ಮಾಗಡಿ: ಪ್ರತಿಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೊಸದಾಗಿ 10 ಚೆಕ್ ಡ್ಯಾಂಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಇಒ ಟಿ.ಪ್ರದೀಪ್ ಗ್ರಾಪಂ ಪಿಡಿಒಗಳಿಗೆ ತಾಕೀತು ಮಾಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕಿನ ಗ್ರಾಪಂನಲ್ಲಿನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ಮಾತನಾಡಿ, ತಾಲೂಕು ಪಂಚಾಯ್ತಿಗೆ ನೂತನ ಇಒ ಆಗಿ ಅಧಿಕಾರ ಸ್ವೀಕರಿಸಿದ್ದೇನೆ. ಗ್ರಾಪಂ ಅಭಿವೃದ್ಧಿ ಅಧಿಕಾರಗಳ ಪರಿಚಯ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ತಮ್ಮ ಕಾರ್ಯವೈಖರಿಯ ಮೊದಲ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾಗಿ ತಿಳಿಸಿದರು.
ಜಲಾಮೃತ ಯೋಜನೆಯಡಿ ಚೆಕ್‌ಡ್ಯಾಂ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕು. ತಾಲೂಕಿನ ಎಲ್ಲ ಅಂಗನವಾಡಿ ಶೌಚಾಲಯ ಹಾಗೂ ಕಟ್ಟಡಗಳನ್ನು ಪಿಡಿಒಗಳು ಖುದ್ದು ಪರಿಶೀಲಿಸಬೇಕು. ಅಪೂರ್ಣ ಕಟ್ಟಡಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕೆಲ ಶೌಚಾಲಯಗಳ ದುರಸ್ತಿ ಕೆಲಸಗಳನ್ನು ಶೀಘ್ರದಲ್ಲಿಯೇ ಮಾಡಿಸಬೇಕು. ಅವಶ್ಯವಿರುವೆಡೆ ಶೌಚಾಯಲ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಗ್ರಾಮ ಸಭೆ ನಡೆಸಿ ಅನುಮೋದನೆ ಪಡೆದಿರುವ ಕುರಿತು ಪಿಡಿಒಗಳು, ತಾಪಂಗೆ ಸಂಪೂರ್ಣ ಮಾಹಿತಿ ನೀಡಬೇಕು. ಕಾಮಗಾರಿಗಳ ಚೆಕ್ ಲಿಸ್ಟ್ ತೆಗೆದ ಮೇಲೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಸ್ಥಳ ಪರಿಶೀಲನೆ ನಡೆಸಬೇಕು. ಅನವಶ್ಯಕ ವಿಷಯಗಳ ಬಗ್ಗೆ ಚರ್ಚೆ ಬೇಡ, ಕೆಲಸ ಮಾಡಿ ತೋರಿಸಬೇಕು. ಕಳಪೆ ಕಾಮಗಾರಿಗೆ ಅವಕಾಶ ಕೊಡಬೇಡಿ. ನೀವು ಮಾಡುವ ಕೆಲಸ ದೇವರ ಕೆಲಸಕ್ಕೆ ಸಮ ಎನ್ನುವಂತಿರಬೇಕು ಎಂದು ಇಒ ಸಲಹೆ ನೀಡಿದರು.
ಪಿಡಿಒಗಳು ನೂತನ ತಾಪಂ ಇಒ ಟಿ. ಪ್ರದೀಪ್ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ತಾಪಂನ ಎಲ್ಲ ಗ್ರಾಮಗಳ ಪಿಡಿಗಳು ಸಭೆಯಲ್ಲಿ ಹಾಜರಿದ್ದರು.