Advertisement

ಗದುಗಿಗೆ ಒಂದೇ ಸ್ಥಾನ ಮುನ್ನಡೆ

12:22 PM May 01, 2019 | Suhan S |

ಗದಗ: ಕಳೆದ ವಾರವಷ್ಟೇ ಪ್ರಕಟಗೊಂಡಿರುವ ಪಿಯುಸಿ ಫಲಿತಾಂಶದಲ್ಲಿ ಗದಗ 10 ಸ್ಥಾನಗಳನ್ನು ಕುಸಿದು 26ನೇ ಸ್ಥಾನಕ್ಕೆ ಜಾರಿದ್ದರೆ, ಮಂಗಳವಾರ ಪ್ರಕಟವಾದ ಎಸ್‌ಸ್‌ಎಲ್ಸಿ ಫಲಿತಾಂಶದಲ್ಲಿ ಕೇವಲ ಒಂದು ಸ್ಥಾನ ಮುನ್ನಡೆ ಸಾಧಿಸಿ ಕೊನೆಯ 31ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಜಿಲ್ಲೆಯ ಎಸ್‌ಎಸ್‌ಎಲ್ಸಿ ಫಲಿತಾಂಶ ಸುಧಾರಿಸಬೇಕು ಎಂಬ ಜಿಲ್ಲಾಡಳಿತದ ಮಹದಾಸೆ ಕೈಗೂಡದೇ ಅಧಿಕಾರಿಗಳು ಮತ್ತೂಮ್ಮೆ ತಲೆ ತಗ್ಗಿಸುವಂತಾಗಿದೆ.

Advertisement

2018-19ನೇ ಸಾಲಿನ ಎಸ್‌ಎಸ್‌ಎಲ್ಸಿ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಗದಗ ಜಿಲ್ಲೆಗೆ ಶೇ.74.07ರಷ್ಟು ಫಲಿತಾಂಶ ಬಂದಿದೆ. ಕಳೆದ ಶೈಕ್ಷಣಿಕ ವರ್ಷ ಶೇ. 67.05ರಷ್ಟು ಫಲಿತಾಂಶದೊಂದಿಗೆ 32ನೇ ಸ್ಥಾನಲ್ಲಿದ್ದ ಜಿಲ್ಲೆಯು, ಈ ಬಾರಿ ಶೇ.7.32ರಷ್ಟು ಪ್ರಗತಿಯೊಂದಿಗೆ ಶೇ. 74.84ರಷ್ಟು ಮಕ್ಕಳು ತೇರ್ಗಡೆಯಾಗಿದ್ದು, ರಾಜ್ಯ ಮಟ್ಟದಲ್ಲಿ ಒಂದು ಸ್ಥಾನ ಜಿಗಿತದೊಂದಿಗೆ 31ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಬಾಲಕಿಯದ್ದೇ ಮೇಲುಗೈ: 2018-19ನೇ ಸಾಲಿಗೆ ನಡೆದ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯ 286 ಶಾಲೆಗಳ ಒಟ್ಟು 15,069 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 12888 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 4423 ಬಾಲಕ ಹಾಗೂ 5222 ಬಾಲಕಿಯರು ಸೇರಿದಂತೆ ಒಟ್ಟು 9,645(ಶೇ.74.84) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಶೇ. 96.45ರಷ್ಟು ವಿದ್ಯಾರ್ಥಿನಿಯರು ಪಾಸಾಗುವ ಮೂಲಕ ಮೇಲುಗೈ ಸಾಧಿಸಿದ್ದಾರೆ.

ಅದರಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 10,122 ವಿದ್ಯಾರ್ಥಿಗಳಲ್ಲಿ 7,267(ಶೇ.71.79) ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ 2,343 ವಿದ್ಯಾರ್ಥಿಗಳಲ್ಲಿ 2,140 ಮಕ್ಕಳು ಉತ್ತೀರ್ಣರಾಗಿದ್ದಾರೆ. ಉರ್ದು ಮಾಧ್ಯಮದಲ್ಲಿ ಪರೀಕ್ಷೆ ಎದುರಿಸಿದ 423 ಮಕ್ಕಳಲ್ಲಿ 238 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲೆಯ 1,866 ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಲ್ಲಿ 1,295, ಪರಿಶಿಷ್ಟ ವರ್ಗದ 761ರಲ್ಲಿ 552 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಗದಗ ಜಿಲ್ಲೆಯ 12 ಸರಕಾರಿ, 2 ಅನುದಾನಿತ ಹಾಗೂ 4 ಅನುದಾನ ರಹಿತ ಪ್ರೌಢಶಾಲೆಗಳು ಈ ಬಾರಿ ಶೇ. 100ರಷ್ಟು ಫಲಿತಾಂಶ ಸಾಧಿಸುವ ಮೂಲಕ ಗಮನ ಸೆಳೆದಿವೆ. ಆದರೆ, ಯಾವುದೇ ಶಾಲೆ ಶೂನ್ಯ ಸಾಧನೆ ಮಾಡದಿದ್ದರೂ ಹಲವು ಸರಕಾರಿ ಮತ್ತು ಅನುದಾನ ರಹಿತ ಶಾಲೆಗಳು ಕಳಪೆ ಸಾಧನೆ ತೋರಿವೆ ಎಂದು ಹೇಳಲಾಗಿದೆ.

Advertisement

ಫಲಿಸದ ಶಿಕ್ಷಕರ ಪ್ರಯತ್ನ: ಪ್ರಸಕ್ತ ವರ್ಷದ ಎಸ್‌ಎಸ್‌ಎಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ, ಶಿಕ್ಷಣ ಇಲಾಖೆಯು ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿತ್ತು. ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ, ಸಂವಾದ, ವಿಷಯಗಳ ಪುನರಾವರ್ತನೆ, ಗಣಿತ, ವಿಜ್ಞಾನ, ಇಂಗ್ಲಿಷ್‌ ವಿಷಯಗಳಿಗೆ ವಿಶೇಷ ತರಬೇತಿ ಹಮ್ಮಿಕೊಳ್ಳಲಾಗಿತ್ತು.

ಜೊತೆಗೆ ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಗುರುತಿಸಿ ಅವುಗಳನ್ನು ಅಧಿಕಾರಿಗಳಿಗೆ ದತ್ತು ನೀಡುವ, ಡಿಸೆಂಬರ್‌ನಲ್ಲಿ ವಿಶೇಷ ಪರೀಕ್ಷೆ ಕೂಡ ನಡೆಸಲಾಗಿತ್ತು. ವಿದ್ಯಾರ್ಥಿಗಳ ಗ್ರಹಿಕೆ ಆಧಾರದ ಮೇಲೆ ಪ್ರತ್ಯೇಕ, ವಿಶೇಷವಾಗಿ ಪಾಠ ಬೋಧನೆಗೆ ಕ್ರಮ ಜನರುಗಿಸಲಾಗಿತ್ತು. ಮನೆಮನೆಗೆ ಭೇಟಿ ನೀಡಿ, ಮಕ್ಕಳ ಓದಿನ ಬಗ್ಗೆ ಕಾಳಜಿ ವಹಿಸಲು ಪಾಲಕರಿಗೂ ಮಾರ್ಗದರ್ಶನ ನೀಡಲಾಗಿತ್ತು. ಈ ಎಲ್ಲ ಪ್ರಯತ್ನಗಳ ಮಧ್ಯೆಯೂ ನಿರೀಕ್ಷೆ ಫಲಿತಾಂಶ ಬಂದಿಲ್ಲ.

ಅಲ್ಲದೇ, 2017-18ನೇ ಸಾಲಿನಲ್ಲಿ ಫಲಿತಾಂಶ ಸುಧಾರಣೆಗಾಗಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿತ್ತು. ಆದರೆ, ಈ ಬಾರಿ ಜಿಲ್ಲಾ ಉಪನಿರ್ದೇಶಕರ ವರ್ಗಾವಣೆ, ದೀರ್ಘ‌ ಕಾಲದವರೆಗೆ ಪ್ರಭಾರ ಮತ್ತಿತರೆ ಕಾರಣಗಳಿಂದಾಗಿ ಶಿಕ್ಷಕರ ಮೇಲಿನ ಹಿಡಿತ ಸಡಿಲಗೊಂಡಿತ್ತು. ಅಲ್ಲದೇ, ಶಿಕ್ಷಕರ ಕೊರತೆ, ಓದಿಗಿಂತ ಮೊಬೈಲ್ ಮೇಲಿನ ಮಕ್ಕಳ ಆಸಕ್ತಿಯೇ ಕಡಿಮೆ ಫಲಿತಾಂಶಕ್ಕೆ ಕಾರಣವೂ ಹೌದು ಎಂಬುದು ಇಲಾಖೆಯ ಉನ್ನತ ಅಧಿಕಾರಿಗಳು ಹೇಳಿಕೆ.

40ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ಸದ್ಯದಲ್ಲೇ ಕಾರಣ ಕೇಳಿ ನೋಟಿಸ್‌ ಜಾರಿ ಮಾಡುತ್ತೇನೆ. ಅದು ಅನುದಾನಿತವಾಗಿದ್ದರೆ ಅನುದಾನವನ್ನು ಏಕೆ ಹಿಂಪಡೆಯಬಾರದು ಎಂದು, ಖಾಸಗಿಯಾಗಿದ್ದರೆ ಪರವಾನಗಿ ಯಾಕೆ ರದ್ದುಗೊಳಿಸಬಾರದು ಹಾಗೂ ಸರಕಾರಿ ಶಾಲೆಗಳಲ್ಲಿ ಶೇ. 20ಕ್ಕಿಂತ ಫಲಿತಾಂಶ ಪಡೆದ ವಿಷಯವಾರು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ನೋಟಿಸ್‌ ನೀಡುತ್ತೇವೆ. ಅದರೊಂದಿಗೆ ಮುಂದಿನ ವರ್ಷದ ಫಲಿತಾಂಶ ಟಾಪ್‌-20 ಒಳಗಡೆ ತರಬೇಕೆಂಬ ಉದ್ದೇಶದಿಂದ 20 ಅಂಶಗಳ ಕಾರ್ಯಕ್ರಮ ರೂಪಿಸಿದ್ದು, ಜೂನ್‌ ಆರಂಭದಿಂದಲೇ ಅದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುವುದು.-ಎನ್‌.ಎಚ್. ನಾಗೂರ, ಡಿಡಿಪಿಐ.

Advertisement

Udayavani is now on Telegram. Click here to join our channel and stay updated with the latest news.

Next