ಆಳಂದ: ಬಡವರಿಗೆ, ನೊಂದು-ಬೆಂದವರಿಗೆ, ಶೋಷಿತರಿಗೆ ಮತ್ತು ಮಹಿಳೆಯರಿಗಾಗಿ ಇರುವ ಉಚಿತ ಕಾನೂನು ಸೇವಾ ಪ್ರಾಧಿಕಾರದ ಲಾಭ ಪಡೆದುಕೊಳ್ಳಬೇಕು ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಎಂ.ಸಿ. ನಾಡಗೌಡ ಹೇಳಿದರು.
ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿ ಸಂಘದ ಆಶ್ರಯದಲ್ಲಿ ಭಾರತ ಅಮೃತ ಮಹೋತ್ಸವ, ಕಾನೂನು ಸೇವೆಗಳ ಪ್ರಾಧಿಕಾರದ 25ನೇ ವರ್ಷದ ಆಚರಣೆ ಸಂಭ್ರಮ ಮತ್ತು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲರಿಗೂ ಒಂದೇ ನ್ಯಾಯ ದೊರಕುತ್ತದೆ. ಮಾನವ ಹಕ್ಕುಗಳ ವಂಚಿತರು, ಸರ್ಕಾರಿ ಸೌಲಭ್ಯಗಳಿಂದ ವಂಚಿತರು ಮತ್ತು ದೌರ್ಜನ್ಯ ಹಾಗೂ ಬಲತ್ಕಾರಕ್ಕೆ ಒಳಗಾದ ಬಡವರಿಗೆ ಉಚಿತ ಕಾನೂನು ಸೇವೆಯಿಂದ ನ್ಯಾಯ ಒದಗಿಸುವ ಕೆಲಸ ನಡೆಯುತ್ತಿದೆ ಎಂದರು.
ಉಪನ್ಯಾಸಕರಾಗಿದ್ದ ನ್ಯಾಯವಾದಿ ದೇವಾನಂದ ಹೋದಲೂರಕರ್ ಕಾನೂನು ಸೇವಾ ದಿನಗಳ ಕುರಿತು ಮಾತನಾಡಿ, ಬ್ರಿಟಿಷರ್ ಕೈಗೊಂಬೆಯಾಗಿದ್ದ ಭಾರತೀಯ ಪ್ರಜೆಗಳಿಗೆ ದೇಶ ಸ್ವಾತಂತ್ರ್ಯವಾದ ಮೇಲೆ ಜಾರಿಗೆ ಬಂದ ಸಂವಿಧಾನದಂತೆ ಎಲ್ಲರಿಗೂ ಒಂದೇ ಕಾನೂನು, ಒಂದೆ ಮತದಾನದ ಹಕ್ಕು ದೊರಕಿದೆ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದ್ರಕಾಂತ, ಸರ್ಕಾರಿ ವಕೀಲ ಶುಭಶ್ರೀ ಬಡಿಗೇರ, ಜ್ಯೋತಿ ವಿ. ಬಂದಿ ಮುಖ್ಯ ಅತಿಥಿಗಳಾಗಿದ್ದರು. ಕಾನೂನು ಸೇವೆಗಳ ಉಪಯುಕ್ತತೆ ಕುರಿತು ನ್ಯಾಯವಾದಿ ಎ.ಸಿ. ತೋಳೆ ಉಪನ್ಯಾಸ ನೀಡಿದರು. ಹಿರಿಯ ನ್ಯಾಯವಾದಿ ಬಿ.ಎ. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಬಿ.ಜಿ. ಬೀಳಗಿ, ದೀಪಾರಾಣಿ ಕುಲಕರ್ಣಿ, ಬಿ.ಟಿ. ಸಿಂಧೆ, ಕೆ. ಮಲ್ಲಿಕಾರ್ಜುನ, ಯು.ಕೆ. ಇನಾಮದಾರ, ಕಂದಾಯ ನಿರೀಕ್ಷಕ ಶರಣು ಹಕ್ಕಿ, ನಾಗೇಂದ್ರ, ಎಂ.ಕೆ. ಗೋವಿನ್ ಹಾಗೂ ಕಕ್ಷಿದಾರರು ಇದ್ದರು. ನ್ಯಾಯವಾದಿ ಶಿವಶಂಕರ ಮುನ್ನೊಳ್ಳಿ ನಿರೂಪಿಸಿದರು. ಬಿ.ಎಸ್. ನಿಂಬರಗಿ ವಂದಿಸಿದರು.