ಹಾನಗಲ್ಲ: ಕೋವಿಡ್-19 ಮಹಾಮಾರಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತಲಿದ್ದು, ಇದನ್ನು ತಡೆಗಟ್ಟಲು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜಾಗೃತಿ ಮೂಡಿಸಬೇಕು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಶನಿವಾರ ತಾಪಂ ಸಭಾಭವನದಲ್ಲಿ ವಿವಿಧ ಇಲಾಖೆಗಳ ಸಭೆ ನಡೆಸಿ, ಕೋವಿಡ್, ಕೃಷಿ, ಉದ್ಯೋಗ ಖಾತ್ರಿ ಯೋಜನೆಗಳ ಕುರಿತು ಇಲಾಖೆ ಅಧಿಕಾರಿಗಳ ವರದಿ ಪಡೆದು ನಂತರ ಮಾತನಾಡಿದ ಅವರು, ಈಗಾಗಲೇ ಕೋವಿಡ್ ವಾರಿಯರ್ಸ್ ಪಟ್ಟಣದ 6 ಆಶಾ ಕಾರ್ಯಕರ್ತೆಯರಿಗೆ ಸೋಕು ದೃಢಪಟ್ಟಿದೆ. ಎಲ್ಲ ಆಶಾ ಕಾರ್ಯಕರ್ತೆಯರಿಗೆ ಸಾಮೂಹಿಕವಾಗಿ ತಪಾಸಣೆ ನಡೆಸಬೇಕು. ಇದರೊಂದಿಗೆ ಎಲ್ಲ ಇಲಾಖೆಯ ಸಿಬ್ಬಂದಿಗಳಿಗೂ ಕೂಡ ತಪಾಸಣೆ ನಡೆಸಬೇಕು ಎಂದರು.
ಸರಕಾರಿ ಆಸ್ಪತ್ರೆ ವೈದ್ಯರು ಸೇರಿದಂತೆ ಸಿಬ್ಬಂದಿ ಹೋಮ್ ಕ್ವಾರೈಂಟೇನ್ ಆಗಿದ್ದಾರೆ. ಹೀಗಾಗಿ ಸಿಬ್ಬಂದಿ ಕೊರತೆ ಇದೆ. ಕೋವಿಡ್ ಸೋಂಕನ್ನು ಪರೀಕ್ಷೆ ಮಾಡಿದ ಮೇಲೆ ಡಾಟಾ ಎಂಟ್ರಿ ಮಾಡಲು ಆಪರೇಟರ್ ಬೇಕಾಗಿದ್ದಾರೆ. ಕ್ವಾರೈಂಟೇನ್‌ಗೊಳಗಾದವರನ್ನು ಸ್ಥಳಾಂತರ ಗೊಳಿಸಲು ಪ್ರತ್ಯೇಕ ವಾಹನದ ವ್ಯವಸ್ಥೆಯಾಗಬೇಕು. ಕೋವಿಡ್ ಸೋಂಕಿತರನ್ನು ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆಯಾಗಬೇಕು. ಸಿಗ್ಗಾವಿ, ಹಿರೇಕೇರೂರ ಮಾದರಿಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಬೇಕು. ಕಂಟೋನ್ಮೆಂಟ್ ಜೂನ್‌ನಲ್ಲಿರುವವರಿಗೆ ಆಹಾರ ಕಿಟ್ ಪೂರೈಸುವ ಕುರಿತು ತಾಲೂಕು ವೈದ್ಯಾದಿಕಾರಿಗಳು ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಂಸದರು, ಆಶಾ ಕಾರ್ಯಕರ್ತೆಯರ ಕೊರತೆ ನೀಗಿಸಲು ಮೂರು ಎನ್ ಜಿಓಗಳು ಮುಂದೆ ಬಂದಿದ್ದು, ಅವರನ್ನೂ ಬಳಸಿಕೊಳ್ಳುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದರು.
15ನೇ ಹಣಕಾಸು ಯೋಜನೆಯ ಹಣ ಬಿಡುಗಡೆಯಾಗಿದ್ದು, ಇದರ ಲೆಕ್ಕ ಪುಸ್ತಕ ಪ್ರತ್ಯೇಕವಾಗಿರಬೇಕು. ಕೂಡಲೆ 21 ಗ್ರಾಪಂಗಳು ಯೋಜನೆ ಸಿದ್ಧಪಡಿಸಿ ಕಾರ್ಯೋನ್ಮುಖರಾಗಬೇಕು. ಈ ಯೋಜನೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಅವಕಾಶವಿದ್ದು, ಸ್ವಚ್ಛತೆಗೆ ಬಳಸಿಕೊಳ್ಳುವ ಅವಕಾಶವಿದೆ ಎಂದು ತಾಪಂ ಇಒ ಚನ್ನಪ್ಪ ರಾಯಣ್ಣನವರ ಸೂಚಿಸಿದರು.
ವೈದ್ಯಾಧಿಕಾರಿ ರವೀಂದ್ರಗೌಡ ಪಾಟೀಲ, ತಾಪಂ ಇಒ ಚನ್ನಪ್ಪ ರಾಯಣ್ಣನವರ, ಸಿಪಿಐ ಶಿವಶಂಕರ ಗಣಾಚಾರಿ ಹಾಗೂ ಎಲ್ಲ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.