ಹೊಸ ಪ್ರತಿಭೆ ಮನೋಜ್ ಅಭಿನಯದ “ಟಕ್ಕರ್” ಚಿತ್ರ ತನ್ನ ವಿಶೇಷತೆಗಳಿಂದ ಆಗಾಗ ಸುದ್ದಿಯಾಗುತ್ತಲೇ ಇದೆ. ಕೆ.ಎನ್. ನಾಗೇಶ್ ಕೋಗಿಲು ನಿರ್ಮಾಣದ ಈ ಚಿತ್ರ, ಈಗಾಗಲೇ ತನ್ನ ಬಹುಪಾಲು ಚಿತ್ರೀಕರಣವನ್ನೂ ಪೂರೈಸಿದೆ. ಮೈಸೂರಿನಲ್ಲಿ ಒಂದು ತಿಂಗಳು ಮಾತಿನ ಭಾಗದ ಚಿತ್ರೀಕರಣ ಮುಗಿಸಿ ನಂತರ ಬೆಂಗಳೂರಿನ ನಾಗರಬಾವಿ, ಹೆಚ್.ಎಂ.ಟಿ.ಫ್ಯಾಕ್ಟರಿ ಮತ್ತು ಕಂಠೀರವ ಸ್ಟುಡಿಯೋದಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದೆ.
ಇತ್ತೀಚೆಗೆ ಹೆಚ್.ಎಂ.ಟಿ.ಗ್ರೌಂಡ್‌ನಲ್ಲಿ ನಡೆದ ನಾಯಕನನ್ನು ಪರಿಚಯಿಸುವ ಸಾಹಸ ಸನ್ನಿವೇಶ ಇಡೀ ಚಿತ್ರದಲ್ಲಿ ಹೈಲೈಟ್ ಆಗಲಿದೆ. 10 ಸೆಕೆಂಡುಗಳಿಗೆ ಸಾವಿರ ಫ್ರೆಮ್‌ಗಳನ್ನು ಸೆರೆಹಿಡಿಯುವ ಫ್ಯಾಂಥಮ್ ಕ್ಯಾಮೆರಾವನ್ನು ಈ ಸೀನ್‌ಗಾಗಿ ಬಳಸಲಾಗಿದೆ ಎಂಬುದು ನಿರ್ಮಾಪಕ ನಾಗೇಶ್ ಕೋಗಿಲು ಹೇಳಿಕೆ. ಸಾಮಾನ್ಯವಾಗಿ ಸ್ಟಾರ್ ಚಿತ್ರಗಳಲ್ಲಿ ಈ ದುಬಾರಿ ವೆಚ್ಚದ ಕ್ಯಾಮೆರಾವನ್ನು ಬಳಸಲಾಗುತ್ತದೆ.
“ಟಕ್ಕರ್’ ಚಿತ್ರಕ್ಕಾಗಿ ಹೈದರಾಬಾದ್‌ನಿಂದ ಈ ಕ್ಯಾಮೆರಾವನ್ನು ತರಿಸಿ ಚಿತ್ರೀಕರಿಸಲಾಗಿದೆ. ಇನ್ನು, “ರಂಗಿತರಂಗ’, “ಇರುವುದೆಲ್ಲವ ಬಿಟ್ಟು’, “ರಾಜರಥ’ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ವಿಲಿಯಮ್ ಡೇವಿಡ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ಪ್ರಮುಖ ಸಾಹಸ ದೃಶ್ಯಕ್ಕೆ ಫ್ಯಾಂಥಮ್ ಕ್ಯಾಮೆರಾ ಹಿಡಿದಿದ್ದಾರೆ. ಅಂದಹಾಗೆ, “ಟಕ್ಕರ್’ ಚಿತ್ರದ ಎಲ್ಲಾ ಸಾಹಸ ದೃಶ್ಯಗಳನ್ನೂ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಅವರು ತುಂಬ ವಿಭಿನ್ನವಾಗಿಯೇ ಸಂಯೋಜನೆ ಮಾಡುತ್ತಿದ್ದಾರೆ ಎಂಬುದು ನಿರ್ದೇಶಕ ರಘುಶಾಸ್ತ್ರಿ ಅವರ ಮಾತು.
ಈ ಚಿತ್ರದಲ್ಲಿ “ಪುಟ್ಟಗೌರಿ ಮದುವೆ’ ಖ್ಯಾತಿಯ ರಂಜನಿ ರಾಘವನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಭಜರಂಗಿ ಲೋಕಿ, ಮನೋಜ್ ಎದುರು “ಟಕ್ಕರ್’ ಕೊಡುವ ವಿಲನ್ ಆಗಿ ಮಿಂಚಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ “ಟಕ್ಕರ್’ ತಂಡ ಹಾಡಿನ ಚಿತ್ರೀಕರಣಕ್ಕಾಗಿ ತಯಾರು ಮಾಡಿಕೊಳ್ಳುತ್ತಿದೆ. ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶಕರು.