ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯ ದೇವಸ್ಥಾನ ಎಂದರೆ ನೆನಪಿಗೆ ಬರುವುದು ಯಕ್ಷಗಾನ. ಇಲ್ಲಿ ಪ್ರತಿ ದಿನ ಯಕ್ಷಗಾನ ನಿರಂತರವಾಗಿ ಉಸಿರಾಡುತ್ತಿರುತ್ತದೆ. ಯಕ್ಷಗಾನ ಪ್ರಿಯರಿಗೆ ಈ ಜಾಗವು ನಿರಂತರ ಯಕ್ಷಗಾನದ ರಸದೌತಣವನ್ನು ನೀಡುತ್ತಾ ಬಂದಿದೆ. ಬಡಗು, ಬಡಾಬಡಗು, ತೆಂಕುತಿಟ್ಟಿನ ಎಲ್ಲ ಪ್ರಸಿದ್ಧ ಮೇಳಗಳು ಒಂದಾದರೂ ಪ್ರದರ್ಶನ ನೀಡಿದೆ. ತಾಳಮದ್ದಳೆ ಕೂಟವು ನಿರಂತರ ನಡೆಯುತ್ತಿರುತ್ತದೆ. ಈ ಸಲ ಡಿ. 25 ರಂದು ದೇವಸ್ಥಾನದ ಬಯಲು ರಂಗ ಮಂಟಪದಲ್ಲಿ ತಾಳಮದ್ದಳೆ ಪರಂಪರೆಯ ವಿಶಿಷ್ಠ ಪ್ರಯೋಗ ಜೋಡುಕೂಟ ವೈಭವದಲ್ಲಿ “ಕರ್ಣಾವಸಾನ’ ಎಂಬ ಮಹಾಭಾರತದ ಕಥಾನಕ ಪ್ರಸಿದ್ಧ ಕಲಾವಿದರ ಕೊಡುವಿಕೆಯಿಂದ ಜರಗಿತು. ಒಂದು ಪಾತ್ರವನ್ನು ಇಬ್ಬಿಬ್ಬರು ಅರ್ಥದಾರಿಗಳು ವ್ಯಾಖ್ಯಾನಿಸುವ ಒಂದು ಸುಂದರ ಸನ್ನಿವೇಶ ಕಿಕ್ಕಿರಿದು ಸೇರಿದ ಶ್ರೋತೃಗಳನ್ನು ಮಂತ್ರಮುಗ್ಧರಾಗುವಂತೆ ಮಾಡಿತು. ಪ್ರಸಂಗ ಈ ಪ್ರಯೋಗಕ್ಕೆ ಹೇಳಿ ಮಾಡಿಸಿದಂತಿತ್ತು.
ಮೊದಲ ಭಾಗದಲ್ಲಿ ಭಾಗವತರಾಗಿ ಬಲಿಪ ಪ್ರಸಾದ್, ಬಲಿಪ ಶಿವ ಶಂಕರ, ಪಟ್ಲ ಸತೀಶ್ ಶೆಟ್ಟಿ, ಗಿರೀಶ್ ರೈ ಕಕ್ಕೆಪದವು ಇವರ ಸುಶ್ರಾವ್ಯ ಕಂಠಸಿರಿಯಲ್ಲಿ, ಕರ್ಣನಾಗಿ ಉಜಿರೆ ಅಶೋಕ್ ಭಟ್, ಸುಣ್ಣಂಬಲ ವಿಶ್ವೇಶ್ವರ ಭಟ್, ಅರ್ಜುನನಾಗಿ ಜಬ್ಟಾರ್ ಸಮೊ ಸಂಪಾಜೆ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಕೃಷ್ಣನಾಗಿ ವಾದಿರಾಜ ಕಲ್ಲೂರಾಯ ಮತ್ತು ಪವನ್ ಕುಮಾರ್ ಕಿರಣಕೆರೆ ವಾಕ್ಚತುರ್ಯದಿಂದ ಯಕ್ಷಗಾನ ಪ್ರೇಮಿಗಳು ಮಂತ್ರ ಮುಗ್ಧರಾಗುವಂತೆ ಮಾಡಿದರು. ಇಲ್ಲಿ ಅವರಿಗೆ ತಮ್ಮ ಪ್ರತಿಭೆಯನ್ನು ಪ್ರಸ್ತುತ ಪಡಿಸಲು ಅವಕಾಶವೂ ತುಂಬಾ ಇತ್ತು.
ಎರಡನೇ ಭಾಗದಲ್ಲಿ , ಕರ್ಣನಾಗಿ ವಾಸುದೇವ ರಂಗ ಭಟ್, ಸಂಕದಗುಂಡಿ ಗಣಪತಿ ಭಟ್, ಅರ್ಜುನನಾಗಿ ದಿನೇಶ್ ಶೆಟ್ಟಿ ಕಾವಲ್ಕಟ್ಟೆ, ಸದಾಶಿವ್ ಆಳ್ವ ತಲಪಾಡಿ, ಶಲ್ಯನಾಗಿ ವಿಟ್ಲ ಶಂಭು ಶರ್ಮ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಸರ್ಪಾಸ್ತ್ರದಲ್ಲಿ ರಾಮ ಜೋಯಿಸ ಬೆಳ್ಳಾರೆ, ಮಿಂಚಿದರು.ರವಿಚಂದ್ರ ಕನ್ನಡಿಕಟ್ಟೆ, ದೇವಿ ಪ್ರಸಾದ್ ಆಳ್ವ ತಲಪಾಡಿ ಭಾಗವತರಾಗಿ ಸಹಕರಿಸಿದರು. ಚೆಂಡೆ ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳಿಂಜಡ್ಕ , ಮುರಾರಿ ಕಡಂಬಳಿತ್ತಾಯ, ಚೈತನ್ಯ ಕೃಷ್ಣ ಪದ್ಯಾಣ , ಕಡಬ ವಿನಯ್ ಆಚಾರ್, ಪೂರ್ಣೇಶ್ ಆಚಾರ್ ಸಹಕರಿಸಿದರು. ಈ ತಾಳಮದ್ದಳೆ ಕೂಟವು ಕೇವಲ ಮನೋರಂಜನೆ ಕೂಟವಾಗದೆ , ವಿದ್ವತ್‌ಪೂರ್ಣವೂ ಆಗಿತ್ತು.
ಯೋಗೀಶ್ ಕಾಂಚನ್