ಅದೊಂದು ಸಮೃದ್ಧವಾದ ಹಳ್ಳಿ. ಫಲವತ್ತಾದ ಭೂ ಪ್ರದೇಶ, ಪಕ್ಕದಲ್ಲೇ ಹರಿಯುವ ನದಿ, ಆ ಊರಿನ ಗ್ರಾಮ ದೇವತೆಯ ಆರಾಧಿಸುತ್ತ ಎಲ್ಲರೂ ಸುಖದಿಂದಲೇ ಇದ್ದರು. ಹೀಗಿರುವಾಗ ಮಳೆಗಾಲದ ಆರಂಭ. ಧೋ ಎಂದು ಮಳೆ ಸುರಿಯಲಾರಂಭಿಸಿತು. ಜೋರಾದ ಮಳೆಯಿಂದ ನದಿಯ ಹರಿವು ಹೆಚ್ಚಾಗಿ ಪ್ರವಾಹದ ರೂಪ ತಾಳಿತು. ಊರೊಳಗೆ ನೀರು ನುಗ್ಗಲಾರಂಭಿಸಿತು. ಜನರೆಲ್ಲ ಗಾಬರಿಯಿಂದ ಸುರಕ್ಷಿತ ಜಾಗಕ್ಕೆ ತೆರಳಲಾರಂಭಿಸಿದರು.
ಊರಿನ ಜನರೆಲ್ಲ ಸುರಕ್ಷಿತ ಜಾಗಕ್ಕೆ ತೆರಳುತ್ತಿದ್ದರೆ ದೇವಸ್ಥಾನ ಪೂಜಾರಿ ಮಾತ್ರ ಎಲ್ಲಿಗೂ ಹೋಗದೇ ದೇವರ ಪೂಜೆಯಲ್ಲಿ ನಿರತನಾದ. ಆಗ ಒಬ್ಬ ವ್ಯಕ್ತಿ ದೇವಸ್ಥಾನಕ್ಕೆ ಬಂದು ಪೂಜಾರಿ ಕೋಣೆಗೆ ಹೋಗಿ “ನದಿಯಲ್ಲಿ ಪ್ರವಾಹ ಹೆಚ್ಚಾಗಿ ನೀರು ಗ್ರಾಮಕ್ಕೆ ನುಗ್ಗಿದೆ. ದೇಗುಲವೂ ಇನ್ನೇನು ನೀರಲ್ಲಿ ಮುಳುಗಬಹುದು. ಆದುದರಿಂದ ನೀವು ನಮ್ಮೊಡನೆ ಸುರಕ್ಷಿತ ಜಾಗಕ್ಕೆ ಬರಬೇಕು’ ಎಂದು ವಿನಂತಿಸಿ ಕೊಳ್ಳುತ್ತಾನೆ. ಪೂಜಾರಿ ನಗುತ್ತಾ “ನೀವೆಲ್ಲ ನಾಸ್ತಿಕರು ನನಗೆ ದೇವರ ಮೇಲೆ ಸಂಪೂರ್ಣ ನಂಬಿಕೆ ಇದೆ. ನನ್ನನ್ನು ದೇವರು ಕಾಪಾಡುತ್ತಾನೆ. ನಾನು ಬರುವುದಿಲ್ಲ’ ಎಂದ.
ನಿಧಾನಕ್ಕೆ ನದಿಯಲ್ಲಿ ಪ್ರವಾಹ ಹೆಚ್ಚಾಗಿ ದೇಗುಲಕ್ಕೆ ನುಗ್ಗುತ್ತದೆ. ಆಗ ಪೂಜಾರಿ ಅಲ್ಲೇ ಇದ್ದ ಎತ್ತರದ ಮೇಜಿನ ಮೇಲೆ ನಿಲ್ಲುತ್ತಾನೆ. ಅದೇ ಸಮಯಕ್ಕೆ ದೇವಸ್ಥಾನದತ್ತ ಒಬ್ಬ ವ್ಯಕ್ತಿ ದೋಣಿಯಲ್ಲಿ ಬಂದು ಪೂಜಾರಿಯನ್ನು ದೋಣಿಯಲ್ಲಿ ಕುಳಿತುಕೊಳ್ಳಿ ಸುರಕ್ಷಿತ ಜಾಗಕ್ಕೆ ಕರೆದೊಯ್ಯುತ್ತೇನೆ ಎಂದು ಆಹ್ವಾನಿಸುತ್ತಾನೆ. ಮೊದಲಿನ ಕಾರಣವನ್ನೇ ನೀಡಿ ಪೂಜಾರಿ ಈ ಸಲವೂ ತಿರಸ್ಕರಿಸುತ್ತಾನೆ. ದೋಣಿ ಹೊರಡುತ್ತದೆ.
ಪ್ರವಾಹ ಇನ್ನೂ ಹೆಚ್ಚಾಗಿ ದೇವಸ್ಥಾನದ ಒಳಂಗಾಣವೆಲ್ಲ ನೀರು ತುಂಬಿತು.ಪೂಜಾರಿ ದೇವಸ್ಥಾನದ ಮಾಳಿಗೆ ಮೇಲೆ ನಿಂತು ಪ್ರಾರ್ಥನೆ ಮುಂದುವರಿಸುತ್ತಾನೆ. ಆಗ ಒಂದು ಹೆಲಿಕಾಪ್ಟರ್ ಬಂದು ಅಲ್ಲಿಂದ ವ್ಯಕ್ತಿಯೊಬ್ಬ ಮೆಲೇರಲು ಹಗ್ಗವನ್ನು ಇಳಿಯಬಿಡುತ್ತಾನೆ. ಆದರೆ ಪೂಜಾರಿ ಅದೇ ಕಾರಣವನ್ನೇ ನೀಡಿ ಅವನ ಕರೆಗೆ ಅಸಮ್ಮತಿ ಸೂಚಿಸುತ್ತಾನೆ. ಹೆಲಿಕಾಪ್ಟರ್ ಬೇರೆ ಜನರ ರಕ್ಷಣೆಗಾಗಿ ತೆರಳುತ್ತದೆ.
ಇತ್ತ ನೀರಿನ ಮಟ್ಟ ಹೆಚ್ಚಲಾರಂಬಿಸಿತು. ಪೂಜಾರಿ ಭಯಭೀತನಾಗಿ ಮೇಲೆ ನೋಡುತ್ತಾ ಓ ದೇವನೆ ನಾನು ನನ್ನ ಜೀವನದುದ್ದಕ್ಕೂ ನಿನ್ನನ್ನು ಆರಾಧಿಸಿದ್ದೇನೆ. ನಿನ್ನ ಮೇಲೆ ಅಪಾರ ನಂಬಿಕೆ ಇರಿಸಿದ್ದೇನೆ. ರಕ್ಷಿಸಲು ನೀನೇಕೆ ಬರಲಿಲ್ಲ ಎಂದು ಗೋಗರೆಯುತ್ತಾನೆ. ಆಗ ದೇವರ ಅಶ ರೀರ ವಾಣಿಯೊಂದು ಕೇಳುತ್ತದೆ. “ಓ ಮರುಳನೇ ನಾನು ನಿನ್ನ ಬಳಿಗೆ ಗ್ರಾಮಸ್ಥನಾಗಿ ಬಂದು ಸುರಕ್ಷಿತ ಜಾಗಕ್ಕೆ ಆಹ್ವಾನಿಸಿದೆ; ನೀನು ಬರಲಿಲ್ಲ. ಅನಂತರ ದೋಣಿಯಲ್ಲಿ ಮತ್ತು ಹೆಲಿಕಾಪ್ಟರ್‌ನಲ್ಲಿ ಬಂದೆ ಆಗಲೂ ನೀನು ನನ್ನನ್ನು ಗುರುತಿಸಲಿಲ್ಲ. ಇದು ನನ್ನ ತಪ್ಪೇ?’ ಎಂದು. ಆಗ ಪೂಜಾರಿ ತನ್ನ ತಪ್ಪಿಗಾಗಿ ಕ್ಷಮೆಯಾಚಿಸಿದ. ಸುರಕ್ಷಿತ ಜಾಗಕ್ಕೆ ತೆರಳು ಇನ್ನೊಂದು ಅವಕಾಶ ದೊರೆತಾಗ ಅದನ್ನು ಒಪ್ಪಿಕೊಂಡ.
ದೇವರು ಎನ್ನುವುದು ಒಂದು ಅಚಲ ನಂಬಿಕೆ. ನಂಬಿದವರನ್ನು ಆ ಒಂದು ಅಮೂರ್ತ ಶಕ್ತಿ ಎಂದಿಗೂ ಕೈಬಿಡುವುದಿಲ್ಲ. ಆದರೆ ದೇವರೆ ನೇರವಾಗಿ ಬಂದು ಸಹಾಯ ಮಾಡಲಿ ಎನ್ನುವುದು ಮೂರ್ಖತನ. ಹಾಗೆಯೇ ಜೀವನದಲ್ಲಿ ಮುಂದೆ ಬರಲು, ಸಾಧಿಸಲು ದೇವರಿಂದ ನಮಗೆ ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಆದರೆ ನಾವು ಅದ್ಯಾವುದರ ಸರಿಯಾದ ಮಾರ್ಗವಲ್ಲವೆಂದು ತಿರಸ್ಕರಿಸುತ್ತೇವೆ. ಕೊನೆಗೊಂದು ದಿನ ನನಗೆ ಸರಿಯಾದ ಅವಕಾಶಗಳು ಸಿಗಲಿಲ್ಲ, ನನ್ನ ಗ್ರಹಚಾರ ಸರಿ ಇಲ್ಲ ಎಂದು ದೂರುತ್ತೇವೆ. ಬಂದ ಅವಕಾಶಗಳ ಸದುಪ ಯೋಗ ಮಾಡಿಕೊಂಡರೆ ಜೀವನದಲ್ಲಿ ಯಶಸ್ವಿಯಾಗುತ್ತೇವೆ.
ನಾಗೇಂದ್ರ ಬಿ. ಹೂವಿನಹಡಗಲಿ, ಉದ್ಯೋಗಿ