Advertisement

ತ್ರಿವಳಿ ತಲಾಖ್‌ ವಿರೋಧಿ  ಕೂಗಿಗೆ ಮೋದಿ ಬೆಂಬಲ

09:19 AM Apr 17, 2017 | |

ಭುವನೇಶ್ವರ/ಲಕ್ನೋ: ಮುಸ್ಲಿಮರಲ್ಲಿ ಜಾರಿಯಲ್ಲಿರುವ ತ್ರಿವಳಿ ತಲಾಖ್‌ ಪ್ರಕ್ರಿಯೆಯು ವಿವಾದಕ್ಕೀಡಾಗಿರುವ ಸಂದರ್ಭ ದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರೂ ಈ ಕುರಿತು ಧ್ವನಿಯೆತ್ತಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೇ ತ್ರಿವಳಿ ತಲಾಖ್‌ ಬಗ್ಗೆ ಪ್ರಸ್ತಾವಿಸಿರುವ ಅವರು, “ಮುಸ್ಲಿಂ ಮಹಿಳೆ ಯರಿಗೆ ನ್ಯಾಯ ಒದಗಿಸುವ ಕೆಲಸ ನಡೆಯ ಬೇಕು’ ಎಂದು ಪ್ರತಿಪಾದಿಸಿದ್ದಾರೆ.

Advertisement

ಇನ್ನೊಂದೆಡೆ ಪ್ರಧಾನಿ ಹೇಳಿಕೆ ಬೆನ್ನಲ್ಲೇ ಲಕ್ನೋದಲ್ಲಿ ಮಾತನಾಡಿ ರುವ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಪ್ರಧಾನ ಕಾರ್ಯದರ್ಶಿ ಮೌಲಾನಾ ವಾಲಿ ರೆಹಮಾನಿ, “ವೈಯಕ್ತಿಕ ಕಾನೂನಿನಲ್ಲಿ ಬದಲಾವಣೆ ತರುವುದಕ್ಕೆ ಬಹುತೇಕ ಮುಸ್ಲಿಮರ ವಿರೋಧವಿದೆ. ಮುಸ್ಲಿಂ ವೈಯಕ್ತಿಕ ಕಾನೂನನ್ನು ಅನುಷ್ಠಾನ ಮಾಡುವುದು ನಮಗೆ ಸಾಂವಿಧಾನಿಕವಾಗಿ ಬಂದಿರುವ ಹಕ್ಕು. ಹಾಗಾಗಿ ಶರಿಯಾ ಕಾನೂನಿನಲ್ಲಿ ಮೂರನೆಯವರ ಹಸ್ತಕ್ಷೇಪಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅದನ್ನು ನಾವು ಸಹಿಸುವುದೂ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಇದರ ಜತೆಗೆ ಇನ್ನು ಮುಂದೆ ಶರಿಯಾದಲ್ಲಿ ಹೇಳಿರುವಂತೆ, ಸಕಾರಣಗಳನ್ನು ಕೊಡದೆ ಪತ್ನಿಗೆ ತ್ರಿವಳಿ ತಲಾಖ್‌ ನೀಡುವ ವ್ಯಕ್ತಿಗೆ ಸಾಮಾಜಿಕ ಬಹಿಷ್ಕಾರ ಹಾಕಲು ಹಾಗೂ ದಂಡ ವಿಧಿಸಲು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.

ಕಳೆದ ಅ.7ರಂದು ಕೇಂದ್ರ ಸರಕಾರವು ತ್ರಿವಳಿ ತಲಾಖ್‌, ನಿಕಾಹ್‌ ಹಲಾಲಾ ಮತ್ತು ಬಹುಪತ್ನಿತ್ವವನ್ನು  ವಿರೋಧಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಲಿಂಗ ಸಮಾನತೆ ಮತ್ತು ಜಾತ್ಯತೀತತೆಯ ಆಧಾರದಲ್ಲಿ ಈ ಪದ್ಧತಿಗಳನ್ನು ಪರಿಶೀಲಿಸಬೇಕು ಎಂದು ನ್ಯಾಯಾ ಲಯಕ್ಕೆ ಮನವಿ ಸಲ್ಲಿಸಿತ್ತು. ಇನ್ನೊಂದೆಡೆ, ತ್ರಿವಳಿ ತಲಾಖ್‌ನಿಂದ ನೊಂದಿದ್ದ ಕೆಲವು ಮಹಿಳೆಯರೂ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಇದನ್ನು ಖಂಡಿಸಿದ್ದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ಮಾಡಲು ಬಿಡುವುದಿಲ್ಲ ಎಂದಿತ್ತು.

ತ್ರಿವಳಿ ತಲಾಖ್‌: ಬಹಿಷ್ಕಾರ, ದಂಡ
ಲಕ್ನೋದಲ್ಲಿ ಮಾತನಾಡಿರುವ ಮೌಲಾನಾ ವಾಲಿ ರೆಹಮಾನಿ, “ತ್ರಿವಳಿ ತಲಾಖ್‌ ವಿಚಾರದಲ್ಲಿ ಕೆಲವೊಂದು ತಪ್ಪು ತಿಳಿವಳಿಕೆಗಳಿವೆ. ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರವೇ ತ್ರಿವಳಿ ತಲಾಖ್‌ಗೆ ಅವಕಾಶವಿರುತ್ತದೆ. ಹಾಗಾಗಿ ಯಾರು ಸರಿಯಾದ ಕಾರಣಗಳನ್ನು ನೀಡದೆ ಅಥವಾ ತಮ್ಮಿಚ್ಛೆಗೆ ಅನುಸಾರವಾಗಿ ಪತ್ನಿಗೆ ತಲಾಖ್‌ ನೀಡುತ್ತಾರೋ ಅಂಥವರಿಗೆ ಸಾಮಾಜಿಕ ಬಹಿಷ್ಕಾರ ಹಾಕುವ ಹಾಗೂ ದಂಡ ವಿಧಿಸುವ ನಿರ್ಧಾರ ಕೈಗೊಂಡಿದ್ದೇವೆ’ ಎಂದು ತಿಳಿಸಿದ್ದಾರೆ. “ಸಾಮಾಜಿಕ ಬಹಿಷ್ಕಾರ, ದಂಡ ಸಹಿತ ತಲಾಖ್‌ಗೆ ಸಂಬಂಧಿಸಿ ಕೆಲವು ನಿಯಮಗಳನ್ನು ಆದಷ್ಟು ಬೇಗ ಜಾರಿಗೊಳಿಸುತ್ತೇವೆ. ಶುಕ್ರವಾರ ಮಧ್ಯಾಹ್ನದ ವಿಶೇಷ ನಮಾಜ್‌ ವೇಳೆ ಈ ನಿಯಮಗಳನ್ನು ಓದಿ ಹೇಳುವಂತೆ ಹಾಗೂ ಅವುಗಳ ಅನುಷ್ಠಾನದ ಪ್ರಾಮುಖ್ಯವನ್ನು ಜನರಿಗೆ ತಿಳಿಸುವಂತೆ ದೇಶದ ಎಲ್ಲ ಮಸೀದಿಗಳ ಮೌಲಾನಾಗಳು ಹಾಗೂ ಇಮಾಮ್‌ಗಳಿಗೆ ಸೂಚಿಸಲಾಗುವುದು’ ಎಂದೂ ಅವರು ಹೇಳಿದ್ದಾರೆ.

Advertisement

ತೆಲಂಗಾಣದಲ್ಲಿ ಮುಸ್ಲಿಂ ಮೀಸಲಾತಿ ಶೇ.4ರಿಂದ 12ಕ್ಕೇರಿಕೆ
ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮುಸ್ಲಿಮರಿಗಿದ್ದ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ ಶೇ.12ಕ್ಕೇರಿಸಿ ತೆಲಂಗಾಣ ಸರಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಅವರು ತಮ್ಮ ಚುನಾವಣಾ ಆಶ್ವಾಸನೆಯನ್ನು ಈಡೇರಿಸಿದ್ದಾರೆ. ರವಿವಾರ ನಡೆದ ತೆಲಂಗಾಣ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮುಸ್ಲಿಮರ ಮೀಸಲಾತಿಯನ್ನು ಶೇ.12ಕ್ಕೇರಿಸುವ ವಿಧೇಯಕವನ್ನು ಅಂಗೀಕರಿಸಲಾಯಿತು. ಜತೆಗೆ ಇದೇ ವಿಧೇಯಕದ ಭಾಗವಾಗಿ ಪರಿಶಿಷ್ಟ ಜನಾಂಗೀಯರ ಕೋಟಾವನ್ನು ಶೇ.6ರಿಂದ 10ಕ್ಕೇರಿಸಲಾಯಿತು. ಆದರೆ ಮೀಸಲಾತಿ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ, ಇದನ್ನು ಕೋಮುರಾಜಕೀಯ ಎಂದು ಬಣ್ಣಿಸಿದೆ. ಜತೆಗೆ ಕಲಾಪಕ್ಕೆ ಅಡ್ಡಿ ಉಂಟುಮಾಡಲು ಯತ್ನಿಸಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ಅಸೆಂಬ್ಲಿಯಲ್ಲಿರುವ ಎಲ್ಲ ಐವರು ಬಿಜೆಪಿ ಸದಸ್ಯರನ್ನು ಅಮಾನತು ಮಾಡಲಾಗಿದೆ. 

ತಲಾಖ್‌ಗೆ ಒಪ್ಪದ್ದಕ್ಕೆ ಆ್ಯಸಿಡ್‌ ಎರಚಿದರು!
ತ್ರಿವಳಿ ತಲಾಖ್‌ ವಿಚಾರ ಚರ್ಚೆಯಾಗುತ್ತಿರುವ ನಡುವೆಯೇ ಉತ್ತರಪ್ರದೇಶದ ಫಿಲಿಬಿಟ್‌ನಲ್ಲಿ ಮುಸ್ಲಿಂ ಮಹಿಳೆಯೊಬ್ಬಳ ಮೇಲೆ ಆ್ಯಸಿಡ್‌ ದಾಳಿ ನಡೆದಿದೆ. ಫೋನ್‌ ಮೂಲಕ ಪತಿಯು ನೀಡಿದ ತಲಾಖ್‌ ಅನ್ನು ಒಪ್ಪದ್ದಕ್ಕೆ ಅತ್ತೆಯ ಮನೆಯವರು ರೆಹಾನಾ (40) ಎಂಬಾಕೆ ಮೇಲೆ ಆ್ಯಸಿಡ್‌ ಎರಚಿದ್ದಾರೆ. ಬೆನ್ನು ಪೂರ್ತಿ ಸುಟ್ಟ ಗಾಯಗಳಾಗಿದ್ದು, ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 18 ವರ್ಷದ ಹಿಂದೆ ಮತ್ಲಬ್‌ ಎಂಬವರು ರೆಹಾನಾರನ್ನು ಮದುವೆಯಾಗಿದ್ದರು. ಅನಂತರ ದಂಪತಿ ಅಮೆರಿಕಕ್ಕೆ ಹೋಗಿ ನೆಲೆಸಿದ್ದರು. 2011ರಲ್ಲಿ ಭಾರತಕ್ಕೆ ವಾಪಸಾದ ಬಳಿಕ ಮತ್ಲಬ್‌ ಒಬ್ಬರೇ ಅಮೆರಿಕಕ್ಕೆ ತೆರಳಿದ್ದರು. ಇತ್ತೀಚೆಗೆ ಫೋನ್‌ ಮಾಡಿ 3 ಬಾರಿ ತಲಾಖ್‌ ನೀಡಿದ್ದರು. ಇದನ್ನು ವಿರೋಧಿಸಿದ್ದ ರೆಹಾನಾ, ಅತ್ತೆ ಮನೆಯಿಂದ ಹೊರಹೋಗಲು ಒಪ್ಪಿರಲಿಲ್ಲ. ಈ ಕಾರಣಕ್ಕಾಗಿ ಅವರು ರೆಹಾನಾ ಮೇಲೆ ಆ್ಯಸಿಡ್‌ ಎರಚಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಬಾಬ್ರಿ ತೀರ್ಪು ಸ್ವಾಗತಿಸುತ್ತೇವೆ
ಬಾಬರಿ ಮಸೀದಿ ವಿವಾದ ಕುರಿತೂ ಮಾತನಾಡಿದ ರೆಹಮಾನಿ, “ವಿವಾದಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸುತ್ತೇವೆ. ಆದರೆ, ನ್ಯಾಯಾಲಯದ ಹೊರಗೆ ಸಂಧಾನ ಮಾತುಕತೆಗೆ ನಮ್ಮ ವಿರೋಧವಿದೆ’ ಎಂದಿದ್ದಾರೆ.

ಕೆಟ್ಟ  ಪಿಡುಗು ನಿರ್ಮೂಲ ಅಗತ್ಯ
ರವಿವಾರ ಬಿಜೆಪಿ ಕಾರ್ಯ ಕಾರಿಣಿಯಲ್ಲಿ ತ್ರಿವಳಿ ತಲಾಖ್‌ ಅನ್ನು ಪ್ರಸ್ತಾವಿಸಿದ ಪ್ರಧಾನಿ ಮೋದಿ, “ಸಾಮಾ ಜಿಕ ಪಿಡುಗುಗಳನ್ನು ಕಂಡೊಡನೆ ಸಮಾಜವು ಎಚ್ಚೆತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಬೇಕು. ತ್ರಿವಳಿ ತಲಾಖ್‌ ವಿಚಾರದಲ್ಲಿ ಮುಸ್ಲಿಂ ಸಮುದಾಯ ದೊಳಗೆ ಯಾವುದೇ ಸಂಘರ್ಷ ನಡೆಯಬಾರದು. ಕೆಟ್ಟ ಪಿಡುಗನ್ನು ಸಾಮಾಜಿಕ ಜಾಗೃತಿಯ ರೂಪದಲ್ಲಿ ನಿರ್ಮೂಲನೆ ಮಾಡಬೇಕು. ನಮ್ಮ ಮುಸ್ಲಿಂ ಸಹೋದರಿಯರಿಗೆ ನ್ಯಾಯ ಸಿಗಬೇಕು. ಅವರಿಗೆ ಅನ್ಯಾಯ ಆಗಬಾರದು ಹಾಗೂ ಅವರನ್ನು ಯಾರೂ ದೌರ್ಜನ್ಯಕ್ಕೀಡು ಮಾಡಬಾರದು’ ಎಂದರು. ಇದೇ ವೇಳೆ ಮುಸ್ಲಿಮರಲ್ಲಿನ ಹಿಂದುಳಿಯುವಿಕೆ ಕುರಿತೂ ಮಾತನಾಡಿದ ಮೋದಿ, “ಮುಸ್ಲಿಂ ಸಮುದಾಯದಲ್ಲಿ ಹಿಂದುಳಿ ದವರಿದ್ದಾರೆ. ಅವರನ್ನೊಳಗೊಂಡ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂಬಂಧಿಸಿ ಚರ್ಚೆ ನಡೆಯುತ್ತಿರುವಾಗಲೇ ಮಧ್ಯಪ್ರವೇಶಿಸಿದ ಪ್ರಧಾನಿ ಈ ಮಾತುಗಳನ್ನಾಡಿದ್ದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next