Advertisement

ಕುಡಿಯುವ ನೀರಿಗೆ ಕೊರತೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಬೈರತಿ ಸುರೇಶ

04:07 PM Sep 22, 2023 | Team Udayavani |

ಮೈಸೂರು: ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದು, ಬರ ಘೋಷಣೆಯಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ನಗರಾಭಿವೃದ್ದಿ ಮತ್ತು ನಗರ ಯೋಜನಾ ಸಚಿವರಾದ ಬೈರತಿ ಸುರೇಶ ಹೇಳಿದರು.

Advertisement

ಮೈಸೂರು ವಿಭಾಗಕ್ಕೆ ಸಂಬಂಧಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಯೋಜನೆಗಳ ಪ್ರಗತಿ, ಕಂದಾಯ ವಿಷಯಗಳು, ಸಾರ್ವಜನಿಕ ಆರೋಗ್ಯ/ಸೇವೆಗಳ ವಿಷಯ ಸೇರಿದಂತೆ ಇತರೆ ವಿಷಯಗಳ ಕುರಿತು ಬೈರತಿ ಸುರೇಶ ಹಾಗೂ ಪೌರಾಡಳಿತ ಸಚಿವ ಕೆ.ರಹೀಂ ಖಾನ್ ಅವರುಗಳ ಜಂಟಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಿತು.

ಮುಂದೆ ಮಳೆ ಆಗದೆ ಹೋದರೆ ಕೊಳವೆ ಬಾವಿಗಳಲ್ಲಿ ನೀರಿನ ಇಲ್ಡ್ ಕಡಿಮೆ ಆಗುತ್ತದೆ. ನೀರಿನ ಕೊರತೆ ಆಗುವ ಪದೇಶಗಳನ್ನು ಗುರುತಿಸಿ ನೀರಿನ ಪೂರೈಕೆಗೆ ಅಗತ್ಯ ಕ್ರಿಯಾ ಯೋಜನೆ ರೂಪಿಸಿಕೊಳ್ಳಿ. ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲು ಗುರುತಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಗಾಗಲೇ ಇರುವ ಆರ್ ಓ ಪ್ಲಾಂಟ್ ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ರಿಪೇರಿ ಮಾಡಲಾಗದ ಸ್ಥಿತಿಗೆ ಇರುವ ಆರ್ ಓ ಪ್ಲಾಂಟ್ ತೆಗೆದು ಹೊಸ ಆರ್ ಒ ಪ್ಲಾಂಟ್ ಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಿದ ಅವರು ನೀರಿನ ಓವರ್ ಹೆಡ್ ಟ್ಯಾಂಕ್ ಗಳನ್ನು ವರ್ಷದಲ್ಲಿ ಎರಡು ಬಾರಿ ಕ್ಲೀನ್ ಮಾಡಿಸಬೇಕು ಎಂದು ತಿಳಿಸಿದರು.

ಅಗತ್ಯ ಇರುವೆಡೆ ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯಲು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ವಹಿಸಿ. ಇಂದಿರಾ ಕ್ಯಾಂಟೀನ್ ಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡಲು ಮೆನು ನೀಡಲಾಗಿದೆ. ಅಧಿಕಾರಿಗಳು ಆಗಾಗ ಭೇಟಿ ನೀಡಿ ಗುಣಮಟ್ಟದ ಆಹಾರ ನೀಡಲಾಗುತ್ತಿದೆಯೇ ಎಂದು ಪರಿಶೀಲನೆ ನಡೆಸಬೇಕು. ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಸರ್ಕಾರದ ಕನಸಿನ ಯೋಜನೆ. ಇದರಲ್ಲಿ ಲಾಭ ನಷ್ಟದ ಲೆಕ್ಕಾಚಾರ ಇಲ್ಲ. ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುವುದು ನಮ್ಮ ಗುರಿಯಾಗಿದೆ. ಯಾವ ಏಜೆನ್ಸಿ ಅವರು ಗುಣಮಟ್ಟದ ಆಹಾರ ನೀಡುವುದಿಲ್ಲ ಅವರನ್ನು ತೆಗೆದು ಹಾಕಿ, ಬ್ಲಾಕ್ ಲಿಸ್ಟ್ ಗೆ ಸೇರಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಇಂದಿರಾ ಕ್ಯಾಂಟಿನ್ ಗಳಲ್ಲಿ ಸ್ಥಳೀಯ ಆಹಾರ ಪದ್ಧತಿಗೆ ಅನುಗುಣವಾಗಿ ಮೆನು ಬದಲಾಯಿಸಿಕೊಳ್ಳಿ. ಮಂಗಳೂರು ಭಾಗದಲ್ಲಿ ಕುಸುಲಕ್ಕಿ, ಮಂಗಳೂರು ಬನ್ ರೀತಿ ಆಹಾರಗಳನ್ನು ನೀಡಿ. ಇಂದಿರಾ ಕ್ಯಾಂಟೀನ್ ಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಸೂಚನೆ ನೀಡಿದರು.

ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ಮಾತನಾಡಿ ಉಳ್ಳಾಲದ ದರ್ಗಾ ಬಳಿ ಹೆಚ್ಚಿನ ಜನ ಸಂದಣಿಯಿದ್ದು ಇಲ್ಲಿ ಇಂದಿರಾ ಕ್ಯಾಂಟಿನ್ ಸ್ಥಾಪನೆಗೆ ಕ್ರಮ ವಹಿಸಿ. ಹಲವು ಕಡೆ ಹೊಸದಾಗಿ ಆರಂಭವಾದ ಅಂಗಡಿಗಳಲ್ಲಿ ತೆರಿಗೆ ವಸೂಲು ಮಾಡುತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ನಗರ ಸ್ಥಳೀಯ ಸಂಸ್ಥೆಗಳು ತೆರಿಗೆ ವಸೂಲಾತಿ ಗುರಿಯನ್ನು ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next