ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಬೆಂಬಲ ಹಾಗೂ ಧೈರ್ಯದಿಂದ ದೇಶದ್ರೋಹ ಶಕ್ತಿಗಳು ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗೂವಂತಾಗಿದ್ದು, ಇಂತಹ ಸರ್ಕಾರವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಕಿತ್ತೊಗೆಯುವುದು ಒಳ್ಳೆಯದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಬ್ಯಾಂಕ್ ಓಲೈಕೆ ರಾಜಕಾರಣದ ಮುಸುಕನ್ನು ಮುಖ್ಯಮಂತ್ರಿ ಹೊದ್ದುಕೊಂಡಿರುವುದೇ ದೇಶದ್ರೋಹಿಗಳಿಗೆ ದೊಡ್ಡ ಬಲ ಬಂದಂತಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಇದ್ದಾಗ ರಾಜ್ಯದಲ್ಲಿ 15 ಸ್ಲೀಪರ್ ಸೆಲ್ ಗಳ ವಿರುದ್ಧ ಕ್ರಮ ಕೈಗೊಂಡು ಹಲವರನ್ನು ಜೈಲಿಗೆ ಕಳುಹಿಸಲಾಗಿತ್ತು. ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ, ಹುಬ್ಬಳ್ಳಿ ಹಾಗೂ ಮಂಗಳೂರು ಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೆವು. ಯಾವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂತೋ ಅಲ್ಲಿ ಇಲ್ಲಿ, ಸಾಮಾಜಿಕ ಜಾಲತಾಣದಲ್ಲಿ ದೇಶದ್ರೋಹ ಹೇಳಿಕೆ ನೀಡುತ್ತಿದ್ದವರು ಇದೀಗ ನೇರವಾಗಿ ವಿಧಾನಸೌಧದಲ್ಲೆ ಘೋಷಣೆ ಕೂಗುವಂತಾಗಿದ್ದಾರೆ ಎಂದು ಸರ್ಕಾರದ ವಿರುದ್ದ ಹೇಳಿಕೆ ನೀಡಿದರು.
ಇದಕ್ಕೆಲ್ಲ ಮತ ಬ್ಯಾಂಕ್ ಓಲೈಕೆಯೇ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರವಿದೆ ಎಂಬ ಧೈರ್ಯ ಇದಕೆಲ್ಲ ಕಾರಣವಾಗಿದೆ ಎಂದ ಅವರು, ಪಿಎಫ್ಐ ನಿಷೇಧವಾಗಿದ್ದರೂ ಬೇರೆ, ಬೇರೆ ರೂಪದಲ್ಲಿ ಮತ್ತೆ ಸಕ್ರಿಯವಾಗಿದೆ. ಹಾವೇರಿ ಜಿಲ್ಲೆ ಹಾನಗಲ್ಲನಲ್ಲಿನ ಘಟನೆ ಹಿಂದೆಯೂ ಅವರ ಕೈವಾಡವಿದೆ ಎಂದರು.
ಗ್ರಾಮ, ಗ್ರಾಮಗಳಲ್ಲಿ ಪಿಎಫ್ ಐ ಸಕ್ರಿಯವಾಗುತ್ತಿದೆ. ದೇಶದ ಭದ್ರತೆಗೆ ಧಕ್ಕೆ ತರುವ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಸರ್ಕಾರ ಕಿತ್ತೊಗೆಯಬೇಕಾಗಿದೆ. ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ 8-10 ದಿನಗಳಲ್ಲಿ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಿದರು.