ಶಿವಮೊಗ್ಗ: ಯಾವುದೇ ಮುನ್ಸೂಚನೆ ನೀಡದೆ ದುಬೈನಲ್ಲಿರುವ ಪತಿ ವಾಟ್ಸ್ ಆ್ಯಪ್ ಮೂಲಕ ಏಕಾಏಕಿ ತ್ರಿವಳಿ ತಲಾಖ್ ನೀಡಿದ್ದು ನ್ಯಾಯಕ್ಕಾಗಿ ಪತ್ನಿ ಮಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ಆರಂಭಿಸಿದ್ದಾರೆ.
ತಲಾಖ್ ನೀಡುವ ಮೂಲಕ ಪತಿಯಿಂದ ನನಗೆ ಅನ್ಯಾಯವಾಗಿದ್ದು, ನ್ಯಾಯ ದೊರಕಿಸಿಕೊಡಬೇಕೆಂದು ಆಯಿಷಾ ಸಿದ್ದಿಕಾ ಅವರು ಮಗಳೊಂದಿಗೆ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ ಮುಸ್ತಾಫಾ ಬೇಗ್ ಎಂಬುವವರನ್ನು ಪ್ರೀತಿಸಿ ದೊಡ್ಡವರ ಇಚ್ಛೆಯಂತೆ ಮದುವೆಯಾಗಿದ್ದು, ಒಬ್ಬಳು ಮಗಳು ಇದ್ದಾಳೆ. ಈಗ ಏಕಾಏಕಿ ಗಂಡ ದುಬೈನಿಂದ ವಾಟ್ಸ್‌ಆ್ಯಪ್ ಮೂಲಕ ತಲಾಖ್ ನೀಡಿ ನಮ್ಮನ್ನು ಬೀದಿಗೆ ತಳ್ಳಿದ್ದಾರೆ. ಜೀವನ ನಡೆಸಲು ಕಷ್ಟಕರವಾಗಿದ್ದು, ನನ್ನ ಮಗಳು ಸಹ ನನ್ನೊಂದಿಗೆ ಬೀದಿಗೆ ಬಂದಿದ್ದಾಳೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಂಡನಿಂದ ತಲಾಖ್ ಪಡೆಯಲು ಸುತಾರಾಂ ಒಪ್ಪಿಗೆ ಇಲ್ಲ. ಗಂಡನೊಂದಿಗೆ ಜೀವನ ನಡೆಸಬೇಕೆಂಬುದು ನನ್ನ ಇಚ್ಛೆ.ನನ್ನ ಇಂದಿನ ಈ ಪರಿಸ್ಥಿತಿಗೆ ನನ್ನ ಗಂಡ ಹಾಗೂ ನನ್ನ ತಾಯಿ ಕಡೆಯವರಲ್ಲಿ ಹೇಳಿಕೊಂಡರು ಯಾರೂ ಸಹಾಯ ಮಾಡಿಲ್ಲ. ಈಗಾಗಲೇ ಅನಿಷ್ಟ ಪದ್ಧತಿ ವಿರುದ್ಧ ಹೋರಾಟ ನಡೆಸುತ್ತಿದ್ದು, ಪೊಲೀಸ್ ಠಾಣೆ, ಸಂಬಂಧಪಟ್ಟ ಅಧಿಕಾರಿಗಳುಮತ್ತು ಮಹಿಳಾ ಸಂಘಟನೆಗಳಿಗೆ ದೂರು ನೀಡಿದ್ದರೂ ನನಗೆ ನ್ಯಾಯ ದೊರಕಿಲ್ಲ. ನನಗೆ ನನ್ನ ಗಂಡನಿಂದ ಸೂಕ್ತ ನ್ಯಾಯ ಬೇಕಾಗಿರುವುದರಿಂದ ಪ್ರತಿಭಟನೆ ನಡೆಸುತ್ತಿದ್ದು, ಸಾರ್ವಜನಿಕರು ನನ್ನೊಂದಿಗೆ ಕೈ ಜೋಡಿಸಿ ಆಗಿರುವ ಅನ್ಯಾಯ ಸರಿಪಡಿಸಲು ನೆರವು ನೀಡಬೇಕೆಂದು ಕೋರಿದ್ದಾರೆ.