ರಾಯಚೂರು: ದ್ವಿತೀಯ ಪಿಯು ಪರೀಕ್ಷೆಗೆ ನಿಯೋಜನೆಯಾಗಿರುವ ಅಧಿಕಾರಿ ಮತ್ತು ಸಿಬ್ಬಂದಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಬೇಕೆಂದು ಅಪರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ನಡೆದ ದ್ವಿತೀಯ ಪಿಯು ಪರೀಕ್ಷೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾ.1ರಿಂದ 17ರವರೆಗೆ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಲಿವೆ. ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ಬೆಂಚುಗಳ ವ್ಯವಸ್ಥೆ ಮಾಡಬೇಕು. ಅನಾವಶ್ಯಕ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರ ಹಾಗೂ ಸುತ್ತಲಿನಲ್ಲಿ ಇರದಂತೆ ಎಚ್ಚರ ವಹಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು. ರೂಟ್ ಅಧಿಕಾರಿಗಳ ವಾಹನಗಳಿಗೆ ಜಿಪಿಎಸ್ ಯಂತ್ರ ಅಳವಡಿಸಲಾಗಿರುತ್ತದೆ.
ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವಾಗ ವಾಹನವನ್ನು ಮಾರ್ಗ ಮಧ್ಯದಲ್ಲಿ ನಿಲ್ಲಿಸದೇ ನೇರವಾಗಿ ಪರೀಕ್ಷಾ ಕೇಂದ್ರಗಳಿಗೆ ಸಾಗಬೇಕು. ಪರೀಕ್ಷೆಗೆ ನಿಯೋಜಿಸಿರುವ ಸಿಬ್ಬಂದಿಗಳು ಪರೀಕ್ಷಾ ಕೊಠಡಿಗೆ ಮೊಬೈಲ್ ತರುವಂತಿಲ್ಲ. ಪರೀಕ್ಷೆ ಮುಗಿದ ನಂತರ ನಿಯೋಜಿತ ಪೊಲೀಸ್ ಸಿಬ್ಬಂದಿಯೊಂದಿಗೆ ಉತ್ತರ ಪತ್ರಿಕೆಗಳನ್ನು ಅಂಚೆ ಕಚೇರಿಗೆ ಸಲ್ಲಿಸಬೇಕು ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಲ್ಲಯ್ಯ ಸಿ.ಟಿ. ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 20,537 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಯಚೂರು ತಾಲೂಕಿನಲ್ಲಿ 7,413, ಸಿಂಧನೂರು-4,006, ಮಾನ್ವಿ-3022, ಲಿಂಗಸುಗೂರು-4,283, ದೇವದುರ್ಗ ತಾಲೂಕಿನಲ್ಲಿ 1,813 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು.
ಜಿಲ್ಲೆಯಲ್ಲಿ ಒಟ್ಟು 34 ಪರೀಕ್ಷಾ ಕೇಂದ್ರ ಸ್ಥಾಪಿಪಿದ್ದು, ರಾಯಚೂರು 11, ಸಿಂಧನೂರು 7, ಮಾನ್ವಿ 5, ಲಿಂಗಸುಗೂರು 8, ದೇವದುರ್ಗ ತಾಲೂಕಲ್ಲಿ 3 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ವಿವರಿಸಿದರು. ಡಿಡಿಪಿಐ ಬಿ.ಕೆ.ನಂದನೂರು, ಲಿಂಗಸುಗೂರು ಸಹಾಯಕ ಆಯುಕ್ತ ಮಾರುತಿ, ವಿವಿಧ ತಾಲೂಕಿನ ಬಿಇಒಗಳು, ಇತರೆ ಅಧಿಕಾರಿಗಳು ಭಾಗವಹಿಸಿದ್ದರು.