಣ ಮಕ್ಕಳು ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಹಿಂದುಳಿಯಬಾರದು. ಈ ಕಾರಣಕ್ಕೆ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ವಿಶೇಷ ಪ್ರಯತ್ನಗಳನ್ನು ನಡೆಸಲಾಗಿದೆ. ಪರಿಣಾಮವಾಗಿ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ಆಸಕ್ತಿಯಿಂದ ನೋಂದಣಿ ಮಾಡಿಕೊಂಡಿದ್ದಾರೆ.
-ವಿ. ಸುನಿಲ್ ಕುಮಾರ್, ಸಂಜೀವ ಮಠಂದೂರು ಕಾರ್ಕಳ ಮತ್ತು ಪುತ್ತೂರು ಶಾಸಕರು
-ಬಾಲಕೃಷ್ಣ ಭೀಮಗುಳಿ