ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್ ಕುಮಾರ ಈಗ ಹೀರೋ ಆಗಿ ಎಂಟ್ರಿ ಕೊಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರೋದೇ. ಈ ಹಿಂದೆ ಮಾವ ದರ್ಶನ್ ಅವರ ಜೊತೆಗೆ ಅಂಬರೀಶ ಮತ್ತು ಚಕ್ರವರ್ತಿ ಸಿನಿಮಾಗಳಲ್ಲಿ ಮುಖಕ್ಕೆ ಬಣ್ಣ ಹಚ್ಚಿದ್ದ ಮನೋಜ್ ಈಗ `ಟಕ್ಕರ್ ಸಿನಿಮಾದ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸದ್ಯ ಟಕ್ಕರ್ ಚಿತ್ರದ ಆಡಿಯೋ ಬಿಡುಗಡೆ ಇದೇ ಸೆಪ್ಟೆಂಬರ್ 7ರಂದು ನೆರವೇರುತ್ತಿದೆ. ಈ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಮುಖ್ಯ ಅತಿಥಿಗಳಾಗಿ ಬರುತ್ತಿರುವುದು ವಿಶೇಷ.
ಟಕ್ಕರ್ ಸಿನಿಮಾದಲ್ಲಿ ಡಿಫರೆಂಟ್ ಡ್ಯಾನಿ ಕಂಪೋಸ್ ಮಾಡಿರುವ ಭಿನ್ನಬಗೆಯ ಆ್ಯಕ್ಷನ್ ಸೀನುಗಳಿವೆ. ಮತ್ತು ಪ್ಯಾಂಟಮ್ ಎನ್ನುವ ದುಬಾರಿ ಕ್ಯಾಮೆರಾದಲ್ಲಿ ಈ ಚಿತ್ರದ ಸಾಹಸ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಹುಲಿರಾಯ ಖ್ಯಾತಿಯ ನಾಗೇಶ್ ಕೋಗಿಲು ನಿರ್ಮಾಣದ ಈ ಚಿತ್ರವನ್ನು ನಿರ್ದೇಶನ ಮಾಡ್ತಿರೋದು ವಿ. ರಘು ಶಾಸ್ತ್ರಿ. ನಿರ್ದೇಶಕ ರಘು ಅವರಿಗೆ ಮನೋಜ್ ಅವರನ್ನು ಹೀರೋ ಆಗಿ ಪರಿಚಯಿಸುವ ಅವಕಾಶ ಸಿಕ್ಕಿರೋದರಿಂದ ಸಾಕಷ್ಟು ಶ್ರಮ ಹಾಕಿ ಟಕ್ಕರ್ ಸಿನಿಮಾವನ್ನು ರೆಡಿ ಮಾಡ್ತಿದ್ದಾರಂತೆ. ನಿರ್ಮಾಪಕ ನಾಗೇಶ್ ಕೋಗಿಲು ಅವರಂತೂ ಸಿನಿಮಾಗೆ ಏನೇನೂ ಕೊರತೆಯಾಗದಂತೆ ಧಾರಾಳವಾಗಿ ಖರ್ಚು ಮಾಡಿ ಟಕ್ಕರ್ ಗೆ ಪುಷ್ಠಿ ನೀಡಿದ್ದಾರೆ.
ನಮ್ಮ ಮನೆಯ ಹೆಣ್ಣುಮಕ್ಕಳ ಮಾನ-ಪ್ರಾಣಗಳನ್ನು ನಾಲ್ಕು ಗೋಡೆಗಳ ನಡುವೆ ಅವರು ಬಳಸುವ ಮೊಬೈಲ್ ಮತ್ತು ಲ್ಯಾಪ್ ಟಾಪ್ ಕಂಪ್ಯೂಟರುಗಳೇ ಅಪೋಶನ ತೆಗೆದುಕೊಳ್ಳುತ್ತಿವೆ ಎನ್ನುವ ಅನಾಹುತಕಾರಿ ವಿಚಾರವನ್ನು ಟಕ್ಕರ್ ಸಿನಿಮಾದ ಮೂಲಕ ಹೇಳಲಾಗುತ್ತಿದೆ. ಈ ಕಾಲಘಟ್ಟದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಇದು ಅನ್ನೋದು ನಾಯಕನಟ ಮನೋಜ್ ಅವರ ಅಭಿಪ್ರಾಯ.
ಈ ಹಿಂದೆ ಹುಲಿರಾಯ ಎನ್ನುವ ಸಿನಿಮಾ ನಿರ್ಮಿಸಿದ್ದವರು ಕೆ.ಎನ್. ನಾಗೇಶ್ ಕೋಗಿಲು. ತಮ್ಮ ಎಸ್.ಎಲ್.ಎನ್. ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ನಾಗೇಶ್ ಅವರು ನಿರ್ಮಿಸಿರುವ ಎರಡನೇ ಚಿತ್ರ ಟಕ್ಕರ್. ಈ ಸಿನಿಮಾದ ಮೂಲಕ ಮನೋಜ್ ಕುಮಾರ್ ತೂಗುದೀಪ ಅವರು ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಹಿಂದೆ ದರ್ಶನ್ ಅವರ ಅಂಬರೀಶ, ಚಕ್ರವರ್ತಿ ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದವರು ಮನೋಜ್ ಕುಮಾರ್. ಟಕ್ಕರ್ ಮೂಲಕ ಹೀರೋ ಆಗಿ ಬದಲಾಗುತ್ತಿರುವ ಮನೋಜ್ ಅವರ ಬಗ್ಗೆ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆಗಳು ಮನೆಮಾಡಿವೆ. ಟಕ್ಕರ್ ಚಿತ್ರದ ಆಡಿಯೋವನ್ನು ಮನೋಜ್ ಅವರ ಸೋದರ ಮಾವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಪ್ಟೆಂಬರ್ 7ರಂದು ನಡೆಯುವ ಅದ್ದೂರಿ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. `ಟಕ್ಕರ್ ನಲ್ಲಿ ಮೂರು ಹಾಡುಗಳಿವೆ. ಡಾ. ವಿ ನಾಗೇಂದ್ರ ಪ್ರಸಾದ್ ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಡ್ಯುಯೆಟ್ ಹಾಡನ್ನು ವಿಜಯಪ್ರಕಾಶ್ ಮತ್ತು ಅನುರಾಧಾ ಭಟ್ ಹಾಡಿದರೆ, ಹೀರೋ ಇಂಟ್ರಡಕ್ಷನ್ ಸಾಂಗ್ ಅನ್ನು ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಸ್ಫೂರ್ತಿದಾಯಕ ಗೀತೆಯನ್ನು ಯುವ ಹಾಡುಗಾರ ಸಂಜಿತ್ ಹೆಗ್ಡೆ ಹಾಡಿದ್ದಾರೆ. ವಿಜಯ ಪ್ರಕಾಶ್ ಹಾಡಿರುವ ಹಾಡನ್ನು ಮಲೇಶಿಯಾದಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷವೆಂದರೆ ಈ ಚಿತ್ರದ ಆರಂಭದಲ್ಲಿ ಬರುವ ನಾಯಕನ ಇಂಟ್ರಡಕ್ಷನ್ ಹಾಡಿನಲ್ಲೇ ಫೈಟ್ ಅನ್ನೂ ಅಳವಡಿಸಲಾಗಿದೆ. `ಆನೆ ನಡೆದಿದ್ದೆ ದಾರಿ ಅಲ್ವೇನ್ರಿ ಯಾರು ಕೊಡಬೇಡಿ ಟಕ್ಕರ್ ಎನ್ನುವ ಸಾಲಿನಿಂದ ಆರಂಭವಾಗುವ ಹಾಡಿನಲ್ಲಿ ಮೋಹನ್ ಅವರ ಕೊರಿಯೋಗ್ರಫಿ ಮತ್ತು ಡಿಫರೆಂಟ್ ಡ್ಯಾನಿ ಅವರ ಸಾಹಸ ಸಮ್ಮಿಲನಗೊಂಡಿದೆ. ಥ್ರಿಲ್ಲರ್ ಮತ್ತು ಸಾಹಸಪ್ರಧಾನ ಅಂಶಗಳನ್ನು ಒಳಗೊಂಡಿದೆ. ರಘುಶಾಸ್ತ್ರಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ, ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ವಿಲಿಯಮ್ಸ್ ಡೇವಿಡ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ನೃತ್ಯ ನಿದರ್ೇಶನ, ಈಶ್ವರಿ ಕುಮಾರ್ ಕಲಾ ನಿದರ್ೇಶನ, ಗುರುರಾಜ್ ದೇಸಾಯಿ ಸಂಭಾಷಣೆ ಈ ಚಿತ್ರಕ್ಕಿದೆ. ಮನೋಜ್ ಕುಮಾರ್ ಮತ್ತು ರಂಜನಿರಾಘವನ್, ಕೆ.ಎಸ್. ಶ್ರೀಧರ್, ಶಂಕರ್ ಅಶ್ವಥ್, ಸುಮಿತ್ರಾ, ಭಜರಂಗಿ ಖ್ಯಾತಿಯ ಸೌರವ್ ಲೋಕಿ, ಸಾಧು ಕೋಕಿಲಾ, ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ಕುರಿ ಸುನಿಲ್, ಜೈಜಗದೀಶ್ ಮುಂತಾದವರು ಟಕ್ಕರ್ ಸಿನಿಮಾದಲ್ಲಿದ್ದಾರೆ