Advertisement

ಶಿರಾಡಿಘಾಟ್‌ ರಸ್ತೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಿ

03:16 PM Aug 14, 2019 | Suhan S |

ಹಾಸನ: ಭಾರೀ ಮಳೆಯಿಂದಾಗಿ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ -75 ರ ಶಿರಾಡಿಘಾಟ್‌ನಲ್ಲಿ ಹಲವು ಕಡೆ ಕುಸಿತ ಉಂಟಾಗಿದೆ. ಈ ರಸ್ತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಹಾಸನ – ಹೆಗ್ಗದ್ದೆ (ಸಕಲೇಶಪುರ) ನಿರ್ಮಾಣವಾಗು ತ್ತಿರುವ ಚತುಷ್ಪಥ ರಸ್ತೆ ಕಾಮಗಾರಿ ಕುಂಠಿತ ವಾಗಿದ್ದು, ಕೂಡಲೇ ಗುತ್ತಿಗೆದಾರರನ್ನು ಬದಲಿಸಿ ತ್ವರಿತವಾಗಿ ಕಾಮಗಾರಿ ಪೂರ್ಣ ಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಶಾಸಕರು, ಸಂಸದರು ಆಗ್ರಹಿಸಿದರು.

Advertisement

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್‌ಸಿಂಗ್‌ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅತಿವೃಷ್ಟಿ, ಪ್ರವಾಹ ಪರಿಹಾರದ ಉನ್ನತ ಮಟ್ಟದ ಸಭೆಯಲ್ಲಿ ಶಾಸಕರು, ಹಾಸನ – ಸಕಲೇಶಪುರ ( ಹೆಗ್ಗದ್ದೆ) ಮತ್ತು ಗುಂಡ್ಯಾ – ಬಿ.ಸಿ.ರೋಡ್‌ ನಡುವೆ ಚತುಷ್ಪಥ ರಸ್ತೆ ನಿರ್ಮಾಣ 4 ವರ್ಷಗಳ ಹಿಂದೆಯೇ ಆರಂಭ ವಾದರೂ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಬೆಂಗಳೂರು – ಮಂಗಳೂರು ನಡುವಿನ ಈ ಮಹತ್ವದ ರಸ್ತೆ ನಿರ್ಮಾಣದ ಬಗ್ಗೆ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಕಳೆದ ಒಂದು ವಾರದಲ್ಲಿ ಸುರಿದ ಧಾರಾ ಕಾರ ಮಳೆಯಿಂದಾಗಿ ಜನ, ಜಾನುವಾರುಗಳ ಜೀವಹಾನಿ, ಕೆರೆ, ರಸ್ತೆಗಳು, ಸೇತುವೆಗಳು ಸೇರಿದಂತೆ ಸಾರ್ವಜನಿಕರ ಆಸ್ತಿ ಬೆಳೆ ಹಾನಿಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಸುದೀರ್ಘ‌ವಾದ ಚರ್ಚೆ ನಡೆಸಲಾಯಿತು.

ಸಂತ್ರಸ್ತರಿಗೆ ಪರಿಹಾರ ನೀಡಿ: ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾದವರೆಲ್ಲರಿಗೂ ಸೂಕ್ತ ಪರಿಹಾರ ದೊರೆಯಬೇಕು. ಮನೆ ಕಳೆದುಕೊಂಡವರಿಗೆ ವಸತಿ ವ್ಯವಸ್ಥೆ ಮಾಡ ಬೇಕು. ಒಂದು ವೇಳೆ ಹಕ್ಕು ಪತ್ರ ಇರದಿದ್ದರೂ ಮಾನವೀಯತೆ ದೃಷ್ಟಿಯಿಂದ ಪರಿಗಣಿಸಿ ಗೃಹ ಯೋಜನೆಯಡಿ ಸೂರು ಕಲ್ಪಿಸಬೇಕು. ಆತುರ ಮಾಡದೆ ನಿಖರವಾಗಿ ನಷ್ಟವನ್ನು ಅಂದಾಜಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಸಂಸದರು ಮತ್ತು ಶಾಸಕರು ಸಲಹೆ ನೀಡಿದರು.

ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರಗಳಲ್ಲಿ ಪ್ರವಾಹದಿಂದ ನೂರಾರು ಮನೆಗಳು ಕುಸಿದಿವೆ. ಹಲವು ಭಾಗಕ್ಕೂ ಹಾನಿಯಾಗಿವೆ. ಜಿಲ್ಲಾದ್ಯಂತ ನೂರಾರು ಕಿ.ಮೀ. ರಸ್ತೆ ಗಳು ಹಾಳಾಗಿವೆ. ಕೆರೆಗಳು ಒಡೆದಿವೆ. ಕಾಫಿ, ಭತ್ತ, ಬಾಳೆ, ರಾಗಿ, ಆಲೂಗೆಡ್ಡೆ, ಶುಂಠಿ, ಹೊಗೆಸೊಪ್ಪು ಮತ್ತಿತರ ಬೆಳೆ ಹಾನಿಯಾಗಿದೆ. ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ನೀರಾವರಿ ಇಲಾಖೆಗಳ ಅಧಿಕಾರಿಗಳು ಬೆಳೆ ಹಾನಿ ಅಂದಾಜು ವರದಿ ಮಾಡಬೇಕು, ಎಲ್ಲ ಸಂತ್ರಸ್ತರಿಗೂ ಸೂಕ್ತ ಪರಿಹಾರ ನೀಡಬೇಕು ಎಂದರು.

Advertisement

ತುರ್ತು ಪರಿಹಾರಕ್ಕೆ ಸೂಚನೆ: ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್‌ಸಿಂಗ್‌, ಈ ವರೆಗೆ ಆಗಿರುವ ನಷ್ಟಗಳನ್ನು ಅಂದಾಜಿಸ ಲಾಗಿದೆ. ತುರ್ತು ಪರಿಹಾರ ಕ್ರಮಗಳಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕ್ರಮಗಳಿಗೆ ಅನುದಾನ ದೊರೆಯಲಿದೆ. ಇದ‌ಕ್ಕೆ ಜನಪ್ರತಿನಿಧಿಗಳ ಸಹಕಾರ ಅಷ್ಟೇ ಮುಖ್ಯ ಎಂದರು.

ತಾಲೂಕುವಾರು ಅನುದಾನ ಹಂಚಿಕೆ: ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿ, ತಮ್ಮ ಬಳಿ ಇದ್ದ ಅನುದಾನವನ್ನು ತಾಲೂಕುವಾರು ಹಂಚಿಕೆ ಮಾಡಿ ಬಿಡುಗಡೆ ಮಾಡಲಾಗಿದೆ. ಅದನ್ನು ನಾಳೆಯೇ ಡ್ರಾ ಮಾಡಿ ಪಿ.ಡಿ. ಖಾತೆಯಲ್ಲಿ ಇರಿಸಿಕೊಂಡು ಎಲ್ಲಾ ಗ್ರಾಮಗಳಿಗೂ ಅಧಿಕಾರಿಗಳನ್ನು ಕಳುಹಿಸಿ ಅತಿವೃಷ್ಟಿ ಹಾನಿ ನಷ್ಟವನ್ನು ಅಂದಾಜು ಮಾಡಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ನಿಗಾವಹಿಸಲಾಗುವುದು ಎಂದರು.

ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವವಾರದ ಎಚ್‌ಡಿ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ, ಶಾಸಕರಾದ ಎ.ಟಿ. ರಾಮಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಸಿ.ಎನ್‌.ಬಾಲಕೃಷ್ಣ, ಕೆ.ಎಸ್‌. ಲಿಂಗೇಶ್‌, ಪ್ರೀತಂ ಜೆ.ಗೌಡ, ವಿಧಾನಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next