ಹಾವೇರಿ: ಮಕ್ಕಳು ಜಂತುಹುಳು ಬಗ್ಗೆ ನಿರ್ಲಕ್ಷ್ಯ ವಹಿಸದೇ ಸ್ವಯಂ ಪ್ರೇರಣೆಯಿಂದ ಮಾತ್ರೆ ಸೇವಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ, ಶಾಸಕ ನೆಹರು ಓಲೇಕಾರ ಹೇಳಿದರು.
ನಗರದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ನಂ. 02ರಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರ ಸೂಚನೆಯಂತೆ ಮಕ್ಕಳು ಮಾತ್ರೆ ಸೇವಿಸಬೇಕೆಂದು ಹೇಳಿದರು.
ಮಕ್ಕಳು ನಿಯಮಿತವಾಗಿ ಕೈತೊಳೆಯಬೇಕು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶಾಲೆಯಿಂದ ಹೊರಗುಳಿದ ನಿಮ್ಮ ಸಹಪಾಠಿಗಳಿಗೆ ಮಾತ್ರೆಯ ಬಗ್ಗೆ ಅರಿವು ಮೂಡಿಸಿ ಮಾತ್ರೆ ಸೇವಿಸಲು ಪ್ರೋತ್ಸಾಹಿಸಬೇಕು. ಸರ್ಕಾರದ ಇಂತಹ ವಿಶೇಷ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ತುಂಬಾ ಅಗತ್ಯವಾಗಿದೆ. ಜಂತುಹುಳು ಮಾತ್ರೆ ಮತ್ತು ಕಾರ್ಯಕ್ರಮದ ಬಗ್ಗೆ ನೀವು ತಿಳಿದುಕೊಂಡು ಇತರರಿಗೂ ತಿಳಿಸಿ ಜಂತುಹುಳು ಮುಕ್ತ ಸಮಾಜ ನಿರ್ಮಿಸಲು ಕೈಜೋಡಿಸಬೇಕೆಂದು ಹೇಳಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಜಯಾನಂದ ಮಾತನಾಡಿ, ಜಂತು ಹುಳು ಬಾಧೆಯಿಂದ ಅಪೌಷ್ಟಿಕತೆ, ರಕ್ತಹೀನತೆ ಸಮಸ್ಯೆಗಳು ಉಂಟಾಗು ತ್ತದೆ. ಬೌದ್ಧಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮಕ್ಕಳ ಬುದ್ಧಿಶಕ್ತಿ ಕಡಿಮೆಯಾಗಿ ಕಲಿಕೆಯಲ್ಲಿ ಹಿಂದೆ ಬೀಳಬಹುದು ಹಾಗೂ ಶಾಲಾ ಹಾಜರಾತಿ ಕಡಿಮೆಯಾಗಿ ಕ್ರಮೇಣ ಶಾಲೆಯಿಂದ ಹೊರ ಗುಳಿಯುವ ಸಾಧ್ಯತೆ ಇದೆ ಎಂದರು.
ಜಂತುಹುಳುಗಳ ನಿರ್ಮೂಲನೆಗಾಗಿ ಸರ್ಕಾರ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ವರ್ಷಕ್ಕೆ ಎರಡು ಬಾರಿ ಆಯೋಜಿಸುತ್ತಿದೆ. ಈ ವರ್ಷ 1ರಿಂದ 19 ವರ್ಷ ವಯಸ್ಸಿನ ಎಲ್ಲ ಮಕ್ಕಳು ಹಾಗೂ ಹದಿಹರೆಯದವರಿಗೆ ಜಂತು ಹುಳು ನಿವಾರಣೆಗಾಗಿ ವಯಸ್ಸಿಗೆ ಅನುಗುಣವಾಗಿ ಸೂಕ್ತ ಪ್ರಮಾಣದ ಡೋಸೇಜ್ ಪ್ರಕಾರ ಅಲ್ಬೆಂಡೆಝೋಲ್ ಮಾತ್ರೆ ನೀಡಲಾಗುವುದು. ಒಂದರಿಂದ ಎರಡು ವರ್ಷದ ಮಕ್ಕಳಿಗೆ ಕೇವಲ ಅರ್ಧ ಮಾತ್ರೆ, ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಒಂದು ಪೂರ್ತಿ ಮಾತ್ರೆ ನೀಡಲಾಗುವುದು ಎಂದು ಹೇಳಿದರು.
ಜಿಲ್ಲೆಯ 5,96,904 ಮಕ್ಕಳನ್ನು ಈಗಾಗಲೇ ಗುರುತಿಸಲಾಗಿದ್ದು, ಎಲ್ಲರಿಗೂ ಲಭ್ಯವಿರುವ ರೀತಿ 6,32,130 ಲಕ್ಷ ಮಾತ್ರೆಗಳನ್ನು ಈಗಾಲೇ ಸರ್ಕಾರಿ, ಅನು ದಾನಿತ, ಅನುದಾನರಹಿತ ಖಾಸಗಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಆರೋಗ್ಯ ಕಾರ್ಯಕರ್ತರು, ಶಾಲಾ ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಗೆ ಭೇಟಿ ಮಾಡಿ ಔಷಧ ನೀಡಲಾಗುವುದು ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಸಂಜೀವ ಕುಮಾರ ನೀರಲಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ|ಎಚ್.ಎಸ್.ರಾಘವೇಂದ್ರಸ್ವಾಮಿ, ಡಿಡಿಪಿಐ ಬಿ.ಎಸ್.ಜಗದೀಶ್ವರ, ತಾಲೂ ಕು ವೈದ್ಯಾಧಿ ಕಾರಿ ಡಾ|ಪ್ರಭಾಕರ ಕುಂದೂರ, ಗಣಿತ ಪರಿವೀಕ್ಷಕ ಬಿ.ಎಸ್. ಪಾಟೀಲ್, ಡಾ|ಚನ್ನಪ್ಪ ಲಮಾಣಿ, ಟಿ.ಟಿ.ಬೆನ್ನೂರು ಇತರರಿದ್ದರು.