ಕೋಲಾರ: ಜಿಲ್ಲೆಯಲ್ಲಿ ಸಂಪನ್ಮೂಲ ವೃದ್ಧಿಸಲು ಅಗತ್ಯ ಕ್ರಮಕೈಗೊಂಡು ನೀರು ಪೋಲಾಗದಂತೆ ಕ್ರಮವಹಿಸಿ ಎಂದುಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಋತ್ವಿಕ್‌ಪಾಂಡೆ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಜಲಶಕ್ತಿ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಜಲಶಕ್ತಿ ಹಾಗೂ ಮಳೆನೀರು ಕೊಯ್ಲು ಬಗ್ಗೆ ಅರಿವು ಮೂಡಿಸಬೇಕು. ಸಂಗ್ರಹ ಮಾಡಿದ ಮಳೆ ನೀರನ್ನು ಸದ್ಬಳಕೆ ಮಾಡಬೇಕು. ಜಿಲ್ಲೆಯಲ್ಲಿ ಹೆಚ್ಚಾಗಿ ಸಸಿ ನೆಡುವಂತೆ ಸಾಮಾಜಿಕ ಅರಣ್ಯ ಇಲಾಖೆಗೆ ಸೂಚಿಸಿದರು. ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ನೀರು ಸಂರಕ್ಷಣೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಗಳು ಹಾಗೂ ಖಾಸಗಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಲು ಸೂಚಿಸಲಾಗಿದೆ. ಎಲ್ಲಾ ಶಾಲಾ ಕಾಲೇಜುಗಳಲ್ಲೂ ಜಲಶಕ್ತಿ ಮತ್ತು ಜಲಾಮೃತ ಯೋಜನೆಗಳ ಬಗ್ಗೆ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದರು.
ನೋಟಿಸ್ ಜಾರಿ: ಈಗಾಗಲೇ ಕೆಲವು ಇಲಾಖೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಲಾಗಿದ್ದು, ಇನ್ನೂ ಕೆಲವು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕಿದೆ. ಕಲ್ಯಾಣ ಮಂಟಪ, ಖಾಸಗಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಅಳವಡಿಸಲು ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು. ನೀಲಗಿರಿ, ಅಕೇಶಿಯಾ ಮರಗಳನ್ನು ತೆಗೆದು ಆ ಜಾಗದಲ್ಲಿ ಗಿಡಗಳನ್ನು ನೆಡುವ ವ್ಯವಸ್ಥೆ ಮಾಡಬೇಕು. ಜಿಲ್ಲೆಯಲ್ಲಿ ನೀಲಗಿರಿ ಮರಗಳನ್ನು ತೆಗೆಯುವ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದ್ದು ತೆಗೆದ ಜಾಗದಲ್ಲಿ ಉಪಯುಕ್ತ ಗಿಡಗಳನ್ನು ನೆಡಲು ಹೆಚ್ಚಿನ ಸಸಿಗಳನ್ನು ಬೆಳೆಸುವಂತೆ ಸಾಮಾಜಿಕ ಅರಣ್ಯ ಇಲಾಖೆಗೆ ಸೂಚಿಸಿದರು.
ಟ್ಯಾಂಕ್ ವ್ಯವಸ್ಥೆ: ಕೆ.ಸಿ ವ್ಯಾಲಿ ನೀರು ಕೆರೆಯಿಂದ ಕೆರೆಗೆ ನೀರು ಸರಾಗವಾಗಿ ಹರಿಯಲು ಕಾಲುವೆಗಳನ್ನು ನಿರ್ಮಿಸಲಾಗಿದ್ದು, ಒಂದು ದೊಡ್ಡ ಮಟ್ಟದ ಟ್ಯಾಂಕ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಯೋಜನಾ ನಿರ್ದೇಶಕ ರಂಗಸ್ವಾಮಿ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ 5 ಯೋಜನೆ ರೂಪಿಸಿದ್ದು, ಕೆ.ಜಿ.ಎಫ್ ಹೊರತುಪಡಿಸಿ ಇನ್ನೆಲ್ಲಾ ತಾಲೂಕುಗಳಲ್ಲಿ ಮಳೆ ನೀರು ಕೊಯ್ಲು ಮತ್ತು ಜಲಶಕ್ತಿ ಯೋಜನೆ ಮಾಡಲು ಸೂಚಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ 50 ಕೊಳವೆಬಾವಿ ಮರುಬಳಕೆ ಮಾಡಲು ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು.
242 ಹೆಕ್ಟೇರ್‌ನಲ್ಲಿ ಸಸಿ ನಾಟಿ: ಸಾಮಾಜಿಕ ಅರಣ್ಯ ಇಲಾಖೆಯ ಉಪನಿರ್ದೇಶಕ ದೇವರಾಜ್ ಮಾತನಾಡಿ, ಕಳೆದ ಸಾಲಿನಲ್ಲಿ 293 ಹೆಕ್ಟೇರ್‌ನಲ್ಲಿ ಸಸಿ ನಾಟಿ ಮಾಡುವ ಗುರಿ ಹೊಂದಲಾಗಿದೆ. 242 ಹೆಕ್ಟೇರ್‌ನಲ್ಲಿ ಸಸಿ ನಾಟಿ ಮಾಡಲಾಗಿದೆ. ಶೇ.90 ಪೂರ್ಣಗೊಂಡಿದೆ. ನರೇಗಾ ಯೋಜನೆಯಡಿ 100 ಹೆಕ್ಟೇರ್‌ನಲ್ಲಿ ಸಸಿ ನೆಡಲಾಗಿದೆ. 45000 ಮಾನವ ದಿನಗಳನ್ನು ಸೃಜಿಸಲಾಗಿದೆ. ಪ್ರತಿ ಗ್ರಾಪಂಗೆ 1000 ಸಸಿಗಳನ್ನು ವಿತರಣೆ ಮಾಡಿ ನೆಡಿಸಲಾಗಿದೆ. ಕೋಟಿ ನಾಟಿ ಯೋಜನೆಯಡಿ 18 ಲಕ್ಷ ಸಸಿ ನೆಡಲಾಗಿದೆ. ಕೆಜಿಎಫ್‌ನಲ್ಲಿ ನೆಡು ತೊಪು ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ಎಚ್.ವಿ.ದರ್ಶನ್, ಉಪಕಾರ್ಯದರ್ಶಿ ಸಂಜೀವಪ್ಪ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.