Advertisement
ಜಿಲ್ಲೆಯಲ್ಲಿ ಕೃಷಿ ರಕ್ಷಣೆಗಾಗಿ ಆಯುಧ ಪರವಾನಗಿ ಹೊಂದಿರುವ (ಪೊಲೀಸ್ ಆಯುಕ್ತರ ಕಾರ್ಯವ್ಯಾಪ್ತಿಯನ್ನು ಹೊರತುಪಡಿಸಿ) ಎಲ್ಲ ಆಯುಧ ಪರವಾನಗಿದಾರರು ತಮ್ಮ ಆಯುಧಗಳನ್ನು ಈಗಾಗಲೇ ಠೇವಣಿ ಇರಿಸಿರುವ ಪೊಲೀಸ್ ಠಾಣೆ/ಅಧಿಕೃತ ಕೋವಿ ಹಾಗೂ ಮದ್ದುಗುಂಡು ವ್ಯಾಪಾರಸ್ಥರಿಂದ ಹಿಂಪಡೆಯುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಆದೇಶಿಸಿದ್ದಾರೆ.
ಯಾವುದೇ ಮೆರವಣಿಗೆ, ಜಾತ್ರೆ ಇತ್ಯಾದಿಗಳಲ್ಲಿ ಶಸ್ತ್ರಾಸ್ತ್ರವನ್ನು ಒಯ್ಯಲು ಅವಕಾಶವಿಲ್ಲ. ಬೆಳೆಗಳ ರಕ್ಷಣೆಗಾಗಿ ಈ ಆಯುಧಗಳನ್ನು ಮಾತ್ರ ಬಳಸಬೇಕು. ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರವನ್ನು ಬಹಿರಂಗವಾಗಿ ಎಲ್ಲೂ ಪ್ರದರ್ಶಿಸುವಂತಿಲ್ಲ. ಸಾರ್ವಜನಿಕರನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆದರಿಸಲು ಶಸ್ತ್ರಾಸ್ತ್ರವನ್ನು ಬಳಸಬಾರದು. ಯಾವುದೇ ಸಂದರ್ಭದಲ್ಲಿ ಆವಶ್ಯವೆನಿಸಿದಲ್ಲಿ ಪೊಲೀಸ್ ಅಧಿಕಾರಿಗಳು/ ಸರಕಾರಿ ಅಧಿಕಾರಿಗಳಿಗೆ ತಪಾಸಣೆ ವೇಳೆ ಹಾಜರುಪಡಿಸಬೇಕು. ತಪಾಸಣೆಗೆ ಸಹಕರಿಸಿ ಪೂರಕ ದಾಖಲೆಗಳನ್ನು ಒದಗಿಸಬೇಕು. ಪರವಾನಿಗೆದಾರರು ಈ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಅಥವಾ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವುದು ಕಂಡುಬಂದಲ್ಲಿ ಶಸ್ತ್ರಾಸ್ತ್ರವನ್ನು ಯಾವುದೇ ಮುನ್ಸೂಚನೆ ನೀಡದೆ ವಶಪಡಿಸಿಕೊಳ್ಳಲಾಗುತ್ತದೆ. ನೀತಿ ಸಂಹಿತೆಯು ಜಾರಿಯಲ್ಲಿರುವ ಸಮಯದಲ್ಲಿ ಆಯುಧ ಪರವಾನಗಿದಾರರು ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಐಪಿಸಿ ಸೆಕ್ಷನ್ 188ರಂತೆ ಪ್ರಕರಣ ದಾಖಲಿಸಲು ಹಾಗೂ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದವರು ಆದೇಶದಲ್ಲಿ ತಿಳಿಸಿದ್ದಾರೆ.