Advertisement

ಸರ್ಕಾರದ ಸವಲತ್ತು ಸದುಪಯೋಗಿಸಿಕೊಳ್ಳಿ

08:45 PM May 01, 2019 | Lakshmi GovindaRaj |

ಕೊಳ್ಳೇಗಾಲ: ಅಸಂಘಟಿತ ಕಾರ್ಮಿಕರ ಉದ್ಧಾರಕ್ಕಾಗಿ ಸರ್ಕಾರ ಕೈಗೊಳ್ಳುವ ಸವಲತ್ತುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿ ಸರ್ಕಾರದ ಸವಲತ್ತುಗಳು ಲಭಿಸುವಂತೆ ಮಾಡಬೇಕು ಎಂದು ತಾಲೂಕು ಮರಗೆಲಸ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀನಿವಾಸ್‌ ಒತ್ತಾಯಿಸಿದರು.

Advertisement

ನಗರದ ಮರಗೆಲಸ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ನೀಡುವ ಕೆಲವು ಸವಲತ್ತುಗಳು ಕಾರ್ಮಿಕರಿಗೆ ತಿಳಿಯದಂತೆ ಆಗಿದ್ದು, ಕಡ್ಡಾಯವಾಗಿ ಪ್ರತಿಯೊಬ್ಬರಿಗೂ ಸವಲತ್ತುಗಳ ಅರಿವು ಮೂಡಿಸುವ ಪ್ರಯತ್ನ ಆದಾಗ ಮಾತ್ರ ಅಸಂಘಟಿತ ಕಾರ್ಮಿಕರು ಸಂಘಟಿತರಾಗಲು ಸಾಧ್ಯ ಎಂದರು.

ಸರ್ಕಾರದಿಂದ ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ಯಾವುದೇ ಸೌಲಭ್ಯ ದೊರಯದೆ ವಂಚಿತರಾಗುತ್ತಿದ್ದು, ಅಂತಹ ಕಾರ್ಮಿಕರನ್ನು ಸರ್ಕಾರ ಗುರುತಿಸಿ ಅವರಿಗೂ ಸಹ ಸರ್ಕಾರದ ಸೌಲಭ್ಯಗಳು ದಕ್ಕುವಂತೆ ಮಾಡಿದಾಗ ಮಾತ್ರ ಕಾರ್ಮಿಕರ ದಿನಾಚರಣೆ ಸಾರ್ಥಕವಾಗಲಿದೆ ಎಂದು ತಿಳಿಸಿದರು.

ಕಾರ್ಮಿಕರ ದಿನಾಚರಣೆಯನ್ನು ಕಳೆದ 10 ವರ್ಷಗಳಿಂದ ಸಂಘದಿಂದ ಆಚರಿಸುತ್ತಾ ಬಂದಿದ್ದು, ಸಂಘದ ಸದಸ್ಯರು ನೀಡುವ ದೇಣಿಗೆಯಿಂದ ದಿನಾಚರಣೆಯನ್ನು ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಬಡಮಕ್ಕಳಿಗೆ ಉಚಿತ ಬಟ್ಟೆ, ಪುಸ್ತಕ ಮತ್ತು ಉಪಹಾರಗಳನ್ನು ನೀಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬಡವರಿಗೆ ಸವಲತ್ತುಗಳನ್ನು ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಮೆರವಣಿಗೆ: ನಗರದ ಉಮಾಶಂಕರ್‌ ಕಲ್ಯಾಣ ಮಂಟಪದ ಬಳಿ ಇರುವ ಮರಗೆಲಸ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಹೊರಟ ಮೆರವಣಿಗೆ ಬಸ್‌ ನಿಲ್ದಾಣ, ಡಾ. ವಿಷ್ಣುವರ್ಧನ್‌, ಡಾ. ರಾಜ್‌ಕುಮಾರ್‌, ಡಾ. ಬಿ.ಆರ್‌. ಅಂಬೇಡ್ಕರ್‌, ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ರಸ್ತೆ ಆರ್‌ಎಂಸಿ ಆವರಣದಲ್ಲಿ ಅಂತ್ಯಗೊಂಡಿತು.

Advertisement

ಬುದ್ಧಿಮಾಂದ್ಯ ಮಕ್ಕಳು: ಮೆರವಣಿಗೆ ಆರ್‌ಎಂಸಿಗೆ ಅಂತ್ಯಗೊಂಡ ಬಳಿಕ ಸಂಘದ ಪದಾಧಿಕಾರಿಗಳು ನಗರದ ಹೊರ ವಲಯದಲ್ಲಿರುವ ಕುರುಣಾಲಯ ಬುದ್ಧಿಮಾಂದ್ಯ ಮಕ್ಕಳಿಗೆ ಉಪಹಾರ ವಿತರಣೆ ಮಾಡಿ ಮಾನವೀಯತೆಯನ್ನು ಮೆರೆದರು.

ಸಂಘದ ಉಪಾದ್ಯಕ್ಷ ಉಮೇಶ್‌, ಕಾರ್ಯದರ್ಶಿ ರಾಜು, ಗೌರವಾದ್ಯಕ್ಷ ರಂಗಯ್ಯ, ಮುಖಂಡರಾದ ಪುಟ್ಟಸ್ವಾಮಿ, ಪಾಪಣ್ಣ, ರಮೇಶ್‌, ನಿಂಗರಾಜು, ಸಿದ್ದಪ್ಪಾಜಿ, ಚಂದ್ರಶೇಖರ್‌, ಕಾರ್ಮಿಕರ ಸಂಘದ ಯುವ ಘಟಕದ ಅಧ್ಯಕ್ಷ ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next