Advertisement

ತಲಾಖ್‌: ಮರುಮಂಡನೆಗೆ ನಿರ್ಧಾರ

02:53 AM Jun 13, 2019 | Sriram |

ಹೊಸದಿಲ್ಲಿ: ಅಧ್ಯಾದೇಶ ರೂಪದಲ್ಲಿ ಜಾರಿಯಲ್ಲಿದ್ದ ತ್ರಿವಳಿ ತಲಾಖ್‌ ನಿಷೇಧ ಮಸೂದೆಯನ್ನು ಪುನಃ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 16ನೇ ಲೋಕಸಭೆಯನ್ನು ವಿಸರ್ಜಿಸುತ್ತಿದ್ದಂತೆ ಈ ಅಧ್ಯಾದೇಶವೂ ಮಾನ್ಯತೆ ಕಳೆದುಕೊಂಡಿತ್ತು. ಮಸೂದೆ ಲೋಕಸಭೆಯಲ್ಲಿ ಅನುಮೋದನೆ ಪಡೆದಿತ್ತಾದರೂ, ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಆಕ್ಷೇಪದಿಂದ ಅನುಮೋದನೆ ಪಡೆದಿರಲಿಲ್ಲ. ಮೂಲಗಳ ಪ್ರಕಾರ ತ್ರಿವಳಿ ತಲಾಖ್‌ ಮಸೂದೆಯನ್ನು ಮೊದಲ ಅಧಿವೇಶನದಲ್ಲೇ ಮಂಡಿಸಲಾಗುತ್ತದೆ.

ಆಧಾರ್‌ ಕಾಯ್ದೆಗೆ ತಿದ್ದುಪಡಿ: ಮತ್ತೂಂದು ಪ್ರಮುಖ ನಿರ್ಣಯದಲ್ಲಿ ಆಧಾರ್‌ ಅನ್ನು ಬ್ಯಾಂಕ್‌ ಖಾತೆ ತೆರೆಯಲು ಮತ್ತು ಮೊಬೈಲ್ ಸಂಪರ್ಕ ಪಡೆಯಲು ಸ್ವಯಂಪ್ರೇರಿತವಾಗಿ ಬಳಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಆಧಾರ್‌ ಮಸೂದೆಯ ತಿದ್ದುಪಡಿಗೆ ಕೇಂದ್ರ ಸಂಪುಟ ಅನುಮತಿ ನೀಡಿದೆ. ಮುಂಬರುವ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುತ್ತದೆ. ಈ ಮಸೂದೆಯಲ್ಲಿ, ಮಕ್ಕಳಿಗೆ 18 ವರ್ಷ ತುಂಬಿದ ನಂತರ ಆಧಾರ್‌ ರದ್ದುಗೊಳಿಸುವ ಅಧಿಕಾರವೂ ಇರುತ್ತದೆ. ಅಷ್ಟೇ ಅಲ್ಲ, ಆಧಾರ್‌ ದುರ್ಬಳಕೆ ಮಾಡಿದರೆ ಕಠಿನ ದಂಡ ವಿಧಿಸುವ ಪ್ರಸ್ತಾವನೆಯೂ ಇದರಲ್ಲಿದೆ.

ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆ: ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಇನ್ನೂ ಆರು ತಿಂಗಳಿಗೆ ವಿಸ್ತರಿಸಲು ಸಂಪುಟ ಸಮಿತಿ ಬುಧವಾರ ಸಮ್ಮತಿಸಿದೆ. ಈಗಾಗಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದ್ದು, ಜುಲೈ 3ಕ್ಕೆ ಅಂತ್ಯಗೊಳ್ಳಲಿದೆ. ಇದನ್ನು ವಿಸ್ತರಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಂಪುಟ ಸಭೆಯ ಅನಂತರ ಪ್ರಸ್ತಾವನೆಯನ್ನು ರಾಷ್ಟ್ರಪತಿಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿ ಅನುಮೋದನೆಯ ನಂತರ ಇದು ಜಾರಿಗೆ ಬರಲಿದೆ.

ಅವಧಿ ವಿಸ್ತರಣೆ: ಕೇಂದ್ರದ ಪಟ್ಟಿಯಲ್ಲಿ ಒಬಿಸಿ ಉಪ ವರ್ಗೀಕರಣ ಮಾಡುವುದಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಸಮಿತಿಯ ಅವಧಿಯನ್ನು ವಿಸ್ತರಿಸಲು ಕೇಂದ್ರ ಸಂಪುಟ ಸಮ್ಮತಿ ನೀಡಿದೆ. ಈ ಸಮಿತಿಯು ಕೇಂದ್ರದ ಒಬಿಸಿ ಪಟ್ಟಿಯಲ್ಲಿರುವ ಸಮುದಾಯಗಳ ಉಪ ವರ್ಗೀಕರಣದ ಬಗ್ಗೆ ಅಧ್ಯಯನ ನಡೆಸಿ ಶಿಫಾರಸು ಮಾಡಲಿದೆ. ಸಮಿತಿಯ ಅವಧಿಯು 2019 ಮೇನಲ್ಲಿ ಪೂರ್ಣಗೊಂಡಿದ್ದು, ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next