ಬಾಗಲಕೋಟೆ: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸೋದು ಹುಡುಕಾಟಿಕೆಯಲ್ಲ ಎಂದು ಮಾಜಿ ಸಚಿವ, ಎಂಎಲ್ ಸಿ ಎಚ್. ವಿಶ್ವನಾಥ ಹೇಳಿದರು.
ಬೆಳಗಾವಿಯಲ್ಲಿ ನಡೆಯಲಿರುವ ಕುರುಬ ಸಮಾಜದ ರಾಷ್ಟ್ರೀಯ ಸಮ್ಮೇಳನ ಪೂರ್ವಭಾವಿ ಸಭೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಎಂಎಲ್ಸಿ ಬಿ.ಕೆ. ಹರಿಪ್ರಸಾದ ಅವರು ಸೂಕ್ಷ್ಮ ಸಮಾಜಗಳಿಗೆ ಆದ್ಯತೆ ನೀಡಬೇಕು ಎಂಬ ಮಾತಿಗೆ ಸಹಮತವಿದೆ. ಅತ್ಯಂತ ಹಿಂದುಳಿದ ಹಾಗೂ ಸಣ್ಣ ಸಮಾಜಗಳಿಗೆ ಅಧಿಕಾರ ಸಿಗಬೇಕು. ಆದರೆ ಈಡಿಗ ಸಮಾಜವನ್ನು ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಮಾತು ಸರಿಯಲ್ಲ ಎಂದರು.
ಈಡಿಗ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ನೀಡಿದಷ್ಟು ಆದ್ಯತೆ, ಅವಕಾಶ ಬೇರೆ ಯಾವ ಪಕ್ಷವೂ ನೀಡಿಲ್ಲ. ಈಡಿಗ ಸಮಾಜದ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದರು. ಅವರ ಪುತ್ರ ಮಧು ಬಂಗಾರಪ್ಪ ಅವರಿಗೆ ಸಧ್ಯ ಸಚಿವ ಸ್ಥಾನ ನೀಡಲಾಗಿದೆ. ಕಾಗೋಡು ತಿಮ್ಮಪ್ಪ ಅವರು ಕಾಂಗ್ರೆಸ್ ಸರ್ಕಾರದಲ್ಲಿಯೇ ಸ್ಪೀಕರ್, ಸಚಿವರೂ ಆಗಿದ್ದರು. ಹೀಗೆ ಹಲವು ನಾಯಕರಿಗೆ ಅವಕಾಶ ಸಿಕ್ಕಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಯಾವ ಸಮಾಜವನ್ನೂ ನಿರ್ಲಕ್ಷ್ಯ ಮಾಡಲ್ಲ. ಎಲ್ಲ ಸಮಾಜವನ್ನು ಒಟ್ಟಿಗೆ ಕರೆದುಕೊಂಡು ಹೋಗುವುದೇ ಕಾಂಗ್ರೆಸ್ ಪಕ್ಷ ಎಂದರು.
ಎಷ್ಟು ಜನ ಕುರುಬರಿಗೆ ಎಷ್ಟು ಸಚಿವ ಸ್ಥಾನ ಕೊಟ್ಟಿದ್ದಾರೆ:
ಸಿದ್ದರಾಮಯ್ಯ ಜಾತಿವಾದಿ ಎಂದು ಹೇಳಿರೋದು ಒಪ್ಪಲು ಸಾಧ್ಯವಿಲ್ಲ. ಅವರು ನಾನು ದೇವರಾಜ ಅರಸು ತರಹದ ವ್ಯಕ್ತಿ ಎಂದು ಎಲ್ಲೂ ಹೇಳಿಲ್ಲ. ಮತ್ತೊಬ್ಬ ದೇವರಾಜ ಅರಸು ಆಗಲು ಸಾಧ್ಯವಿಲ್ಲ. ಸಿದ್ದರಾಮಯ್ಯ, ಅರಸು ಅವರನ್ನು ಅನುಯಾಯಿಸುವ ನಾಯಕ. ಜಾತಿವಾದಿ ಎಂಬ ಟೀಕೆಯೂ ಸಲ್ಲ. ಹಾಗಾದರೆ ಸಧ್ಯ ಸರ್ಕಾರದಲ್ಲಿ ಎಷ್ಟುಜನ ಕುರುಬರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸೋದು ಹುಡುಗಾಟದ ಮಾತಲ್ಲ. 136 ಜನ ಶಾಸಕರಿದ್ದಾರೆ. ತನ್ನದೇ ಆದ ಹೈಕಮಾಂಡ್ ಇದೆ. ಜೆಡಿಎಸ್ ರೀತಿ, ಮನೆಯ ಹೈಕಮಾಂಡ್ ಇಲ್ಲ ಎಂದು ಹೇಳಿದರು.