ಕೋಲಾರ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಇವುಗಳನ್ನು ತಡೆಯಲು ಶಾಶ್ವತ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ 75ರಲ್ಲಿ 14 ಅಪಘಾತ ವಲಯಗಳನ್ನು ಗುರುತಿಸಿದ್ದು, ಇಲ್ಲಿ ಸೈನ್‌ಬೋರ್ಡ್, ಹಂಪ್ಸ್, ರಿಪ್ಲೆಕ್ಟರ್ ಇತ್ಯಾದಿ ಸುರಕ್ಷತಾ ಕ್ರಮಗಳನ್ನು 5 ದಿನಗಳೊಳಗೆ ಅಳವಡಿಸುವಂತೆ ಲ್ಯಾಂಕೋ ಅಧಿಕಾರಿಗಳಿಗೆ ಸೂಚಿಸಿದರು.
ಬ್ರಿಡ್ಜ್ ನಿರ್ಮಿಸಿ: ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ 1.3 ಕಿ.ಮೀ, ಕೊಂಡರಾಜನಹಳ್ಳಿ ಬಳಿ ಸರ್ವೀಸ್ ರಸ್ತೆ ವಿಸ್ತರಣೆಗೆ ಅನುಮೋದನೆ ಯಾಗಿದ್ದು, ಇವು ಸೇರಿದಂತೆ ಮುಂದಿನ 5 ವರ್ಷಗಳಿಗೆ ಅಗತ್ಯವಾದ ಸರ್ವೀಸ್ ರಸ್ತೆ ಅಂಡರ್ ಪಾಸ್, ಫೂಟ್‌ಓವರ್ ಬ್ರಿಡ್ಜ್ ಗಳನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮವಹಿಸಬೇಕು ಎಂದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲೆಲ್ಲಿ ಹಳ್ಳಿಗಳು ಬರುತ್ತವೆ. ಅಲ್ಲಿ ಕಡ್ಡಾಯವಾಗಿ ಸರ್ವೀಸ್ ರಸ್ತೆಯನ್ನು ಒದಗಿಸಬೇಕು. ಹನುಮನಹಳ್ಳಿ ಟೋಲ್ ಬಳಿ ಇರುವ ಶೌಚಾಲಯವನ್ನು ಎರಡು ದಿನದಲ್ಲಿ ಸುಸ್ಥಿತಿಗೆ ತಂದು ಸಾರ್ವಜನಿಕರ ಬಳಕೆಗೆ ನೀಡಬೇಕು ಎಂದು ಸೂಚಿಸಿದರು.
ಕ್ರಿಮನಲ್ ಕೇಸ್: ಈ ಸಂದರ್ಭದಲ್ಲಿ ಬೆಂಗಳೂರಿನ ಎನ್‌ಎಚ್‌ಎಐ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿದ್ದು, ಸಮಿತಿ ಸೂಚಿಸುವ ಅಂಶಗಳನ್ನು ಪಾಲನೆ ಮಾಡುತ್ತಿಲ್ಲ. ಇದೇ ರೀತಿ ಯಾದರೆ ತಮ್ಮ ಹಾಗೂ ಲ್ಯಾಂಕೋ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನೆಗೆ ಕಳುಹಿಸುತ್ತೇವೆ: ಕೋಲಾರ ನಗರದ ವ್ಯಾಪ್ತಿಯ ರಸ್ತೆಗಳು ಹದಗೆಟ್ಟಿದ್ದು, ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಮತ್ತು ನಗರಸಭೆ ಮಾಡಬೇಕು ಎಂದ ಅವರು ಲೋಕೋಪಯೋಗಿ ಇಲಾಖೆಗೆ ಸೂಚಿಸಿರುವ ರಸ್ತೆಗಳನ್ನು ಶುಕ್ರವಾರ ಸಂಜೆ 5 ಗಂಟೆಯೊಳಗೆ ಗುಂಡಿ ಮುಚ್ಚಬೇಕು. ಇಲ್ಲದಿದ್ದರೆ ತಮ್ಮನ್ನು ಕಡ್ಡಾಯವಾಗಿ ಮನೆಗೆ ಕಳುಹಿಸುವ ಕ್ರಮಕೈಗೊಳ್ಳಲಾಗುವುದು ಎಂದು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಕೆಜಿಎಫ್ ಎಸ್ಪಿ ಮಹಮದ್ ಸುಜೀತಾ, ಕೋಲಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಸೇರಿದಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.