ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋದರ ಸಂಬಂಧಿ ಮನೋಜ್ ಕುಮಾರ್ ನಾಯಕನಾಗಿ ನಟಿಸಿರುವ “ಟಕ್ಕರ್’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ವಿಡಿಯೋ ಸಾಂಗ್ ಅನ್ನು ಹೊರತಂದಿದೆ.
ಇವತ್ತಿನ ಸ್ಮಾರ್ಟ್‌ಪೋನ್ ಜಮಾನದಲ್ಲಿ ಮಹಿಳೆಯರು ಹೇಗೆಲ್ಲಾ ಇಂಟರ್‌ನೆಟ್ ಬಲೆಯೊಳಗೆ ಸಿಲುಕಿಕೊಳ್ಳುತ್ತಾರೆ ಎಂಬ ವಿಷಯವನ್ನು ಇಟ್ಟುಕೊಂಡು “ಟಕ್ಕರ್’ ಚಿತ್ರ ಮಾಡಲಾಗಿದ್ದು, ಸೈಬರ್ ಕ್ರೈಂ ಮತ್ತು ಮಹಿಳೆಯರ ಸುತ್ತ ಚಿತ್ರದ ಕಥೆ ಸಾಗುತ್ತದೆ.
ಹಾಗಾಗಿ ಚಿತ್ರದ ಮೊದಲ ವಿಡಿಯೋ ಸಾಂಗನ್ನು ಚಿತ್ರತಂಡ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಲ್ ಅವರ ಕೈಯಿಂದ ಬಿಡುಗಡೆಗೊಳಿಸಿದೆ. ಪ್ರಸ್ತುತ ರೈಲ್ವೇಸ್ ಪೊಲೀಸ್ ಐ.ಜಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೂಪಾ ಈ ಚಿತ್ರದ ಹಾಡನ್ನು ಬಿಡುಗಡೆಗೊಳಿಸಿ ಮೆಚ್ಚಿಕೊಂಡು ಚಿತ್ರತಂಡಕ್ಕೆ ಶುಭ ಕೋರಿದರು.
ಕೆ.ಎನ್.ನಾಗೇಶ್ ಕೋಗಿಲು ನಿರ್ಮಾಣದಲ್ಲಿ ಮೂಡಿಬಂದಿರುವ “ಟಕ್ಕರ್’ ಚಿತ್ರಕ್ಕೆ ವಿ. ರಘುಶಾಸ್ತ್ರಿ ಆಕ್ಷನ್-ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಮನೋಜ್‌ಗೆ ನಾಯಕಿಯಾಗಿ ಪುಟ್ಟಗೌರಿ ಮದುವೆ ಖ್ಯಾತಿಯ ರಂಜನಿ ರಾಘವನ್ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಕೆ.ಎಸ್ ಶ್ರೀಧರ್, ಶಂಕರ್ ಅಶ್ವಥ್, ಸುಮಿತ್ರಾ, ಭಜರಂಗಿ ಖ್ಯಾತಿಯ ಸೌರವ್ ಲೋಕಿ, ಸಾಧು ಕೋಕಿಲಾ, ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ಕುರಿ ಸುನಿಲ್, ಜೈ ಜಗದೀಶ್ ಮುಂತಾದ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸುಮಾರು 65 ದಿನಗಳ ಕಾಲ ಮೈಸೂರು, ಬೆಂಗಳೂರು ಮತ್ತು ಮಲೇಶಿಯಾದಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಚಿತ್ರಕ್ಕೆ ವಿಲಿಯಮ್ಸ್ ಡೇವಿಡ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿದೆ. ಕದ್ರಿ ಮಣಿಕಾಂತ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಫೆಬ್ರವರಿ ಕೊನೆಗೆ ಅಥವಾ ಮಾರ್ಚ್ ವೇಳೆಗೆ “ಟಕ್ಕರ್’ ತೆರೆಗೆ ಬರುವ ಸಾಧ್ಯತೆ ಇದೆ.