ಮುಂಡಗೋಡ: ತಾಲೂಕಿನ ಪುಟ್ಟ ಗ್ರಾಮ ಚಳಗೇರಿಯ ಧನಗರ ಗೌಳಿ ಕುಟುಂಬದ ಯುವತಿಯೊಬ್ಬರು ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಮಿಂಚುವ ಮೂಲಕ 18 ವರ್ಷದ ವಯೋಮಿತಿಯಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿದ ಏಕೈಕ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚಳಗೇರಿಯ ನಯನಾ ಕೊಕರೆ ಈ ಯುವತಿ. ಪ್ರಸ್ತುತ ಮುಂಡಗೋಡದ ಜೂನಿಯರ್ ಕಾಲೇಜ್‌ನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು, ಬ್ರಿಜಸ್ ಆಫ್ ಸ್ಟೋಟ್ಸ್ ನಲ್ಲಿ ತರಬೇತಿ ಪಡೆದ ನಯನಾ 2021ರ ಅಕ್ಟೋಬರ್ 11ರಂದು ದೆಹಲಿಯ ಜವಾಹರಲಾಲ ನೆಹರು ಕ್ರೀಡಾಂಗಣದಲ್ಲಿ ನಡೆದ 3ನೇ ನ್ಯಾಷನಲ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿ 400ಮೀಟರ್ ಓಟದ ಸ್ಫರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ, ಜಿಲ್ಲೆ ಮತ್ತು ತಾಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಇವರು ದಟ್ಟ ಅಡವಿಯಲ್ಲಿ ವಾಸಿಸುವ ದನಗರ ಗೌಳಿ ಜನಾಂಗದ ಗಂಗಾರಾಮ ಕೊಕರೆ ಮತ್ತು ಗಂಗುಬಾಯಿ ದಂಪತಿಯ ಪುತ್ರಿ. ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಚಳಗೇರಿ ಗ್ರಾಮದಲ್ಲಿ ಮುಗಿಸಿದರು. ಕಾತೂರಿನ ಪ್ರೌಢಶಾಲೆಯಲ್ಲಿ8 ಮತ್ತು 9ನೇ ತರಗತಿವರೆಗೆ ವ್ಯಾಸಂಗ ಮಾಡಿ ನಂತರ ಲೊಯೋಲ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಯನ್ನು ಮುಗಿಸಿದರು. 7ನೇ ತರಗತಿಯಲ್ಲಿದ್ದಾಗ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ 100ಮೀ., 200ಮೀ., ಮತ್ತು 400ಮೀ. ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. 10ನೇ ತರಗತಿಯಲ್ಲಿ ಓದುತ್ತಿರುವಾಗ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ 4ನೇ ಸ್ಥಾನ ಪಡೆದಿದ್ದಾರೆ. ಬಾಲ್ಯದಿಂದಲೂ ಅಥ್ಲೆಟಿಕ್ಸ್ ನಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಅವರ ತಂದೆ-ತಾಯಿ ಕಷ್ಟದಲ್ಲಿಯೂ ಅವರಿಗೆ ಆತ್ಮಸ್ಥೈರ್ಯ ತುಂಬುತ್ತಾ ಬಂದಿದ್ದಾರೆ.
ಕಳೆದ ಮೂರು ವರ್ಷದಿಂದ ಬ್ರಿಜಸ್ ಆಫ್ ಸ್ಟೋಟ್ಸ್ ನಿಂದ ಅಥ್ಲೆಟಿಕ್ಸ್ ತರಬೇತಿ ಪಡೆಯುತ್ತಾ ಬಂದಿದ್ದೇನೆ. ಕ್ರೀಡೆಯಲ್ಲಿ ಆಸಕ್ತಿ ಇದ್ದವರು ತಾಲೂಕಿನಲ್ಲಿ ಬಹಳಷ್ಟು ಕ್ರೀಡಾಪಟುಗಳು ಇದ್ದಾರೆ. ಅದರಲ್ಲಿಯೂ ಚೆನ್ನಾಗಿ ಸಾಧನೆ ಮಾಡುವವರು 13 ಪ್ರತಿಭೆಗಳು ಇದ್ದಾರೆ. ಉತ್ತಮ ಅಭ್ಯಾಸಕ್ಕಾಗಿ ತಾಲೂಕಿನ ಕ್ರೀಡಾಂಗಣದ ಓಡುವ ಟ್ರ್ಯಾಕ್ ಸರಿಪಡಿಸಿದರೆ ಇನ್ನೂ ಹೆಚ್ಚಿನ ಪ್ರತಿಭೆಗಳು ಸಾಧನೆ ಮಾಡಬಹುದು. ದೆಹಲಿಯಲ್ಲಿ ನಡೆದ ಕ್ರೀಡಾಕೂಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇನೆ. ಮುಂಬರುವ ಒಲಂಪಿಕ್ಸ್ ಗೆ ಹೆಚ್ಚಿನ ತರಬೇತಿ ಪಡೆದು ಗುರಿ ಮುಟ್ಟುವ ಪ್ರಯತ್ನ ಮಾಡುತ್ತೇನೆ. -ನಯನಾ ಕೊಕರೆ, ಅಥ್ಲೀಟ್
ನಯನಾ ಅವರ ಹಾಗೆ ತಾಲೂಕಿನಲ್ಲಿ ಬಹಳಷ್ಟು ಪ್ರತಿಭೆಗಳು ಇದ್ದಾರೆ. ಅವರು ಕೂಡ ಮುಂದೆ ಬರಬೇಕು. ಅಂತಹ ಕ್ರೀಡಾಪಟುಗಳಿಗೆ ಬ್ರಿಜಸ್ ಆಫ್ ಸ್ಟೋರ್ಟ್ಸ್ ಬೆನ್ನೆಲುಬು ಆಗಿ ನಿಲ್ಲುತ್ತದೆ. ಗ್ರಾಮೀಣ ಭಾಗದ ಕೆಲವು ಕಡೆ ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿಯೇ ಬೇಗ ಮದುವೆ ಮಾಡಿ ಬಿಡುತ್ತಾರೆ. ಅಂತಹ ಸಾಧನೆ ಮಾಡುವ ಪ್ರತಿಭೆಗಳ ಆಸೆಗೆ ತಣ್ಣೀರೆರೆಚಿದಂತಾಗುತ್ತದೆ. ಕ್ರೀಡೆಯಲ್ಲಿ ಆಸಕ್ತಿ ಇದ್ದ ಮಕ್ಕಳಿಗೆ ಪಾಲಕರು ಪ್ರೋತ್ಸಾಹ ನೀಡಬೇಕು. ಮುಂದೆ ಅವರು ನಿಮ್ಮ ಹೆಸರು ತರುತ್ತಾರೆ.
-ರಿಜ್ವಾನ್ ಬೆಂಡಿಗೇರಿ, ಬ್ರಿಜಸ್ ಆಫ್ ಸ್ಟೋಟ್ಸ್ ತರಬೇತುದಾರ
– ಮುನೇಶ ಬಿ. ತಳವಾರ.