ಬೆಳಗಾವಿ: “ವಿಶೇಷ ವಿಮಾನದಲ್ಲಿ ಬೆಂಗಳೂರಿನಿಂದ ಜತೆಯಲ್ಲಿ ಕರೆದುಕೊಂಡು ಬಂದು ಈಗ ಬಿಟ್ಟು ಹೋಗ್ತಿರಾ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಸಿಎಂ ಯಡಿಯೂರಪ್ಪ ಅವರನ್ನು ಕೇಳಿದ ಪ್ರಸಂಗ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆಯಿತು.
ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿ ಮದುವೆ ಸಮಾರಂಭ ಮುಗಿಸಿ ಹುಬ್ಬಳ್ಳಿಗೆ ತೆರಳುವಾಗ ಮುಖ್ಯಮಂತ್ರಿಗಳು ಗೌರವ ವಂದನೆ ಸ್ವೀಕರಿಸುವ ವೇಳೆ ಕರಂದ್ಲಾಜೆ ಸಿಟ್ಟಿನಿಂದ ಈ ಮಾತು ಹೇಳಿದರು.
ಹುಬ್ಬಳ್ಳಿಗೆ ವಿಶೇಷ ವಿಮಾನದಲ್ಲಿ ತೆರಳಲು ಅವಕಾಶ ಸಿಗದಿದ್ದಕ್ಕೆ ಬಿಜೆಪಿ ಮುಖಂಡರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿಯೇ ಕರಂದ್ಲಾಜೆ ಈ ರೀತಿ ಕೇಳಿದ್ದಕ್ಕೆ ಮುಖ್ಯಮಂತ್ರಿಗಳು ಮುಜುಗರಕ್ಕೊಳಗಾದರು. ಮುಖ್ಯಮಂತ್ರಿಗಳು ತಮ್ಮೊಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕರೆದುಕೊಂಡು ಹೋಗುವ ಇರಾದೆ ಹೊಂದಿದ್ದರು. ಕರಂದ್ಲಾಜೆ ಸಿಟ್ಟಾಗಿದ್ದನ್ನು ಅರಿತ ಬೊಮ್ಮಾಯಿ, ನನ್ನ ಬದಲು ನೀವೇ ವಿಮಾನದಲ್ಲಿ ಹುಬ್ಬಳ್ಳಿಗೆ ಹೋಗಿ ಎಂದರು.
ಮುಖ್ಯಮಂತ್ರಿ ಜತೆಗೆ ವಿಶೇಷ ವಿಮಾನದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ ಬಂದಿದ್ದರು. ಕರಂದ್ಲಾಜೆ ಮುನಿಸಿಕೊಂಡಿದ್ದಕ್ಕೆ ರವಿಕುಮಾರ ಅವರು ಬೇರೊಂದು ವಿಮಾನದಲ್ಲಿ ಬೆಂಗಳೂರಿಗೆ ನಿರ್ಗಮಿಸಿದರು. ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿಯೊಂದಿಗೆ ಕರಂದ್ಲಾಜೆ, ಬೊಮ್ಮಾಯಿ ಹುಬ್ಬಳ್ಳಿಗೆ ಪ್ರಯಾಣಿಸಿದರು.
ಜಾತ್ರೆಗೆ ಬಾರದಂತೆ ಶ್ರೀಗಳ ಮನವಿ
ಬೆಳಗಾವಿ: ಕೊರೊನಾ ಹಿನ್ನೆಲೆಯಲ್ಲಿ ಶ್ರೀಶೈಲದ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರು ಸದ್ಯದ ಮಟ್ಟಿಗೆ ಯಾತ್ರೆ ಸ್ಥಗಿತ ಗೊಳಿಸಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀಶೈಲ ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಶ್ರೀಶೈಲ ಪೀಠದಿಂದ ಮಾ.19ರಿಂದ 23ರವರೆಗೆ 5 ದಿನ ಮಲ್ಲಯ್ಯ ಭಕ್ತರ ಸಮಾವೇಶ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಾ.21ರಂದು ಸಿಎಂ ಯಡಿಯೂರಪ್ಪ ಅವರೂ ಭಾಗವಹಿಸಲಿದ್ದರು. ಆದರೆ, ಕೊರೊನಾ ವೈರಸ್ ತಡೆಗಾಗಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದರು.