Advertisement

ಕಣ್ಣಿನ ಬಗ್ಗೆ ಕಾಳಜಿ ಇರಲಿ

11:19 AM Nov 20, 2020 | Sriram |

ಮನುಷ್ಯನಿಗೆ ಪಂಚೇಂದ್ರಿಯಗಳಲ್ಲಿ ಕಣ್ಣಿನ ಆರೋಗ್ಯ ಬಹುಮುಖ್ಯವಾದುದು. ಕಣ್ಣನಿಂದಲೇ ನಾವು ಜಗತ್ತನ್ನು ನೋಡುತ್ತೇವೆ. ದಿನದಲ್ಲಿ ಹೆಚ್ಚಿನ ತಾಂತ್ರಿಕ ಸರಕುಗಳೊಂದಿಗೆ ನಮ್ಮ ಒಡನಾಟದಿಂದಾಗಿ ಕಣ್ಣಿನ ಸಮಸ್ಯೆಗಳು ಉದ್ಭವಿಸುತ್ತವೆ. ಈ ನಿಟ್ಟಿನಲ್ಲಿ ಕಣ್ಣಿನ ಸಂರಕ್ಷಣೆಯ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

Advertisement

ಕಂಪ್ಯೂಟರ್‌, ಮೊಬೈಲ್‌ ಬಳಕೆ ಹೆಚ್ಚಾಗಿ ಮಾಡುವ ಮಂದಿ ಸಾಮಾನ್ಯವಾಗಿ ಕಣ್ಣಿನ ಸಮಸ್ಯೆ ತಲೆದೋರುತ್ತದೆ. ಕಣ್ಣಿನ ಆಯಾಸ, ಕೆಂಗಣ್ಣು, ಕಣ್ಣು ನೋವು, ಕಣ್ಣಿನ ತುರಿಕೆ, ಕಣ್ಣಿನಿಂದ ನೀರು ಸೋರುವುದು ಸಹಿತ ಮತ್ತಿತರ ರೋಗಕ್ಕೆ ತುತ್ತಾಗಿರುತ್ತಾರೆ. ಹೀಗಿರುವಾಗ ಕಣ್ಣಿನ ಬಗ್ಗೆ ಎಷ್ಟೇ ಜಾಗ್ರತೆ ವಹಿಸಿದರೂ ಕಡಿಮೆ ಎನ್ನಬಹುದು.

ಕಣ್ಣಿನ ಸಮಸ್ಯೆಗೆ ಕಾರಣಗಳು ಅನೇಕ ಇರಬಹುದು. ಕಣ್ಣಿನ ಸಮಸ್ಯೆಗಳು ವೈರಸ್‌, ಬ್ಯಾಕ್ಟೀರಿಯಾ, ಅಲರ್ಜಿಗಳಿಂದಲೂ ಬರಬಹುದು. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಯಾವುದೇ ಕಣ್ಣಿನ ಸಮಸ್ಯೆ ಇಲ್ಲದಿದ್ದರೂ ಕನಿಷ್ಠ ವರ್ಷಕ್ಕೊಮ್ಮೆಯಾದರೂ ದೃಷ್ಟಿಯನ್ನು ಪರೀಕ್ಷೆ ಮಾಡಬೇಕು. ಇದರಿಂದಾಗಿ ಕಣ್ಣಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳನ್ನು ಪತ್ತೆಮಾಡಲು ಸಹಕಾರಿ.ಕಂಪ್ಯೂಟರ್‌ ಹೆಚ್ಚಾಗಿ ಬಳಕೆ ಮಾಡುವವರು ಮೂರರಿಂದ ನಾಲ್ಕು ಸೆಕೆಂಡ್‌ಗಳಿಗೊಮ್ಮೆ ಕಣ್ಣು ಮಿಟುಕಿಸಬೇಕು. ವಾಕಿಂಗ್‌ ಮಾಡುವಾಗ ಅಥವಾ ಕುಳಿತುಕೊಂಡಿರುವಾಗ ನಿಮ್ಮ ಸುತ್ತಮುತ್ತಲಿನ ದೂರದ ವಸ್ತುಗಳನ್ನು ನೋಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನಿಯಮಿತವಾಗಿ ನೀರು ಕುಡಿಯುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಧೂಮಪಾನದಿಂದಾಗಿ ಕಣ್ಣಿನ ನರಕ್ಕೆ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಚಿಕ್ಕ ಮಕ್ಕಳಲ್ಲಿ ಕಣ್ಣಿನ ಪೊರೆ ಸಮಸ್ಯೆ ಕಂಡುಬರುವ ಸಾಧ್ಯತೆ ಇದೆ. ಕೆಲವೊಂದು ಬಾರಿ ಮಗು ಜನಿಸುವಾಗಲೇ ಕಣ್ಣಿನ ಪೊರೆಯೊಂದಿಗೆ ಜನಿಸುವ ಸಾಧ್ಯತೆಯೂ ಇದೆ. ಅಲ್ಲದೆ, ಇದೊಂದು ಆನುವಂಶಿಕವಾಗಿಯೂ ಇರುವ ಸಾಧ್ಯತೆ ಇದೆ. ಮಗು ಹುಟ್ಟಿದ ಕೆಲ ಸಮಯದ ಅನಂತರ ಪೊರೆ ಬೆಳೆಯವ ಸಾಧ್ಯತೆ ಇದೆ. ಕೆಲವೊಂದು ಬಾರಿ ಕಣ್ಣಿನ ಗಾಯ, ಕಣ್ಣಿನ ಸಮಸ್ಯೆಗಳಿಂದ ಉಂಟಾಗುವ ತೊಂದರೆಗಳು, ವಿಕಿರಣ ಆಘಾತ, ಸ್ಟೀರಾಯ್ಡ ಸೇವನೆಯಿಂದಲೂ ಕಣ್ಣಿನ ಪೊರೆ ಬರಬಹುದು.

ಶಸ್ತ್ರಚಿಕಿತ್ಸೆಯಿಂದ ಕಣ್ಣಿನ ಪೊರೆಯನ್ನು ತೆಗೆದುಹಾಕಬಹುದು. ಕಣ್ಣಿನ ಪೊರೆಯ ಲಕ್ಷಣ ಕಂಡುಬಂದರೆ ಕೂಡಲೇ ಸಂಬಂಧಪಟ್ಟ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಬೇಕು. ಪೊರೆ ದೃಷ್ಟಿದೋಷಕ್ಕೆ ಕಾರಣವಾಗಿದ್ದರೆ ಅದನ್ನು ಬೇಗ ತೆಗೆದು ಹಾಕಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆಗೆ ಕಾರಣವಾಗಬಹುದು. ಪೊರೆ ತೆಗೆದ ಅನಂತರ ಸುಮಾರು ಎರಡರಿಂದ ಮೂರು ತಿಂಗಳವರೆಗೆ ಚಿಕಿತ್ಸೆ ಪಡೆಯಬೇಕು.

ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್‌, ಮೊಬೈಲ್‌ ಬಳಕೆಯಿಂದ ಕಣ್ಣುಗಳು ಹೆಚ್ಚು ಆಯಾಸಗೊಳ್ಳುತ್ತವೆ. ಕಣ್ಣುಗಳಿಗೆ ನೀಡುವ ಅತಿಯಾದ ಶ್ರಮದಿಂದಾಗಿ ಕಣ್ಣು ಕೆಂಪಗಾಗುವುದು, ಕಣ್ಣುಗಳಲ್ಲಿ ಉರಿ, ಎದುರಿನ ವಸ್ತುಗಳನ್ನು ಅಸ್ಪಷ್ಟವಾಗಿ ಕಾಣುವುದು, ಹಗಲಿನ ಬೆಳಕನ್ನು ನೋಡಲಾಗದ ಸಮಸ್ಯೆಗಳು ಎದುರಾಗಬಹುದಾದ ಸಾಧ್ಯತೆ ಹೆಚ್ಚಿದೆ.

Advertisement

ಕಣ್ಣುಗಳಿಗೆ ಕೆಲಸ ನೀಡುವುದರಿಂದ ನಯನಗಳಲ್ಲಿ ನೀರು ತುಂಬಿರುತ್ತದೆ. ಕಣ್ಣುಗಳು ತೇವಗೊಂಡಿದ್ದರೆ ಸಹ ನಿತ್ಯದ ಕೆಲಸಗಳಿಗೆ ಅಡ್ಡಿಯಾಗುತ್ತದೆ. ಆದರೆ ಆಧುನಿಕ ಜೀವನಶೈಲಿಯಲ್ಲಿ ಕಂಪ್ಯೂಟರ್‌ ಬಳಕೆ ಅಥವಾ ಮೊಬೈಲ್‌ಗ‌ಳಿಂದ ದೂರವಿರುವುದು ತುಸು ಕಷ್ಟ ಎನ್ನುವವರೇ ಹೆಚ್ಚು. ಆದರೆ ನಿಮ್ಮ ಕಾರ್ಯಕ್ಕೆ ತಕ್ಕಂತೆ ಕೆಲ ಮನೆಮದ್ದುಗಳನ್ನು ಸೇವಿಸುವ ಮೂಲಕ ನೇತ್ರಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಮುಖ್ಯವಾಗಿ ಕಣ್ಣು ಉರಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಸೌತೆಕಾಯಿಯ ತಿರುಳನ್ನು ಕಣ್ಣಿಗೆ ಉಜ್ಜಿಕೊಂಡರೆ ಉರಿ ಕಡಿಮೆಯಾಗುತ್ತದೆ. ನೆಲ್ಲಿಕಾಯಿ ಜ್ಯೂಸ್‌ನ್ನು ಸೇವಿಸುತ್ತಿದ್ದರೆ ಕಣ್ಣಿನ ದೋಷ ದೂರವಾಗುತ್ತದೆ. ಊಟದೊಂದಿಗೆ ಈರುಳ್ಳಿಯನ್ನು ನಂಜಿಕೊಂಡು ತಿನ್ನುವುದರಿಂದ ಸಹ ಕಣ್ಣು ನೋವು ಕಡಿಮೆಯಾಗುತ್ತದೆ.-ಮಾವಿನಹಣ್ಣಿನ ಸೀಕರಣೆಯನ್ನು ಪ್ರತಿದಿನ ಸೇವಿಸುವುದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು. ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸುವಲ್ಲಿ ಕೆಂಪು ಮೂಲಂಗಿ ಮುಖ್ಯ ಪಾತ್ರವಹಿಸುತ್ತದೆ. ಇದನ್ನು ಆಹಾರದಲ್ಲಿ ಹೆಚ್ಚು ಬಳಸುವುದು ಉತ್ತಮ.

ಯೋಗದಿಂದಲೂ ಪರಿಹಾರ
ಕಣ್ಣಿನ ಸಮಸ್ಯೆಗೆ ಯೋಗದಲ್ಲಿಯೂ ಪರಿಹಾರ ಇದೆ. ಕಣ್ಣಿನಲ್ಲಿರುವ ನರಗಳು ಯೋಗದಿಂದ ಬಲಗೊಳ್ಳುತ್ತವೆ. ಕಣ್ಣಿನ ಸಮಸ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಪಾದ ಹಸ್ತಾಸನ, ಪ್ರಸಾರಿತ ಪಾದೋತ್ಥಾನಾಸನ, ಶಶಾಂಕಾಸನ, ಉಷ್ಟ್ರಾಸನ, ಸರ್ವಾಂಗಾಸನ, ಶವಾಸನ ಮತ್ತು ಮುದ್ರೆಗಳಿಂದ ಕಣ್ಣಿನ ಆರೋಗ್ಯವನ್ನು ರಕ್ಷಿಸಲು ಸಹಕಾರಿಯಾಗುತ್ತದೆ.

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next