Advertisement

ರೈತರೇ ಕರುಗಳ ಆರೈಕೆಗೆ ಕಾಳಜಿ ವಹಿಸಿ

09:09 PM Jan 22, 2020 | Lakshmi GovindaRaj |

ಮಧುಗಿರಿ: ಹೈನುಗಾರರು ಗುಣಮಟ್ಟದ ಹಾಲು ಡೇರಿಗೆ ನೀಡಬೇಕು ಎಂದು ತುಮುಲ್‌ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್‌ ತಿಳಿಸಿದರು. ತಾಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿಯ ಸರ್ಕಾರಿ ಶಾಲೆ ಆವರಣದಲ್ಲಿ ಪಶು ಇಲಾಖೆ ಹಾಗೂ ತುಮುಲ್‌ ಸಹಯೋಗದಿಂದ ನಡೆದ ಮಿಶ್ರತಳಿ ಹಾಗೂ ದೇಸಿ ತಳಿ ಕರುಗಳ ಪ್ರದರ್ಶನ ಹಾಗೂ ಪಶು ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.

Advertisement

ಹೈನುಗಾರಿಕೆಯಲ್ಲಿ ಅಭಿವೃದ್ಧಿಯಾಗಲು ಮೊದಲ ಹಂತವೇ ಕರುಗಳ ಆರೈಕೆ. ಇಲ್ಲಿಂದಲೇ ಈ ಉದ್ಯಮ ಗುಣಮಟ್ಟದಿಂದ ಕೂಡಿರಲು ಸಾಧ್ಯ. ಹಾಗಾಗಿ ಎಲ್ಲರೂ ಕರುಗಳನ್ನು ಉತ್ತಮವಾಗಿ ಆರೈಕೆ ಮಾಡಿದಲ್ಲಿ ಹೈನುಗಾರಿಕೆಯಲ್ಲಿ ಲಾಭ ಗಳಿಸಬಹುದು. 2 ವರ್ಷಕ್ಕೆ ಕರು ಹಾಕುವ ಆಧುನಿಕ ವ್ಯವಸ್ಥೆ ಇಲಾಖೆ ವೈದ್ಯರ ಮಾರ್ಗದರ್ಶನದಲ್ಲಿ ಪಾಲಿಸಬೇಕಿದೆ.

ಬರಗಾಲ ಮೆಟ್ಟಿನಿಂತ ಪ್ರದೇಶದಲ್ಲಿ ಬೃಹತ್‌ ಉದ್ಯಮವಾಗಿ ಹೈನುಗಾರಿಕೆ ಬೆಳೆದಿದೆ. ಹೆಚ್ಚುವರಿ ಹಾಲು ಬಂದರೆ ಹಾಲಿನ ರಜೆ ನೀಡುತ್ತಿದ್ದ ತುಮುಲ್‌ ಇಂದು 28 ರಿಂದ 110 ಬಿಸಿಎಂ ಘಟಕ ಹೊಂದಿದ್ದು, ಎಷ್ಟು ಹಾಲು ನೀಡಿದರೂ ಗುಣಮಟ್ಟ ಕಾಯ್ದುಕೊಂಡು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ. ಇದಕ್ಕೆ ನಿಮ್ಮ ಪರಿಶ್ರಮ ಹಾಗೂ ಗುಣಮಟ್ಟದ ಹಾಲು ಪೂರೈಕೆ ಕಾರಣ ಎಂದು ಹೇಳಿದರು.

ವಿವಿಧ ಯೋಜನೆ: ಬಂದ ಲಾಭದಲ್ಲಿ ಹಲವಾರು ಯೋಜನೆ ಜಾರಿಗೊಳಿಸಲಾಗಿದೆ. ಹಾಲು ಉತ್ಪಾದಕರು ಮೃತಪಟ್ಟರೆ 1 ಲಕ್ಷ ಪರಿಹಾರ, ರಾಸುಗಳು ಮೃತಪಟ್ಟರೆ 25ರಿಂದ 50 ಸಾವಿರದವರೆಗೂ ಸಹಾಯಧನ, ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯಧನ, ವಿದ್ಯಾರ್ಥಿ ವೇತನ, ಪಡ್ಡೆರಾಸು ಮೃತಪಟ್ಟರೆ 5 ಸಾವಿರ, ಬಣವೆಗೆ ಬೆಂಕಿ ಬಿದ್ದರೆ 5 ಸಾವಿರ ರೂ.

ಸಹಾಯ ಮಾಡುವುದರ ಜೊತೆಗೆ ಜಿಲ್ಲಾ ಕೇಂದ್ರದಲ್ಲಿ ಹೆಣ್ಣುಮಕ್ಕಳಿಗಾಗಿ ಉಚಿತ ಹಾಸ್ಟೆಲ್‌ ವ್ಯವಸ್ಥೆ ಜಾರಿಗೊಳಿಸಿದ್ದೇವೆ. ಜಿಲ್ಲೆಯಲ್ಲಿರುವ 1,250 ಹಾಲಿನ ಡೇರಿಗಳು ಲಾಭದಲ್ಲಿವೆ. ಹಾಲಿನ ಗುಣಮಟ್ಟ ಮತ್ತಷ್ಟು ಕಾಪಾಡಲು ಕರುಗಳನ್ನು ಆರೋಗ್ಯಕರವಾಗಿ ಬೆಳೆಸಬೇಕು. ಇದಕ್ಕಾಗಿ ಇಲಾಖೆ ಮಾರ್ಗದರ್ಶನ ಪಡೆಯಬೇಕು ಎಂದು ಸಲಹೆ ನೀಡಿದರು.

Advertisement

ಇಲಾಖೆಯಿಂದ ನೆರವು: ಪ್ರಾಸ್ತಾವಿಕವಾಗಿ ಮಾತನಾಡಿದ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗಭೂಷಣ್‌, ಹೈನುಗಾರಿಕೆಯಲ್ಲಿ ಲಾಭಗಳಿಸಲು ಮೊದಲು ಕರುಗಳ ಆರೋಗ್ಯ ಮುಖ್ಯ. ಆರೋಗ್ಯಕರ ಕರು ವರ್ಷಕ್ಕೆ ಗರ್ಭ ಧರಿಸಬೇಕು. ಅದಕ್ಕಾಗಿ ಇಲಾಖೆಯಿಂದ ನೀಡುವ ಜಂತುಹುಳು ನಿವಾರಣೆ, ಕಾಲುಬಾಯಿ ರೋಗದ ಔಷಧ ನೀಡುತ್ತ ಉತ್ತಮ ಮೇವು ಒದಗಿಸಬೇಕು. ಜಾನುವಾರುಗಳ ಸೇವೆಯಿಂದ ರೈತರಿಗೆ ಎಂದೂ ನಷ್ಟವಾಗಲ್ಲ.

ಇಂದು 150 ವಿವಿಧ ಜಾತಿಯ ಕರುಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದು, ಉತ್ತಮ ಕರುಗಳಿಗೆ ಬಹುಮಾನ ನೀಡುವುದರ ಜೊತೆಗೆ 5 ಕೆಜಿ ಆಹಾರ, 1 ಕೆ.ಜಿ ರೋಗ ನಿರೋಧಕ ಲವಣಾಂಶದ ಆಹಾರ ನೀಡಿ ಉಚಿತವಾಗಿ ಲಸಿಕೆ ಹಾಕಲಾಗಿದೆ. ರೈತರು ಕರುಗಳ ಆರೋಗ್ಯ ಗಮನದಲ್ಲಿಟ್ಟು ಹೈನುಗಾರಿಕೆ ನಡೆಸಬೇಕು ಎಂದರು.

ರೆಡ್ಡಿಹಳ್ಳಿ ಗ್ರಾಪಂ ಅಧ್ಯಕ್ಷೆ ರಾಧಮ್ಮ, ಉಪಾಧ್ಯಕ್ಷ ಮಿಲ್‌ಚಂದ್ರು, ತುಮುಲ್‌ ಉಪ ವ್ಯವಸ್ಥಾಪಕ ವೀರಣ್ಣ, ರೆಡ್ಡಿಹಳ್ಳಿ ಡೇರಿ ಅಧ್ಯಕ್ಷ ನಾಗರಾಜು, ಧರ್ಮಸ್ಥಳ ಸಂಘದ ಕೃಷಿ ಮೇಲ್ವಿಚಾರಕ ಮಂಜುನಾಥ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಮಂಜುನಾಥ್‌, ತುಮುಲ್‌ ವಿಸ್ತರಣಾಧಿಕಾರಿ ಗಿರೀಶ್‌, ಮುಖ್ಯಶಿಕ್ಷಕ ನಾಗರಾಜು, ಜಿಲ್ಲಾ ಪಶುವೈದ್ಯರ ಸಂಘದ ಜಿಲ್ಲಾಧ್ಯಕ್ಷ ರುದ್ರಪ್ರಸಾದ್‌, ರಾಜ್ಯ ಪ್ರತಿನಿಧಿ ಡಾ.ಶಶಿಕಾಂತ್‌ ಬೂದಿಹಾಳ್‌, ಪಶುವೈದ್ಯರಾದ ಡಾ.ಬಾಬುರೆಡ್ಡಿ, ಡಾ.ಸಿದ್ದನಗೌಡ, ಕೃಷಿಕ ಸಮಾಜದ ರಾಮಕೃಷ್ಣಪ್ಪ, ಮುಖಂಡ ರಘುವೀರ್‌ ಹಾಗೂ ಇತರರು ಇದ್ದರು.

ರಫೀಕ್‌ಗೆ ಚಾಂಪಿಯನ್‌ ಪಟ್ಟ: 3, 6, 9 ತಿಂಗಳ ವಿವಿಧ ಜಾತಿಯ ಉತ್ತಮ ಆರೋಗ್ಯವಂತ ಕರುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು. 150 ಕರುಗಳಲ್ಲಿ ಹೆಚ್ಚು ದೃಢಕಾಯದ ಕರುವಿಗಾಗಿ ಮಾಲೀಕ ರಫೀಕ್‌ಗೆ ಚಾಂಪಿಯನ್‌ ಪಟ್ಟ ನೀಡಿ ನಗದು ಬಹುಮಾನ ನೀಡಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ರೈತಕ್ಷೇತ್ರ ಪಾಠಶಾಲೆಯಿಂದ ಹೈನುಗಾರಿಕೆ ಕುರಿತು ಮಾಹಿತಿ ನೀಡಲಾಯಿತು. ವೈರ್‌ಬ್ಯಾಕ್‌, ಡಾ.ವೆಟ್‌ಫಾರ್ಮ್ ಹಾಗೂ ವಿವಿಧ ಪಶು ಔಷದ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿ ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು.

ಕರುಗಳ ಬಾಲ್ಯಾದಲ್ಲೇ ಆರೋಗ್ಯಕರ ಆಹಾರ ನೀಡಿದರೆ ಹೈನುಗಾರಿಕೆ ಲಾಭದಾಯಕವಾಗಿರಲಿದೆ. ಇದನ್ನು ರೈತರು ಅರ್ಥಮಾಡಿಕೊಂಡು ಕರುಗಳನ್ನು ಸದೃಢವಾಗಿ ಪೋಷಿಸಬೇಕು. ಗುಣಮಟ್ಟದ ಹಾಲು ಪೂರೈಸಿ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು.
-ಕೊಂಡವಾಡಿ ಚಂದ್ರಶೇಖರ್‌, ತುಮುಲ್‌ ನಿರ್ದೇಶಕ, ಮಾಜಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next