Advertisement

ತೆರಿಗೆ ವಿನಾಯಿತಿ ಲಾಭ ಪಡೆದುಕೊಳ್ಳಿ 

07:29 AM Mar 18, 2019 | Team Udayavani |

ಆದಾಯದಲ್ಲಿ ಕೊಂಚವಾದರೂ ಲಾಭ ಮಾಡಿಕೊಳ್ಳಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ದಾರಿ ತಿಳಿದಿರುವುದಿಲ್ಲ. ಇದರಿಂದಾಗಿ ಸುಮ್ಮನೆ ತೆರಿಗೆ ಕಟ್ಟಿ  ನಷ್ಟ ಮಾಡಿಕೊಳ್ಳುವವರು ಹಲವರಿದ್ದಾರೆ. ಬರುವ ಆದಾಯದಲ್ಲಿ ತೆರಿಗೆ ಉಳಿಸಲು ಹಲವು ದಾರಿಗ ಳಿವೆ. ಈ ಬಗ್ಗೆ ತಜ್ಞರಲ್ಲಿ ತಿಳಿದುಕೊಂಡು ಮುಂದುವರಿದರೆ ಸ್ವಲ್ಪ ಉಳಿತಾಯವೂ ಆಗುತ್ತದೆ. ತೆರಿಗೆ ನಷ್ಟದ ಭಯವೂ ಇರುವುದಿಲ್ಲ.

Advertisement

ತೆರಿಗೆ ಪಾವತಿ ಮಾಡುವ ನಾಗರಿಕನಿಗೆ ತೆರಿಗೆ ವಿನಾಯಿತಿ ಇದ್ದರೆ ಅದನ್ನು ತಿಳಿದುಕೊಳ್ಳುವ ಹಪಹಪಿ ಇರುತ್ತದೆ. ಯಾವ ಭಾಗದಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ ಎಂಬ ಬಗ್ಗೆ ಅರಿವು ಇದ್ದರೆ ಮಾತ್ರ ಇಂದಿನ ಕಾಲದಲ್ಲಿ ಒಂದಿಷ್ಟು ಉಳಿತಾಯ ಮಾಡಿಕೊಳ್ಳಲು ಸಾಧ್ಯ. ಬೇರೆ ಬೇರೆ ಭಾಗವಾಗಿ ತೆರಿಗೆ ಪಾವತಿ ಮಾಡುವವರಿಗೆ ತೆರಿಗೆ ವಿನಾಯಿತಿಗೆ ಹಲವು ರೀತಿಯಲ್ಲಿ ದಾರಿ ಇವೆ. ಆ ದಾರಿ ಯಾವುದು ಎಂಬ ಬಗ್ಗೆ ಅರಿವು ತೆರಿಗೆ ಪಾವತಿದಾರರಲ್ಲಿ ಜಾಗೃತವಾಗಿರಬೇಕು.

ಒಂದು ವೇಳೆ ಉದ್ಯೋಗಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿದರೆ ಆಗ ತೆರಿಗೆ ಲೆಕ್ಕಾಚಾರಗಳು, ಕಂಪೆನಿ ಯಾವ ರೀತಿಯ ವಸತಿ ಕೊಟ್ಟಿದೆ ಎನ್ನುವುದನ್ನು ಹಾಗೂ ನಿಮ್ಮ ವೇತನವನ್ನು ಅವಲಂಬಿಸಿರುತ್ತದೆ. ಆಗ ನೀವು ಎಚ್‌ಆರ್‌ಎ ಸೌಲಭ್ಯ ಪಡೆಯುವುದು ಉತ್ತಮವೇ ಅಥವಾ ಕಂಪೆನಿ ಕೊಡುವ ಫ್ಲ್ಯಾಟ್‌ ನಲ್ಲಿರುವುದು ಉತ್ತಮವೇ ಎಂದು ತೆರಿಗೆ ಸಲಹೆಗಾರರ ಬಳಿ ಚರ್ಚಿಸಿ ನಿರ್ಧರಿಸುವುದು ಸೂಕ್ತ.

ಮನೆಯೂ ತೆರಿಗೆ ಉಳಿಸುತ್ತೆ
ಸಂಬಳದ ಒಂದು ಭಾಗವಾಗಿ ಎಚ್‌ಆರ್‌ಎ ಪಡೆಯುತ್ತಿರುವ ನೌಕರರಾದರೆ ಮತ್ತು ನೀವು ವಾಸ ಮಾಡುವುದು ಬಾಡಿಗೆ ಮನೆಯಾಗಿದ್ದು, ಅದಕ್ಕೆ ಬಾಡಿಗೆಯನ್ನು ತೆರುತ್ತಿದ್ದರೆ ನೀವು ಎಚ್‌ಆರ್‌ಎ ಕ್ಲೈಮ್‌ ಮಾಡುವುದಕ್ಕೆ ಅರ್ಹತೆ ಪಡೆಯಲಿದ್ದೀರಿ. ಆದರೆ ಇಲ್ಲಿ ಕೆಲವು ನಿಬಂಧನೆಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕು.

ಉದ್ಯೋಗದಾತ ಸಂಸ್ಥೆಯಿಂದ ಪಡೆದ ನೈಜ ಎಚ್‌ಆರ್‌ಎ ಮೊತ್ತ, ಮೆಟ್ರೋ ಸಿಟಿಗಳಲ್ಲಿ ವಾಸ ಮಾಡುವವರಾದರೆ ವಾರ್ಷಿಕ ಸಂಬಳದ ಶೇ. 50, ಬೇರೆ ಕಡೆ ವಾಸ ಮಾಡುವವರಾದರೆ ಶೇ. 40, ವಾರ್ಷಿಕ ಸಂಬಳಕ್ಕಿಂತ ಶೇ. 10ರಷ್ಟು ಹೆಚ್ಚುವರಿಯಾಗಿ ವಾರ್ಷಿಕ ಮನೆ ಬಾಡಿಗೆ ಪಾವತಿ ಮಾಡಿದ್ದಲ್ಲಿ ಅಂತಹ ಮೊತ್ತ… ಈ ಮೂರರಲ್ಲಿ ಯಾವುದು ಕನಿಷ್ಠ ಮೊತ್ತವೋ ಅದು ಎಚ್‌ಆರ್‌ಎ ವ್ಯವಕಲನ ಮಾಡುವುದಕ್ಕೆ ಅರ್ಹತೆ ಪಡೆದಿರುತ್ತದೆ. ಈ ಮಧ್ಯೆ, ನೀವು ಸ್ವಂತ ಮನೆಯಲ್ಲಿದ್ದು, ಬಾಡಿಗೆ ಪಾವತಿ ಮಾಡುವವರು ಅಲ್ಲವಾದರೆ ನಿಮಗೆ ಸಿಗುವ ಪೂರ್ಣ ಎಚ್‌ ಆರ್‌ಎ ಮೊತ್ತ ತೆರಿಗೆ ಬದ್ಧವಾಗಿರುತ್ತದೆ.

Advertisement

ಪ್ರವಾಸ ಮಾಡಿ ತೆರಿಗೆ ಉಳಿಸಿ
ವಾರ್ಷಿಕ ರಜೆಯ ಕಾಲದಲ್ಲಿ ನೀವು ಕುಟುಂಬದ ಜತೆ ಭಾರತದಲ್ಲಿ ಪ್ರಯಾಣಿಸಿದಾಗ ತೆರಿಗೆ ಅನುಕೂಲ ಪಡೆಯಬಹುದು. ಆದರೆ ಹೊಟೇಲ್‌ ವೆಚ್ಚಗಳಿಗೆ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಬಿಲ್‌ಗ‌ಳನ್ನು ತೆಗೆದಿಟ್ಟುಕೊಳ್ಳಬಹುದು. ವೈದ್ಯಕೀಯ ವೆಚ್ಚಗಳು, ಟೆಲಿಫೋನ್‌ ವೆಚ್ಚ, ಡೇಟಾ ಖರ್ಚುಗಳಿಗೂ ಪಡೆಯುವ ವಾರ್ಷಿಕ 15,000 ರೂ. ತನಕ ಮರುಪಾವತಿಯ ಮೇಲೆ ತೆರಿಗೆ ವಿನಾಯಿತಿ ಇರುತ್ತದೆ. ಟೆಲಿಫೋನ್‌ ವೆಚ್ಚಗಳ ಮರುಪಾವತಿಗೆ ಗರಿಷ್ಠ ಮಿತಿ ಇರದಿದ್ದರೂ ಕಂಪೆನಿ ಅದನ್ನು ನಿರ್ಧರಿಸಬಹುದು. ಆಹಾರದ ವೋಚರ್‌ಗಳಿದ್ದರೆ ಶೇ. 50ರಷ್ಟು ಮೌಲ್ಯದ ತೆರಿಗೆ ವಿನಾಯಿತಿಯಿದೆ.

ಭವಿಷ್ಯನಿಧಿ
ಉದ್ಯೋಗಿಗಳು ಸೇವೆಯಲ್ಲಿ 5 ಅಥವಾ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನಂತರ ಭವಿಷ್ಯನಿಧಿ ಹಿಂತೆಗೆದರೆ ಆ ಮೊತ್ತಕ್ಕೆ ತೆರಿಗೆ ಇರುವುದಿಲ್ಲ. ಹೀಗಿದ್ದರೂ 5 ವರ್ಷ ಸೇವೆಗೆ ಮುನ್ನವೇ ಹಿಂತೆಗೆದರೆ ತೆರಿಗೆ ಅನ್ವಯವಾಗುತ್ತದೆ. ಆದರೆ ಅನಾರೋಗ್ಯ, ಉದ್ಯೋಗ ನಷ್ಟವಾಗಿದ್ದರೆ ಆಗ ಪಡೆಯುವ ಪಿಎಫ್‌ ಮೇಲೆ ತೆರಿಗೆ ವಿನಾಯಿತಿ ಇರುತ್ತದೆ. 5 ವರ್ಷಗಳ ಸೇವೆಯ ನಂತರ ಪಡೆಯುವ ಗ್ರಾಚ್ಯುಯಿಟಿ ತೆರಿಗೆ ಮುಕ್ತವಾಗಿರುತ್ತದೆ.

ವಿದ್ಯಾಭ್ಯಾಸ
ಒಂದು ವೇಳೆ ಉದ್ಯೋಗದಾತ ಸಂಸ್ಥೆ ತನ್ನ ನೌಕರರ ಮಕ್ಕಳಿಗೆ ವಿದ್ಯಾಭ್ಯಾಸದ ಅಲಯನ್ಸ್‌ ಕೊಡುತ್ತಿದ್ದಲ್ಲಿ ಅದರ ಬಾಬ್ತಿನಲ್ಲಿ ತಿಂಗಳಿಗೆ 100 ರೂ. ಗಳಂತೆ ವಾರ್ಷಿಕ 1,200 ರೂ. ಲೆಕ್ಕದಲ್ಲಿ ಎರಡು ಮಕ್ಕಳಿಗೆ ಒಟ್ಟು ಮೊತ್ತದಲ್ಲಿ ತೆರಿಗೆ ವಿನಾಯಿತಿ ಪಡೆಯುವುದಕ್ಕೆ ಅವಕಾಶವಿರುತ್ತದೆ. ಇದಕ್ಕೆ ಹೊರತಾಗಿ ಸೆಕ್ಷನ್‌ 80ಸಿ ಅಡಿಯಲ್ಲಿ ಮಕ್ಕಳ ಟ್ಯೂಷನ್‌ ಫೀ ಬಾಬ್ತು ತೆತ್ತಿರುವ ಮೊತ್ತಕ್ಕೆ ಸಿಗುವ ಪಠ್ಯೇತರ ವಿನಾಯಿತಿ ಕೂಡ ಇರಲಿದ್ದು ಅದಕ್ಕೆ ಯಾವುದೇ ಬಾಧಕವಾಗುವುದಿಲ್ಲ. 

ತೆರಿಗೆ ಉಳಿಸಲು ಹಲವು ಅವಕಾಶಗಳು
2019- 20 ವಿತ್ತ ವರ್ಷದಲ್ಲಿ ತೆರಿಗೆ ಉಳಿಸಲು  ಸಾಕಷ್ಟು ಅವಕಾಶಗಳಿವೆ. ಜೀವ ವಿಮೆ, ಪೋಸ್ಟ್‌ ಆಫೀಸ್‌, ಶಾಲಾ ಮಕ್ಕಳ ಶುಲ್ಕ, ಗೃಹ ಸಾಲದ ಅಸಲು ಎಲ್ಲ ಸೇರಿ 1,50,000 ರೂ, ಅಂತಾರಾಷ್ಟ್ರೀಯ ಪ್ರಾಯೋಗಿಕ ಸ್ಕೀಮ್‌ 50,000 ರೂ., ಆರೋಗ್ಯ ವಿಮೆ 50,000, ಗೃಹ ಸಾಲದ ಬಡ್ಡಿ – ಗರಿಷ್ಠ 2,00,000 ರೂ. ಒಟ್ಟಾರೆ ಮೇಲೆ ಹೇಳಿದ ಎಲ್ಲ ಉಳಿತಾಯದಿಂದ ನಿಮ್ಮ ಒಟ್ಟು ಆದಾಯ 5,00,000 ಅಥವಾ ಅದಕ್ಕಿಂತ ಕಡಿಮೆ ಇದ್ದ ರೆ ತೆರಿಗೆ ಬರುವುದಿಲ್ಲ.
– ಶಾಂತಾ ರಾಮ ಶೆಟ್ಟಿ, 
ಲೆಕ್ಕ ಪರಿಶೋಧಕರು, ಮಂಗಳೂರು

ಆರೋಗ್ಯ ರಕ್ಷಣೆ; ತೆರಿಗೆ ಲಾಭ
ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಸೆಕ್ಷನ್‌ 80ಡಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಸ್ವಂತ ಹಾಗೂ ಕುಟುಂಬದವರ ವಿಮೆಯ ಮೇಲೆ 25,000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು 25,000ರೂ. ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. 60 ದಾಟಿದ ಹಿರಿಯ ನಾಗರಿಕರಿಗೆ ಈ ಮಿತಿ 30,000 ರೂ. ಆಗಿರುತ್ತದೆ. ವಾರ್ಷಿಕಸ್ವಾಸ್ಥ್ಯ ತಪಾಸಣೆಗಾಗಿ 5,000 ರೂ. ಒಳಮಿತಿಯನ್ನು ಇದು ಹೊಂದಿರುತ್ತದೆ. 80 ವರ್ಷ ದಾಟಿದ ಅತಿ ಹಿರಿಯ ನಾಗರಿಕರು ವಿಮಾ ಪ್ರೀಮಿಯಂ ಕಟ್ಟದೆ ಇದ್ದಲ್ಲಿ ಈ ಮಿತಿಯನ್ನು ಸಂಪೂರ್ಣವಾಗಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು. ಅವಲಂಬಿತರ ಅಂಗವೈಕಲ್ಯದ ವೈದ್ಯಕೀಯ ತರಬೇತಿ ಮತ್ತು ಪುನರ್ವಸತಿಗಾಗಿ ಅಥವಾ ಪಾಲನೆಗಾಗಿ ತೆರಿಗೆ ವಿನಾಯಿತಿ ಸೌಲಭ್ಯ ನೀಡಲಾಗುತ್ತದೆ. ಶೇ. 40, 80ರಷ್ಟು ಅಂಗವೈಕಲ್ಯ ಇದ್ದರೆ ವಾರ್ಷಿಕ ಮಿತಿ 75,000 ಹಾಗೂ ಶೇ 80 ಮೀರಿದ ತೀವ್ರವಾದ ಅಂಗವೈಕಲ್ಯವಿದ್ದರೆ 1,25,000 ರೂ. ಆಗಿರುತ್ತದೆ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next