Advertisement
ಉಣ್ಣಿತ್ತಾನ್ ಜಯ ಗಳಿಸಿದ ಹಿನ್ನೆಲೆಯಲ್ಲಿ ಮುಸ್ಲಿಂ ಲೀಗ್ ಧ್ವಜವನ್ನು ಹಿಡಿದ ನಾಲ್ವರು ಎರಡು ಬೈಕ್‌ಗಳಲ್ಲಿ ತಲಪಾಡಿ ಟೋಲ್‌ಗೇಟ್ ಬಳಿ ಬಂದಾಗ ಸ್ಥಳೀಯರು ವಿರೋಧಿಸಿದ್ದು, ಮಾತಿನ ಚಕಮಕಿ ನಡೆಯಿತು. ಸ್ಥಳೀಯರ ವಿರೋಧದಿಂದ ಮರಳಿದ ತಂಡ ಮಂಜೇಶ್ವರದಲ್ಲಿದ್ದ ಇತರ ಕಾರ್ಯಕರ್ತರಿಗೆ ಮಾಹಿತಿ ನೀಡಿತು. ಆ ಬಳಿಕ ಅವರೆಲ್ಲ ಸುಮಾರು 50 ದ್ವಿಚಕ್ರ ವಾಹನಗಳಲ್ಲಿ ಮುಸ್ಲಿಂ ಲೀಗ್ ಧ್ವಜ ಹಿಡಿದು ತಲಪಾಡಿಗೆ ಆಗಮಿಸಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭ ಪೊಲೀಸರು ಕಾರ್ಯಕರ್ತರನ್ನು ಹಿಂದಕ್ಕೆ ಹೋಗುವಂತೆ ತಿಳಿಸಿದರೂ ಕೇಳಲಿಲ್ಲ. ಬದಲಾಗಿ ಪೊಲೀಸರು ಮತ್ತು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಲು ಮುಂದಾದರು. ಈ ವೇಳೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ನಡೆಸಿ ಹಲವು ವಾಹನಗಳನ್ನು ವಶಕ್ಕೆ ತೆಗೆದುಕೊಂಡರು.
ಈ ಘಟನೆಯ ಬಳಿಕ ಕಾರ್ಯಕರ್ತರು ಕೇರಳ ಗಡಿಪ್ರದೇಶದಲ್ಲಿ ಮೂಡಿಗೆರೆಯಿಂದ ತ್ರಿಕ್ಕರಿಪುರ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಬಸ್ಸಿಗೆ ಕಲ್ಲೆಸೆದು ಗಾಜು ಪುಡಿ ಮಾಡಿದರು. ಕೇರಳ ಪೊಲೀಸರು ಬಸ್‌ಗೆ ರಕ್ಷಣೆ ನೀಡಿ ಕಾರ್ಯಕರ್ತರನ್ನು ಚದುರಿಸಿದರು.
ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರು ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮಾರ್ಗದರ್ಶನ ನೀಡಿದರು. ಈ ನಿಟ್ಟಿನಲ್ಲಿ ಕೇರಳ ಪೊಲೀಸರೊಂದಿಗೆ ಚರ್ಚೆ ನಡೆಸಿದರು. ಡಿಸಿಪಿ ಹನುಮಂತರಾಯ, ಎಸಿಪಿ ರಾಮರಾವ್, ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಟಿ.ಆರ್., ಎಸ್.ಐ. ಗುರುವಪ್ಪ ಕಾಂತಿ ಸ್ಥಳದಲ್ಲಿದ್ದು, ಕೆಎಸ್‌ಆರ್‌ಪಿ ಪೊಲೀಸ್ ಪಡೆಯನ್ನು ತಲಪಾಡಿ ಗಡಿಪ್ರದೇಶದಲ್ಲಿ ನಿಯೋಜಿಸಲಾಗಿದೆ.