Advertisement

ನಾಳೆ ತಲಪಾಡಿ ಬಂದ್‌ಗೆ ಕರೆ; ಸ್ಥಳೀಯರಿಂದ ಟೋಲ್‌ ವಸೂಲಿಗೆ ವಿರೋಧ

03:45 AM Feb 10, 2017 | Team Udayavani |

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯ ಟೋಲ್‌ ಫ್ಲಾಝಾದಲ್ಲಿ ಟೋಲ್‌ ಸಂಗ್ರಹಕ್ಕೆ ಸಂಬಂಧಿಸಿದಂತೆ ಎರಡನೇ ದಿನವಾದ ಗುರುವಾರವೂ ಪ್ರತಿಭಟನೆ ನಡೆದಿದ್ದು, ಸಂಜೆಯ ವೇಳೆಗೆ ಸ್ಥಳೀಯರಿಂದಲೂ ಟೋಲ್‌ ಸಂಗ್ರಹ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಗಡಿನಾಡು ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಫೆ. 11ರಂದು ತಲಪಾಡಿ ಬಂದ್‌ಗೆ ಕರೆ ನೀಡಿವೆ.

Advertisement

ಹೆದ್ದಾರಿ ನಿರ್ಮಾಣ ಸಂಸ್ಥೆಯಾದ ನವಯುಗ್‌ ತಲಪಾಡಿಯಲ್ಲಿ ಬುಧವಾರ ಟೋಲ್‌ ವಸೂಲಿ ಪ್ರಾರಂಭಿಸಿತ್ತು. ಸ್ಥಳೀಯರಿಗೆ ಟೋಲ್‌ ವಿನಾಯಿತಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನಕಾರ ಬಂಧನದ ಬಳಿಕ ಟೋಲ್‌ ನಿರಾತಂಕವಾಗಿ ಮುಂದುವರಿದಿದೆ.

ಫೆ. 11ರಂದು ಕೋಟೆಕಾರಿನಿಂದ ತಲಪಾಡಿಯವರೆಗೆ ಬಂದ್‌ಗೆ ಕರೆ ನೀಡಿದ್ದು ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್‌ ನಡೆಸಿ, ವಾಹನಗಳನ್ನು ತಡೆಗಟ್ಟಿ ಟೋಲ್‌ ಸಂಗ್ರಹದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಸಂಘಟಕರು ತಿಳಿಸಿದ್ದಾರೆ. 
ಪತ್ರಿಕೆ ವಾಹನ, ಹಾಲಿನ ವಾಹನ, ಆ್ಯಂಬುಲೆನ್ಸ್‌ ಹಾಗೂ ಔಷಧ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್‌ ನಡೆಯಲಿದೆ.

ಬಸ್‌ ದರ ಏರಿಕೆ: ಟೋಲ್‌ ಬಿಸಿಯ ನಡುವೆಯೇ ಬಸ್‌ ಪ್ರಯಾಣಿಕರಿಗೆ ಯಾನದರ ಏರಿಕೆಯ ಬಿಸಿ ತಟ್ಟಿದೆ. ಕೇರಳ ಮತ್ತು ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಟಿಕೇಟ್‌ ದರ ರೂ. 17ರಿಂದ 18, 18ರಿಂದ 21ಕ್ಕೆ ಏರಿಸಲಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಟೋಲ್‌ ಪಾಸ್‌ ಅವ್ಯವಸ್ಥೆ: ಟೋಲ್‌ ಪ್ಲಾಝಾದಲ್ಲಿರುವ ಪಾಸ್‌ ವಿತರಣಾ ಕೇಂದ್ರದಲ್ಲಿ ಪಾಸ್‌ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಸರತಿ ಸಾಲಿನಲ್ಲಿ ಪಾಸ್‌ ಪಡೆಯಲು ನಿಂತರೂ ಪಾಸ್‌ ವ್ಯವಸ್ಥೆಯನ್ನು ಟೋಲ್‌ ಸಿಬಂದಿ ಕಲ್ಪಿಸಿಲ್ಲ ಎಂದು ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next