Advertisement
ಲೋಕಸಭೆ ಫಲಿತಾಂಶದ ನಂತರ “ಆಪರೇಷನ್ ಕಮಲ’ ಕಾರ್ಯಾಚರಣೆಯ ಆತಂಕದ ಗುಂಗಿನಿಂದ ಹೊರ ಬಂದು, ಆಡಳಿತ ಯಂತ್ರ ಚುರುಕುಗೊಳಿಸಲು ಮುಂದಾಗಿರುವ ಮುಖ್ಯಮಂತ್ರಿ, ಶನಿವಾರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರೊಂದಿಗೆ ಚರ್ಚಿಸಿದರು. ಬರ ನಿರ್ವಹಣೆ ಹಾಗೂ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆ ಕರೆಯುವಂತೆ ನಿರ್ದೇಶನ ನೀಡಿದರು.
Related Articles
Advertisement
ನಗರ ಪ್ರದೇಶಗಳಲ್ಲಿ ಮೂಲಸೌಕರ್ಯ, ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಣೆ ನಿಟ್ಟಿನಲ್ಲಿ ಬಿಬಿಎಂಪಿ, ಬಿಡಿಎ ಹಾಗೂ ಸಂಚಾರಿ ಪೊಲೀಸರ ಜತೆಗೂಡಿ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು. ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಈ ಸಂದರ್ಭ ಉಪಸ್ಥಿತರಿದ್ದರು.
ಸಿದ್ದು-ಎಚ್‌ಡಿಕೆ ಭೇಟಿ; ಇಬ್ಬರು ಪಕ್ಷೇತರರ ಸಂಪುಟ ಸೇರ್ಪಡೆ ಖಚಿತ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಮಾತುಕತೆ ನಡೆಸಿದರು. ಕಾವೇರಿ ನಿವಾಸಕ್ಕೆ ಆಗಮಿಸಿದ ಕುಮಾರಸ್ವಾಮಿ, ಪ್ರಸಕ್ತ ರಾಜಕೀಯ ವಿದ್ಯಮಾನ, ಸಂಪುಟ ವಿಸ್ತರಣೆ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಇದೇ ಸಂದರ್ಭದಲ್ಲಿ ಪಕ್ಷೇತರ ಶಾಸಕ ಆರ್.ಶಂಕರ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಿದ್ದರಾಮಯ್ಯ, ಕುಮಾರಸ್ವಾಮಿ ಸಮ್ಮುಖದಲ್ಲೇ ಸಮಾಲೋಚನೆ ನಡೆಸಿದರು. ಇದೇ ಸಂದರ್ಭದಲ್ಲಿ ಮತ್ತೂಬ್ಬ ಪಕ್ಷೇತರ ಶಾಸಕ ಆರ್.ನಾಗೇಶ್ ಸಹ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬಹುತೇಕ ಇಬ್ಬರೂ ಪಕ್ಷೇತರ ಶಾಸಕರು ರಾಜ್ಯ ಸಚಿವ ಸಂಪುಟ ಸೇರುವ ಸಾಧ್ಯತೆಯಿದ್ದು, ಸಂಪುಟ ವಿಸ್ತರಣೆ ದಿನಾಂಕವಷ್ಟೇ ನಿಗದಿಯಾಗಬೇಕಿದೆ.
ಎಚ್ಡಿಕೆಗೆ ಸಿದ್ದು ಸಲಹೆ: ಸುಮಾರು 45 ನಿಮಿಷಗಳ ಕಾಲ ನಡೆದ ಮಾತುಕತೆ ಸಮಯದಲ್ಲಿ “ಆಪರೇಷನ್ ಕಮಲ’ ಕಾರ್ಯಾಚರಣೆಗೆ ಅವಕಾಶ ಕೊಡದಂತೆ ಸಿದ್ದರಾಮಯ್ಯ ಅವರು ಕುಮಾರಸ್ವಾಮಿಯವರಿಗೆ ಸಲಹೆ ನೀಡಿದರು. ಸಂಪುಟದಲ್ಲಿ ಖಾಲಿಯಿರುವ ಮೂರು ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಪಕ್ಷೇತರರಿಗೆ ನೀಡಿದರೆ ಬಿಜೆಪಿಗೆ ತಿರುಗೇಟು ನೀಡಿದಂತಾಗುತ್ತದೆ.
ಅವರ ಸಂಖ್ಯಾಬಲ ಹೆಚ್ಚಾಗುವುದಿಲ್ಲ. ಇದರಿಂದ “ಆಪರೇಷನ್ ಕಮಲ’ ಕಾರ್ಯಾಚರಣೆಗೆ ಬಿಜೆಪಿ ಪ್ರಯತ್ನಿಸುವುದನ್ನೂ ತಡೆಯಬಹುದು. ಎಲ್ಲ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ. ಆದಷ್ಟು ಬೇಗ ಜಂಟಿ ಶಾಸಕಾಂಗ ಪಕ್ಷದ ಸಭೆ ಕರೆದು ಈ ಬಗ್ಗೆ ಚರ್ಚಿಸೋಣ ಎಂದು ಸಲಹೆ ನೀಡಿದರು ಎಂದು ಹೇಳಲಾಗಿದೆ.
ಸೋನಿಯಾಗೆ ಅಭಿನಂದನೆ: ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿ ಆಯ್ಕೆಯಾದ ಸೋನಿಯಾಗಾಂಧಿ ಅವರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿನಂದಿಸಿದ್ದಾರೆ. ತಮ್ಮ ಅನುಭವ ಹಾಗೂ ನಾಯಕತ್ವವು ಪ್ರತಿಪಕ್ಷಗಳಿಗೆ ಸಂಸತ್ತಿನಲ್ಲಿ ದೊಡ್ಡ ಮಟ್ಟದ ಧ್ವನಿಯಾಗಲಿ ಎಂದು ಆಶಿಸುತ್ತೇನೆ. ನಿಮಗೆ ಶುಭ ಹಾರೈಸುತ್ತೇನೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.