ಬಳ್ಳಾರಿ: ಪ್ರತಿಯೊಬ್ಬ ವ್ಯಕ್ತಿಯು ವೈಯಕ್ತಿಕ ಶುಚಿತ್ವಕ್ಕೆ ಒತ್ತು ನೀಡುವುದರ ಜತೆಗೆ ಮಕ್ಕಳ ಆರೋಗ್ಯದ ಬಗ್ಗೆ ತಪ್ಪದೇ ಕಾಳಜಿ ವಹಿಸಬೇಕು ಎಂದು ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ ಹೇಳಿದರು.
ನಗರದ ಜಿಲ್ಲಾಸ್ಪತ್ರೆ ಆವರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶೇ.10ರಷ್ಟು 5 ವರ್ಷದೊಳಗಿನ ಮಕ್ಕಳು ಅತಿಸಾರ ಭೇದಿಯಿಂದ ಮರಣ ಹೊಂದುತ್ತಾರೆ. ಆದರೆ, ಅತಿಸಾರ ಭೇದಿಯನ್ನು ಬಹು ಸುಲಭವಾಗಿ ನಿಯಂತ್ರಿಸಿ ಮರಣ ತಡೆಗಟ್ಟಬಹುದಾಗಿದ್ದು, ರಾಜ್ಯದಲ್ಲಿ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕವನ್ನು 2014-15ನೇ ಸಾಲಿನಿಂದ ತೀವ್ರತರ ಅತಿಸಾರ ಭೇದಿಯಿಂದ ಶೂನ್ಯ ಮಕ್ಕಳ ಮರಣ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ 2019-20ನೇ ಸಾಲಿನಲ್ಲಿ ಜೂ.3 ರಿಂದ 17ರವರೆಗೆ ಜಿಲ್ಲೆಯಾದ್ಯಂತ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕವನ್ನು ಆಚರಿಸಲಾಗುತ್ತಿದೆ. ಈ ಪಾಕ್ಷಿಕವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವರಾಜ ಹೆಡೆ ಮಾತನಾಡಿ, ಜಿಲ್ಲೆಯಲ್ಲಿ 5 ವರ್ಷದೊಳಗಿನ 3,04,124 ಮಕ್ಕಳ ಪಾಲಕರಿಗೆ ಅತಿಸಾರ ಭೇದಿ ನಿಯಂತ್ರಣ ಕುರಿತು ಜಾಗೃತಿಯನ್ನು 2039 ಆಶಾ ಕಾರ್ಯಕರ್ತೆಯರು 2704 ಅಂಗನವಾಡಿ ಕಾರ್ಯಕರ್ತೆಯರು ಮನೆ ಭೇಟಿ ಮೂಲಕ ಮತ್ತು ಜಿಲ್ಲೆಯ ಎಲ್ಲ 463 ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಜಿಂಕ್-ಒಆರ್‌ಎಸ್ ಕಾರ್ನರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ 3339 ಸರ್ಕಾರಿ ಅನುದಾನಿತ ಮತ್ತು ವಸತಿ, ಶಾಲೆಗಳಲ್ಲಿ ಸಹ ಅತಿಸಾರ ಭೇದಿ ನಿಯಂತ್ರಣ ಹಾಗೂ ಕೈ ತೊಳೆಯುವ ವಿಧಾನಗಳ ಕುರಿತು ಆರೋಗ್ಯ ಕಾರ್ಯಕರ್ತರಿಂದ ಪಾಕ್ಷಿಕ ನಡೆಸಲಾಗುತ್ತದೆ ಎಂದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ರವೀಂದ್ರನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಸ್ಥಾನಿಕ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ, ಮಕ್ಕಳ ತಜ್ಞರಾದ ಡಾ.ವೀರಶಂಕರ ಹಿರಿಯ ಡಾ.ಬಾಲು ವೆಂಕಟೇಶ, ತಾಲೂಕು ಆರೋಗ್ಯ ಅಧಿಕಾರಿ ಡಾ ಕೆ.ಜಿ. ವಿರೇಂದ್ರ ಕುಮಾರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ ಸೇರಿದಂತೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಸಿಬ್ಬಂದಿ ಇದ್ದರು.