ಗಜೇಂದ್ರಗಡ: ಸರ್ವ ಧರ್ಮಗಳ ತ್ರಿವೇಣಿ ಸಂಗಮದಂತಿರುವ ಭಾರತದ ಪುಣ್ಯ ಭೂಮಿಯಲ್ಲಿ ಅನೇಕ ಸಂತ ಸೂಫಿ ಶರಣರ ಮಠ, ಮಸೀದಿಗಳು ಭ್ರಾತೃತ್ವದ ಭಾಷ್ಯ ಬರೆದಿವೆ. ಅಂತಹ ಮಠ, ಮದೀಸಿಗಳಲ್ಲಿ ಕೋಟೆ ನಾಡಿನ ಟಕ್ಕೇದ ಮಸೀದಿಯೂ ಒಂದು.
ಐತಿಹಾಸಿಕ ಹಿನ್ನೆಲೆಯ ಟಕ್ಕೇದ ಬಾಬಾನವರ ಮಸೀದಿ ಸುಮಾರು ಐದನೂರು ವರ್ಷಗಳ ಇತಿಹಾಸ ಪರಂಪರೆ ಹೊಂದಿದೆ. ದರ್ಗಾದಲ್ಲಿ ಹಜರತ್ ಸೈಯ್ಯದ್ ಮಾಸೂಮ್ ಅಲಿಷಾ ಪೀರಾಂ(ರ.ಅ) ಹಾಗೂ ಹಜರತ್ ನಿಸಾರ್ ಅಲಿಷಾ ಪೀರಾಂ(ರ.ಅ) ಅವರು ಹಿಂದೂ-ಮುಸ್ಲಿಂ ಬಾಂಧವರ ಸೌಹಾರ್ದತೆ ಕೊಂಡಿಯಾಗಿ ಬೆಸೆದು ನಿಸ್ವಾರ್ಥದಿಂದ ಸೂಫಿ ಸಂತರಾಗಿ ಧಾರ್ಮಿಕ ಚಿಂತನೆ ಹರಿಕಾರರಾಗಿ ಜನಜನಿತರಾದರು.
ಸೂಫಿ ಸಂತ ಹಜರತ್ ಸೈಯ್ಯದ್ ನಿಸಾರ್ ಅಲಿಷಾ ಪೀರಾಂ (ರ.ಅ)ರಿಂದ 1965ರಲ್ಲಿ ಬಯ್ಯತ್ (ಗುರು ದೀಕ್ಷೆ) ಪಡೆದ ದರ್ಗಾದಲ್ಲಿ 8ನೇ ಪೀಠಾಧಿಪತಿಯಾಗಿ ಹಜರತ್ ಸೈಯ್ಯದ್ ಮೆಹಬೂಬ್ ಆಲಿಷಾ ಪೀರಾಂ ದರ್ಗಾದ ಸಜ್ಜಾದೆ ನಸೀನರಾಗಿ ಭಕ್ತರ ಪ್ರೀತಿಯ ಟಕ್ಕೇದ ಬಾಬಾ, ಟಕ್ಕೇದ ಅಜ್ಜ, ಟಕ್ಕೇದ ನಾನಾ ಎಂದೇ ಕರೆಯಿಸಿಕೊಂಡಿದ್ದಾರೆ. ಕಳೆದ ಮೂರು ದಶಕಗಳಿಂದ ಜಾತಿ, ಮತ, ಪಂಥ ಭೇದ ಎನಿಸದೆ ಬಯಸಿ ಬಂದ ಭಕ್ತರನ್ನು ಪ್ರೀತಿಯಿಂದ ಕಂಡು ಅವರ ನೋವು ನಲಿವು ಜತೆ ಹಲವಾರು ರೋಗ ರುಜಿನಗಳಿಗೆ ಕೇವಲ ಮಂತ್ರ ಶಕ್ತಿಯಿಂದ ಗುಣಮುಖರಾದದ್ದನ್ನು ಕೇಳಬಹುದು. ಹೀಗಾಗಿ ಕೊಪ್ಪಳ, ಬಾಗಲಕೋಟೆ, ಬೀದರ, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲದೆ ಪಕ್ಕದ ಮಹಾರಾಷ್ಟ್ರದಿಂದಲೂ ಭಕ್ತ ಸಮೂಹ ಇಲ್ಲಿಗೆ ಹರಿದು ಬರುತ್ತದೆ. ಇದೀಗ 9ನೇ ಪೀಠಾಧಿಪತಿಯಾಗಿ ಹಜರತ್ ಸೈಯ್ಯದ್ ನಿಜಾಮುದ್ದಿನಶಾ ಅಶ್ರಫಿ ಸೂಫಿ ಸಂತ ಹಜರತ್ ಮೆಹಬೂಬ್ ಅಲಿಶಾ ಪೀರಾಂರಿಂದ 2015ರಲ್ಲಿ ಬಯ್ಯತ (ಗುರುದೀಕ್ಷೆ) ಪಡೆದು ದರ್ಗಾದ ಸಜ್ಜಾದ ನಸಿನರಾಗಿ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ.
ಬೌದ್ಧ ಪೌರ್ಣಿಮೆಯೆಂದು ಉರುಸು: ಸೌಹಾರ್ದತೆ ಪ್ರತೀಕವಾದ ಹಜರತ್ ಸೈಯದ್ ಮಾಸೂಂ ಅಲಿಷಾ ಪೀರಾಂ (ರ.ಅ) ಹಜರತ್ ಸೈಯದ ನಿಸಾರ ಅಲಿಷಾ ಪೀರಾಂ(ರ.ಅ) ಅವರ ಉರುಸು ಪ್ರತಿ ವರ್ಷ ಬೌದ್ಧ ಪೌರ್ಣಿಮೆ (ಆಗಿ ಹುಣ್ಣಿಮೆ) ದಿನದಂದು ಜರುಗಲಿದೆ.
ಶುಕ್ರವಾರ ಸ್ಥಳೀಯ ಕೆಳಗಲ ಪೇಟೆಯ ತಟಗಾರ ಮಸೀದಿಯಿಂದ ಗಂಧ (ಸಂದಲ) ಆಚರಣೆ ನಡೆದಿದ್ದು, ಮೇ 18 ರಂದು ಭಾವೈಕ್ಯತಾ ಉರುಸು ಜರುಗಲಿದೆ. ಆ ದಿನದಂದೆ ಸಂಜೆ ಕೆಳಗಲ ಪೇಟೆಯ ಶ್ರೀ ದುರ್ಗಾದೇವಿ ಜಾತ್ರೆ ಉಚ್ಚಾಯ ಎಳೆದ ಬಳಿಕ ಉರುಸಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅನ್ನಸಂತರ್ಪಣೆಯಂತಹ ಆಚರಣೆಗಳಿಗೆ ಚಾಲನೆ ನೀಡುವುದರ ಜತೆಗೆ ಕಾಕತಾಳಿಯಂಬಂತೆ ಶಿರಹಟ್ಟಿಯ ಫಕೀರೇಶ್ವರ ಜಾತ್ರಾ ಮಹೋತ್ಸವವು ಇದೇ ದಿನದಂದು ನಡೆಯುತ್ತಿರುವುದು ಭಾವೈಕ್ಯತೆ ಸಾರಿ ಹೇಳುತ್ತಿದೆ.
•ಡಿ.ಜಿ. ಮೋಮಿನ್