ಸಂಡೂರು: ಪ್ರತಿ ಬಾರಿಗಿಂತ ಮಳೆ ಕಡಿಮೆಯಾಗಿದ್ದು ರೈತರಿಗಾಗಿ ಯಾವ ರೀತಿ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಜೆ.ಎಂ. ಅನ್ನದಾನಯ್ಯ ಪ್ರಶ್ನಿಸಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿ ಅವರಣದಲ್ಲಿ ತಾಪಂ ಅಧ್ಯಕ್ಷೆ ಫರ್ಜಾನ್ ಗೌಸ್ ಅಜಂ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆ ಚರ್ಚೆ ಸಂದರ್ಭದಲ್ಲಿ ಕೃಷಿ ಇಲಾಖೆ ವಿಷಯಗಳನ್ನು ಚರ್ಚಿಸಿದರು. ಇದಕ್ಕೆ ಸಹಾಯಕ ಕೃಷಿ ನಿರ್ದೇಶಕ ಕೆ. ನಾಗರಾಜ ಉತ್ತರಿಸಿ, ಒಟ್ಟು 29 ಮಿಮೀ ಮಳೆ ಕೊರತೆಯಾಗಿದೆ. ತೋರಣಗಲ್ಲು ಹೋಬಳಿಯಲ್ಲಿ ಮಳೆಯೇ ಆಗಿಲ್ಲ. ಈಗ ಸ್ವಲ್ಪ ಮಳೆಯಾಗುತ್ತಿದ್ದು ನವಣೆ ಮತ್ತು ಶೇಂಗ ಬಿತ್ತಲು ಸಲಹೆ ನೀಡಿದ್ದು ಅವರಿಗೆ ಬೇಕಾದ ಅನುಕೂಲಗಳನ್ನು ಮಾಡಿಕೊಡಲಾಗಿದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆ.ಎಂ. ಅನ್ನದಾನಯ್ಯ ಸ್ವಾಮಿ ಮಾತನಾಡಿ, ತಾಲೂಕಿನಾದ್ಯಂತ ಪ್ರಧಾನಮಂತ್ರಿ ಶ್ರಮಿಕ ಮಾನ್ ಧನ್ ಯೋಜನೆ ಜಾರಿಗೆ ತರಲಾಗಿದೆ. ಗ್ರಾಮ ಪಂಚಾಯಿತಿ ಹಂತದಲ್ಲಿ ಜಾಗೃತಿಯನ್ನುಂಟುಮಾಡಿ ಎಲ್ಲರೂ ಇದರ ಲಾಭ ಪಡೆಯಬೇಕೆಂದು ತಿಳಿಸಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಪ್ರಗತಿಯನ್ನು ಚರ್ಚಿಸಿ ಪ್ರಮುಖವಾಗಿ ರೈತರಿಗೆ ಜೇನು ಸಾಕಣಿಕೆ, ಮಹಿಳೆಯರಿಗೆ ತರಬೇತಿ ಕಾರ್ಯಕ್ರಮ, ಪಾಲಿಹೌಸ್ ನಿರ್ಮಾಣ, ಈರುಳ್ಳಿ ಸಂಗ್ರಹ ಘಟಕ, ಸಮಗ್ರ ತೋಟಗಾರಿಕೆ ಯೋಜನೆಯಲ್ಲಿ ಉದ್ಯೋಗ ಖಾತ್ರಿ ನೀಡುವುದು ಇತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಎನ್.ಕೆ. ವೆಂಕಟೇಶ್ ಮಾತನಾಡಿ, ತಾಲೂಕಿನ ಎಲ್ಲ ಎಸ್ಸಿ-ಎಸ್ಟಿ ವಸತಿ ನಿಲಯಗಳಿಗೆ ಈಗಾಗಲೇ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಪ್ರಕಟ ಮಾಡಿದ್ದು ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಸಹ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯಲ್ಲಿ ಪ್ರಮುಖವಾಗಿ ಫಾಗಿಂಗ ಮಾಡುವ ಕುರಿತು ಚರ್ಚಿಸಲಾಯಿತು. ಕಡ್ಡಾಯವಾಗಿ ಫಾಗಿಂಗ್ ಮಾಡಲು ಸೂಚಿಸಿದರು.
ಶಿಕ್ಷಣ ಇಲಾಖೆಯಲ್ಲಿ ಕೊರತೆಯಲ್ಲಿರುವ ಶಿಕ್ಷಕ ಹುದ್ದೆಗೆ, ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಂಡು ಉತ್ತಮ ಶಿಕ್ಷಣಕ್ಕೆ ಯೋಜನೆ ರೂಪಿಸಿದ ಬಗ್ಗೆ ಮಾಹಿತಿ ನೀಡಿದರು. ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿಯನ್ನು ಸಭೆಯಲ್ಲಿ ಚರ್ಚಿಸಲಾಯಿತು.